ರೈತರ ಪಾಲಿಗೆ ಮಂಗಳಕರವಾದ ಮಂಗಳವಾರ-ನಿರೀಕ್ಷೆಗೂ ಮೀರಿ ಜಮೆಯಾದ ಸರಕಾರದ ಬೆಳೆವಿಮೆ ಮೊತ್ತ

0

ಪುತ್ತೂರು: ಹವಾಮಾನ ಆಧಾರಿತ ಬೆಳೆವಿಮೆ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ ಎಂಬ ಪುತ್ತೂರಿನ ಕೃಷಿಕರ ಕೂಗಿನ ನಡುವೆ ಡಿ.19ರಂದು ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಬೆಳೆವಿಮೆ ಮೊತ್ತ ಜಮೆಯಾಗಿದ್ದು ರೈತರ ಪಾಲಿಗೆ ಮಂಗಳವಾರ ಮಂಗಳಕರವಾಗಿ ಪರಿಣಮಿಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಬೆಳೆವಿಮೆ ನೀಡಲಾಗಿದೆ. ಆದರೆ ಈ ಭಾಗದ ರೈತರಿಗೆ ಬೆಳೆವಿಮೆ ಇನ್ನೂ ಪಾವತಿಯಾಗಿಲ್ಲ ಎಂಬ ಆರೋಪದ ಬೆನ್ನಲ್ಲೆ ಪುತ್ತೂರು ಶಾಸಕ ಆಶೊಕ್‌ ಕುಮಾರ್‌ ರೈ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದು ಶೀಘ್ರ ಬೆಳೆವಿಮೆ ಪಾವತಿಸುವಂತೆ ಆಗ್ರಹಿಸಿದ್ದರು. ಸರಕಾರ ಕೊಟ್ಟ ಭರವಸೆಯಂತೆ ಒಂದು ವಾರದಲ್ಲಿ ಬೆಳೆವಿಮೆಯನ್ನು ಬಿಡುಗಡೆ ಮಾಡಿದ್ದು, ಕೃಷಿಕರ ಖಾತೆಗೆ ನಿರೀಕ್ಷೆಗೂ ಮೀರಿ ಹಣ ಜಮೆಯಾಗಿದೆ.

ಹವಾಮಾನ ವೈಪರಿತ್ಯ ಸೇರಿದಂತೆ ಇನ್ನಿತರ ಕಾರಣಗಳಿಗೆ ರೈತರು ಬೆಳೆನಷ್ಟ ಅನುಭವಿಸಿದ್ದರೆ ಸರಕಾರದಿಂದ ಹವಾಮಾನ ಆಧಾರಿತ ಬೆಳೆವಿಮೆಯಿಂದ ಪರಿಹಾರವನ್ನು ಒದಗಿಸಲಾಗುತ್ತದೆ. ಅಡಿಕೆ ಹವಾಮಾನ ಆಧಾರಿತ ವಿಮೆಗೆ ಒಳಪಟ್ಟಿದ್ದು, ಕಾಳುಮೆಣಸು ಬೆಳೆವಿಮೆ ವ್ಯಾಪ್ತಿಗೆ ಒಳಪಟ್ಟಿದೆ. ಹೆಕ್ಟರೊಂದಕ್ಕೆ 6 ಸಾವಿರದಂತೆ ಕೃಷಿಕರು ವಿಮಾ ಮೊತ್ತವನ್ನು ಪಾವತಿಸಿದ್ದು ಈ ಬಾರಿ ದುಪ್ಪಟ್ಟು ವಿಮೆ ಮಂಜೂರಾಗಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ. ಶಾಸಕರು ನುಡಿದಂತೆ ನಡೆದು ನಮಗೆ ವಿಮೆ ಹಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವಿಚಾರದಲ್ಲಿ ನಾನು ಅವರನ್ನು ಅಭಿನಂದಿಸುವುದಾಗಿ ಹಿರಿಯ ಕೃಷಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಹವಾಮಾನ ಆಧಾರಿತ ಬೆಳೆವಿಮೆಯು ಪುತ್ತೂರು ತಾಲೂಕಿನ ಕೃಷಿಕರಿಗೆ ದೊರಕಿರಲಿಲ್ಲ. ಈ ಭಾಗದ ಕೃಷಿಕರು ಈ ವಿಚಾರವನ್ನು ನನ್ನ ಗಮನಕ್ಕೆ ತಂದಾಗ ಅಧಿವೇಶನದಲ್ಲಿ ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದು ಸೂಕ್ತಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೆ. ಮಾತ್ರವಲ್ಲದೆ, ಅಡಿಕೆ ಎಲೆಚುಕ್ಕಿ ರೋಗಕ್ಕೂ ಪರಿಹಾರಕೊಡಬೇಕೆಂದು ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸರಕಾರ ಪರಿಹಾರ ನೀಡಬಹುದು ಅಥವಾ ಔಷಧಿಯನ್ನಾದರೂ ಕಂಡುಹಿಡಿಯಬಹುದು ಎಂಬ ವಿಶ್ವಾಸ ನನಗಿದೆ. ಒಂದು ವಾರದಲ್ಲಿ ವಿಮೆ ಪರಿಹಾರವನ್ನು ನೀಡುವುದಾಗಿ ಸಚಿವರು ಭರವಸೆ ನೀಡಿದಂತೆ ಡಿ.19ರಂದು ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೃಷಿಕರ ಖಾತೆಗೆ ವಿಮೆ ಹಣ ಪಾವತಿಯಾಗಿದೆ. ಇದು ಕೃಷಿಕರಿಗೆ ಸಂತಸ ತಂದಿದೆ. ಕೃಷಿಕರು ಸಮೃದ್ಧರಾದರೆ ಎಲ್ಲರಿಗೂ ಸಂತೋಷ ಎಂದು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದ್ದಾರೆ.

LEAVE A REPLY

Please enter your comment!
Please enter your name here