13ನೇ ವರ್ಷದ ಅಮರ್ ಅಕ್ಬರ್ ಅಂತೋನಿ ಟ್ರೋಫಿಗೆ ಸಿಗುತ್ತಿದೆ ಚಾಲನೆ

0

ಡಿ.19-24:ಕಿಲ್ಲೆ ಮೈದಾನದಲ್ಲಿ ಕ್ರಿಕೆಟ್ ಪ್ರಿಯರಿಗೆ ರಸದೌತಣ

ಪುತ್ತೂರು: ಜಾತಿ-ಜಾತಿ ಮಧ್ಯೆ ಸೌಹಾರ್ದತೆಯ ಸಾಮರಸ್ಯ ಮೂಡಿಸುವ ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ-2023 ಡಿ.19 ರಿಂದ 24ರ ತನಕ ಆರು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಜರಗಲಿದ್ದು, ಕ್ರೀಡಾಕೂಟವು ಕ್ರಿಕೆಟ್ ಪ್ರಿಯರಿಗೆ ರಸದೌತಣವನ್ನು ಒದಗಿಸಲಿದೆ.


ಸಿಟಿ ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಯ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಅಬುದಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ, ತುಳುನಾಡು ಫ್ರೆಂಡ್ಸ್ ಸೌದಿ ಅರೇಬಿಯಾ ಇವುಗಳ ಜಂಟಿ ಆಶ್ರಯದಲ್ಲಿ ಜರಗಲಿರುವ 11 ಜನರ ಅಂಡರ್ ಆರ್ಮ್ ಈ ಕ್ರಿಕೆಟ್ ಪಂದ್ಯಾಟಕ್ಕೆ ಪ್ರಸ್ತುತ 13ನೇ ವರ್ಷವಾಗಿದೆ. ರಝಾಕ್ ಬಿ.ಎಚ್ ನೇತೃತ್ವದಲ್ಲಿ ನಡೆಯುವ ಈ ಕ್ರಿಕೆಟ್ ಪಂದ್ಯಾಟ ಬರೋಬ್ಬರಿ ಆರು ದಿನಗಳ ಕಾಲ ಖ್ಯಾತ ಕ್ರಿಕೆಟ್ ತಂಡಗಳ ಹೊಡಿಬಡಿ ಆಟದ ಕಾವು ಕಿಲ್ಲೆ ಮೈದಾನದಲ್ಲಿ ರಂಗೇರಲಿದೆ. ಒಂದು ತಿಂಗಳ ಹಿಂದೆ ಸೌದಿ ಅರೇಬಿಯಾದಲ್ಲೂ ಅಮರ್ ಅಕ್ಬರ್ ಅಂತೋನಿ ಹೆಸರಿನಲ್ಲಿ ಯಶಸ್ವಿಯಾಗಿ ಅಹರ್ನಿಶಿ ಪಂದ್ಯಾಟ ಜರಗಿತ್ತು.


ಈ ಕ್ರೀಡಾಕೂಟದಲ್ಲಿ ಪುತ್ತೂರಿನ ವೈದ್ಯರುಗಳು, ಪೊಲೀಸ್ ಇಲಾಖೆ, ವಕೀಲರು, ಮೆಸ್ಕಾಂ ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಪತ್ರಕರ್ತರು, ವರ್ತಕರು ಭಾಗವಹಿಸುತ್ತಿದ್ದಾರೆ. ಆಯ್ದ ಕ್ರಿಕೆಟ್ ತಂಡಗಳು ಪ್ರಶಸ್ತಿ ಜಯಿಸುವ ನಿಟ್ಟಿನಲ್ಲಿ ಈಗಾಗಲೇ ತಮ್ಮ ಅಭ್ಯಾಸವನ್ನು ಆರಂಭಿಸಿ ಪಂದ್ಯಾವಳಿಯ ಆರಂಭಕ್ಕೆ ಕ್ಷಣಗಣನೆಯನ್ನು ಎದುರಿಸುತ್ತಿವೆ ಮಾತ್ರವಲ್ಲ ಈ ಕ್ರೀಡಾಕೂಟ ರಾಜ್ಯಮಟ್ಟದಲ್ಲಿಯೇ ಅತ್ಯಂತ ಯಶಸ್ವಿ ಪಡೆದ ಕ್ರೀಡಾಕೂಟ ಎಂಬ ಪ್ರಶಸ್ತಿ ಕೂಡ ಬಂದಿರುವುದು ಇದರ ವೈಭವಕ್ಕೆ ಸಾಕ್ಷಿಯಾಗಿದೆ.


ಪಂದ್ಯಾಕೂಟದಲ್ಲಿ ಹಳ್ಳಿ ಹುಡುಗ್ರು ಪೇಟೆ ಕಪ್ ಹೆಸರಿನಲ್ಲಿ 60 ತಂಡಗಳು, ಅಮರ್ ಅಕ್ಬರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಗೆ 24 ತಂಡಗಳು, ಸ್ನೇಹ ಸೌಹಾರ್ದ ಟ್ರೋಫಿ ಹೆಸರಿನಲ್ಲಿ ವಿವಿಧ ಇಲಾಖೆಗಳ 12 ಕ್ರಿಕೆಟ್ ತಂಡಗಳು, ಕಿಲ್ಲೆ ಕಪ್‌ನಲ್ಲಿ 4 ತಂಡಗಳು ಹಣಾಹಣಿ ನಡೆಸಲಿದೆ.ವಿಶೇಷ ಆಕರ್ಷಣೆಯಾಗಿ ತುಳು ರಂಗಭೂಮಿಯ ನಾಟಕ ತಂಡದ ಹೆಸರಾಂತ ಕಲಾವಿದರು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here