ಭಜನೆ ಮನಸ್ಸು ಶುದ್ಧೀಕರಣಗೊಳಿಸುತ್ತದೆ-ಭಾಗೀರಥಿ ಮುರುಳ್ಯ
ದೇವರ ಸಂಕೀರ್ತನೆಯಿಂದ ಭಕ್ತಿಯ ವ್ಯಕ್ತಿತ್ವ ಮೂಡುತ್ತದೆ-ಗಣರಾಜ್ ಕುಂಬ್ಳೆ
ನಗರ ಭಜನೆಯಿಂದ ಮನೆಗಳೂ ಶುಭ್ರಗೊಳ್ಳುತ್ತವೆ-ಅಜಿತ್ ಪಾಲೇರಿ
ನೆಲ್ಯಾಡಿ: ಶ್ರೀ ಷಣ್ಮುಖ ಭಜನಾ ಮಂಡಳಿ ಪೆರ್ಲ-ಆಲಂತಾಯ ಇದರ ವತಿಯಿಂದ ಸಂಸ್ಕಾರ, ಸಂಘಟನೆ, ಕಲೆ, ಕ್ರೀಡೆ, ಸೇವೆ ಎಂಬ ಧ್ಯೇಯದೊಂದಿಗೆ ಡಿ.9ರಿಂದ 17ರ ತನಕ ನಡೆದ 2ನೇ ವರ್ಷದ ಮನೆ-ಮನೆಗೆ ಭಜಕ ನಡಿಗೆ ಕಾರ್ಯಕ್ರಮದ ಮಂಗಳೋತ್ಸವ, ಪ್ರಥಮ ವಾರ್ಷಿಕೋತ್ಸವ ಮತ್ತು ಗ್ರಾಮೀಣ ಕ್ರೀಡೋತ್ಸವ ’ಭಜಕ ಸಂಭ್ರಮ 2023’ ಡಿ.17ರಂದು ಸಂಜೆ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಆಧುನಿಕ ಕಾಲದಲ್ಲಿ ಭಜನೆ ಮರೆಯಾಗುತ್ತಿದೆ. ಆಲಂತಾಯದಲ್ಲಿ ಭಜನೆ ಉಳಿಸುವ ಕೆಲಸ ಆಗಿದೆ. ಹಿಂದಿನ ಕೂಡುಕುಟುಂಬ, ಅವಿಭಕ್ತ ಕುಟುಂಬದ ಮನೆಯಲ್ಲಿ ಪ್ರತಿದಿನವೂ ಭಜನೆ ನಡೆಯುತಿತ್ತು. ಆದರೆ ಈಗ ಭಜನೆಯ ಸದ್ದು ಕೇಳುವುದು ಕಡಿಮೆಯಾಗಿದೆ. ಭಜನೆಯಿಂದ ಮನಸ್ಸೂ ಶುದ್ಧೀಕರಣಗೊಳ್ಳುತ್ತದೆ ಎಂದರು.
ಅರಿವಿನ ವಿಚಾರಧಾರೆ ’ ಭಕ್ತಿತ್ವ-ವ್ಯಕ್ತಿತ್ವ’ದ ಕುರಿತು ಮಾತನಾಡಿದ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆಯವರು, ಭಜನೆಯ ಹಾಡು ಭಕ್ತಿ,ಸಂಸ್ಕಾರ ಮೂಡಿಸುತ್ತದೆ. ಭಕ್ತಿಪೂರ್ವಕ ವ್ಯಕ್ತಿತ್ವ ಬಂದಾಗ ವಿಭಜನೆ ಆಗುವುದಿಲ್ಲ ಎಂದು ಹೇಳಿದ ಅವರು, ಡಿ.ಜೆ.ಯೊಂದಿಗೆ ಕುಣಿಯುವುದು ಭಾರತೀಯ ಸಂಸ್ಕೃತಿ ಅಲ್ಲ, ದೇವರ ಸಂಕೀರ್ತನೆಯೊಂದಿಗೆ ಮೆರವಣಿಗೆ ನಡೆಯಬೇಕು. ಇದರಿಂದ ಭಕ್ತಿಯ ವ್ಯಕ್ತಿತ್ವ ಮೂಡುತ್ತದೆ. ಭಕ್ತಿಯನ್ನು ಪ್ರದರ್ಶಿಸುತ್ತಾ ಹೋದಂತೆ ವ್ಯಕ್ತಿತ್ವವೂ ಬದಲಾಗುತ್ತದೆ ಎಂದರು. ಅತಿಥಿಯಾಗಿದ್ದ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಅಜಿತ್ಕುಮಾರ್ ಪಾಲೇರಿ ಮಾತನಾಡಿ, ನಗರ ಮನೆಯಿಂದ ಮನೆಗಳು ಶುಭ್ರಗೊಳ್ಳುತ್ತವೆ ಹಾಗೂ ಆ ಮನೆಗೆ ಸತ್ಯನಾರಾಯಣ ಪೂಜೆ, ಗಣಹೋಮ ಮಾಡಿದ ಫಲ ಪ್ರಾಪ್ತಿಯಾಗುತ್ತದೆ. ಷಣ್ಮುಖ ಭಜನಾ ಮಂಡಳಿ ಇನ್ನಷ್ಟೂ ಬೆಳೆಯಲಿ ಎಂದರು.
ಸನ್ಮಾನ:
ಭಜನೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಅಚ್ಚುತ ನಾಯ್ಕ್, ಜನಾರ್ದನ ಗೌಡ ಬರಮೇಲು, ರಮೇಶ್ ಪೆರ್ಲ, ದಿನೇಶ್ ಬಾಂಕೋಡು, ಕುಶಾಲಪ್ಪ ಗೌಡ ಮುರಿಯೇಲು, ಜನಾರ್ದನ ಪೂಜಾರಿ ಮುರಿಯೇಲು, ಅಜಿತ್ಕುಮಾರ್ ಪಾಲೇರಿ ಅವರಿಗೆ ಶಾಲುಹಾಕಿ, ಪ್ರಸಾದ ನೀಡಿ ಗೌರವಿಸಲಾಯಿತು. ಭಜನಾ ತರಬೇತುದಾರ ಹರೀಶ್ ನೆರಿಯ ಅವರನ್ನು ಭಜನಾ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅತೀ ಹೆಚ್ಚು ದಿನ ಭಜನೆಯಲ್ಲಿ ಪಾಲ್ಗೊಂಡವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ಗ್ರಾಮೀಣ ಕ್ರೀಡೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಂಗನವಾಡಿ ಕಾರ್ಯಕರ್ತೆ ರೀತಾಕ್ಷಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಸವಿತಾ ಗೌಡ, ಷಣ್ಮುಖ ಭಜನಾ ಮಂಡಳಿ ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ ಪೆರ್ಲ, ಶ್ರೀ ಕ್ಷೇ.ಧ.ಗ್ರಾ.ಯೋ.ಗೋಳಿತ್ತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ಗೋಳಿತ್ತೊಟ್ಟು ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ, ಶಿವಾರು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಅಧ್ಯಕ್ಷ, ಸಿವಿಲ್ ಇಂಜಿನಿಯರ್ ಮನೋಹರ ಗೌಡ ಕೊಳೆಂಜಿರೋಡಿ, ಕೊರಗಪ್ಪ ಮುಗೇರ ಚಂದ್ರಕಟ್ಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಷಣ್ಮುಖ ಭಜನಾ ಮಂಡಳಿ ಪೆರ್ಲ-ಆಲಂತಾಯ ಇದರ ಅಧ್ಯಕ್ಷ ರಮೇಶ್ ಪೆರ್ಲ ಸ್ವಾಗತಿಸಿದರು. ಕಾರ್ಯದರ್ಶಿ ಕೀರ್ತಿ ವರದಿ ವಾಚಿಸಿದರು. ಭಜನಾ ತರಬೇತುದಾರ ಹರೀಶ್ ನೆರಿಯ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಸೇನಾಧಿಕಾರಿ, ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ| ಬ್ರಿಜೇಶ್ ಚೌಟ ಅವರು ಭೇಟಿ ನೀಡಿ ಶುಭಹಾರೈಸಿದರು.
ವಿವಿಧ ತಂಡಗಳಿಂದ ಭಜನೆ:
ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ, ಶ್ರೀ ಮಾತಾ ಮಹಿಳಾ ಭಜನಾ ತಂಡ, ಕೊಣಾಲು ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ತಂಡ, ಕೊಣಾಲು ಪಾಂಡಿಬೆಟ್ಟು ಶ್ರೀ ಶಿವಗಿರಿ ಅಯ್ಯಪ್ಪ ಸೇವಾ ಸಂಘ, ಶಿವಾರು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಶಾಂತಿನಗರ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ಪೊರೋಳಿ ಅಯೋಧ್ಯನಗರ ಶ್ರೀರಾಮ ಭಜನಾ ಮಂಡಳಿ, ಹಾರ್ಪಳ ಶ್ರೀ ಶಾಸ್ತಾರೇಶ್ವರ ಭಜನಾ ಮಂಡಳಿ, ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಭಜನಾ ಮಂಡಳಿ, ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮದಲ್ಲಿ ಸಹಕರಿಸಿದರು.