ನಿಡ್ಪಳ್ಳಿ; ಇಲ್ಲಿಯ ಗ್ರಾಮ ಪಂಚಾಯತಿನಲ್ಲಿ ಮಹಿಳಾ ಗ್ರಾಮ ಸಭೆ ಡಿ.19 ರಂದು ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುರಳಿ ಪೌಷ್ಟಿಕತೆ ಮತ್ತು ಮಹಿಳೆಯರ ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಬೆಟ್ಟಂಪಾಡಿ ಕ್ಲಸ್ಟರ್ ಸಿ.ಅರ್.ಪಿ ಪರಮೇಶ್ವರಿ ಮಹಿಳೆಯರು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸರಕಾರ ನೀಡಿದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಲಯ ಮೆಲ್ವೀಚಾರಕಿ ಜಲಜಾಕ್ಷಿ ಮಾತನಾಡಿ ಇಲಾಖೆಯಿಂದ ಮಹಿಳೆಯರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಅದರ ಬಗ್ಗೆ ನಿರಾಸಕ್ತಿ ತಾಳದೆ ಅದನ್ನು ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ ಮಹಿಳೆಯರು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅಸಡ್ಡೆ ತೋರದೆ ಅದನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದುವಂತೆ ಹೇಳಿದರು.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾಲ್ಗೊಂಡು ಅದರ ಉಪಯೋಗ ಪಡೆದು ಕೊಳ್ಳುವಂತೆ ಹೇಳಿದರು.
ಪಂಚಾಯತ್ ಸದಸ್ಯೆ ನಂದಿನಿ ಅರ್.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಸಂಧ್ಯಾಲಕ್ಷ್ಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಮಹಿಳೆಯರಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿಯನ್ನು ಸಂಜೀವಿನಿ ಒಕ್ಕೂಟದ ಭವ್ಯಾ.ಸಿ.ಎಚ್ ಓದಿದರು.ಸಂಜೀವಿನಿ ಒಕ್ಕೂಟದ ಭಾರತಿ ಸಿ ವಂದಿಸಿದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆರೋಗ್ಯ ಕಾರ್ಯಕರ್ತೆ ಕುಸುಮಾವತಿ ಎ.ವಿ, ಆರೋಗ್ಯ ಇಲಾಖೆಯ ಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಸದಸ್ಯರು ಹಾಗೂ ಮಹಿಳೆಯರು ಪಾಲ್ಗೊಂಡರು.