ಉಪ್ಪಿನಂಗಡಿ: ರಜೆ ಕಾರಣ ನೀಡಿ ರೋಗಿಗಳನ್ನು ವಾಪಸ್ ಕಳುಹಿಸಿದ ಆಸ್ಪತ್ರೆ ಸಿಬ್ಬಂದಿ: ಆರೋಪ

0

ಉಪ್ಪಿನಂಗಡಿ: ನಾಲ್ಕನೇ ಶನಿವಾರ ಎಂಬ ಕಾರಣ ನೀಡಿ ವೈದ್ಯರೆಲ್ಲಾ ರಜೆಯಲ್ಲಿದ್ದಾರೆ. ಆದಿತ್ಯವಾರ, ಸೋಮವಾರದ ಕ್ರಿಸ್‌ಮಸ್ ರಜೆಯನ್ನು ಕಳೆದು ಮಂಗಳವಾರದಂದು ಬನ್ನಿ ಎಂದು ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ರೋಗಿಗಳನ್ನು ವಾಪಸ್ ಕಳುಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.


ಇಲ್ಲಿನ ಉಪಹಾರ ಹಾಗೂ ಪಾನೀಯ ಮಾರಾಟ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉತ್ತರ ಭಾರತೀಯ ಕಾರ್ಮಿಕರಾದ ಶಮೀಮ್ ಹಾಗೂ ರಹೀಂ ಎಂಬಿಬ್ಬರು ಜ್ವರದಿಂದ ಬಳಲುತ್ತಿದ್ದು, ಅವರನ್ನು ಶುಕ್ರವಾರದಂದು ರಾತ್ರಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಔಷಧವನ್ನು ಪಡೆದುಕೊಳ್ಳಲಾಗಿತ್ತು. ಈ ವೇಳೆ ಜ್ವರ ಇಳಿಮುಖವಾಗದಿದ್ದರೆ, ಶನಿವಾರ ಬಂದು ರಕ್ತಪರೀಕ್ಷೆ ಮಾಡಿಸಬೇಕೆಂದು ಸೂಚಿಸಲಾಗಿತ್ತು. ಅದರಂತೆ ಶನಿವಾರವೂ ಜ್ವರ ಯಥಾ ಸ್ಥಿತಿಯಲ್ಲಿ ಮುಂದುವರೆದಾಗ ಕಾರ್ಮಿಕರನ್ನು ರಕ್ತ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅಲ್ಲಿನ ಸಿಬ್ಬಂದಿಗಳು ಇವತ್ತು ನಾಲ್ಕನೇ ಶನಿವಾರ, ನಾಳೆ ಆದಿತ್ಯವಾರ, ನಾಡಿದ್ದು ಕ್ರಿಸ್ಮಸ್ ಇರುವುದರಿಂದ ವೈದ್ಯರುಗಳಿಲ್ಲ. ನೀವು ಮಂಗಳವಾರ ಬಂದು ರಕ್ತಪರೀಕ್ಷೆ ಮಾಡಿಸಿ ಎಂದು ತಿಳಿಸಿದ್ದಾರೆ ಎಂದು ಆಪಾದಿಸಲಾಗಿದೆ. ಪ್ರಕರಣದ ಬಗ್ಗೆ ಸಂತ್ರಸ್ತರು ಕ್ಷೇತ್ರದ ಶಾಸಕರಲ್ಲಿ ಹಾಗೂ ಮಾಧ್ಯಮ ಪ್ರತಿನಿಧಿಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.


ಪ್ರಕರಣದ ಬಗ್ಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿದಾಗ , ಘಟನೆಯ ಬಗ್ಗೆ ವಿಚಾರಿಸಲಾಗಿದೆ. ಲ್ಯಾಬ್ ಟೆಕ್ನಿಷಿಯನ್ ಅನಾರೋಗ್ಯದ ಕಾರಣ ನೀಡಿ ರಜೆಯನ್ನು ಪಡೆದಿರುತ್ತಾರೆ. ಆರೋಗ್ಯ ಇಲಾಖೆಗೆ ಎರಡನೇ ಶನಿವಾರ, ನಾಲ್ಕನೇ ಶನಿವಾರ ಎಂದು ರಜೆ ಇರುವುದಿಲ್ಲ. ಉಳಿದ ಹಬ್ಬ ಹರಿದಿನಗಳಲ್ಲಿಯೂ ಸರಕಾರಿ ರಜೆ ಇದ್ದರೂ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಉಪ್ಪಿನಂಗಡಿಯ ಆಸ್ಪತ್ರೆಯಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಕಲಿಕಾ ವೈದ್ಯಕೀಯ ವಿದ್ಯಾರ್ಥಿಗಳು ಕರ್ತವ್ಯದಲ್ಲಿದ್ದು, ಯಾಕೆ ಈ ಘಟನೆ ಸಂಭವಿಸಿತ್ತು ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಅವಾಂತರವಾಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here