ಪಾಣಾಜೆ ಸುಬೋಧ ಪ್ರೌಢಶಾಲಾ ವಾರ್ಷಿಕೋತ್ಸವ

0

ಆತ್ಮವಿಶ್ವಾಸ ಪ್ರಯತ್ನ ಗುರಿ ಸಾಧನೆಗೆ ದಾರಿ – ಶ್ರೀನಿಧಿ ನಿಡುಗಳ

ನಿಡ್ಪಳ್ಳಿ; ಪಾಣಾಜೆ ವಿದ್ಯಾವರ್ಧಕ ಸಂಘ , ಸುಬೋಧ ಪ್ರೌಢಶಾಲೆ ಪಾಣಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ  ಪ್ರೌಢಶಾಲಾ ವಾರ್ಷಿಕೋತ್ಸವವು ಡಿ. 23 ರಂದು ನಡೆಯಿತು. ಪಾಣಾಜೆ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕಡಂದೇಲು ಈಶ್ವರ ಭಟ್ ಧ್ವಜಾರೋಹಣ ಮಾಡಿ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಕ್ಯು.ಎ ಇಂಜಿನಿಯರಿಂಗ್ ಕೋಮ್ಸ್ಕೋಪ್ ಬೆಂಗಳೂರು ಇದರ ಮೆನೇಜರ್ ಶ್ರೀನಿಧಿ ನಿಡುಗಳ ಮಾತನಾಡಿ ಜೀವನದಲ್ಲಿ ಯಶಸ್ಸನ್ನು ಗಳಿಸಲು ಶ್ರದ್ಧೆ  ಆತ್ಮವಿಶ್ವಾಸ, ಪ್ರಯತ್ನ ಮತ್ತು ಒಂದು ನಿರ್ದಿಷ್ಟ ಗುರಿ ಇರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶಾಲಾ ಹಿರಿಯ ವಿದ್ಯಾರ್ಥಿ, ಇನ್ಫೋಸಿಸ್ ಮುಡಿಪು ಇದರ ಸೀನಿಯರ್ ಮೆನೇಜರ್ ವಿಜಯ ಪ್ರವೀಣ  ತಮ್ಮ ಶಾಲಾ ಜೀವನದ ಸವಿನೆನಪುಗಳನ್ನು ಬಿಚ್ಚಿಟ್ಟು ಮುಂದಿನ ವರ್ಷದಿಂದ ಶಾಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕ್ರೀಡಾ ಪ್ರತಿಭೆಗಳಿಗೆ ಪ್ರತಿ ವರ್ಷ ವಿಶೇಷ ಬಹುಮಾನಗಳನ್ನು ನೀಡುವುದಾಗಿ ಘೋಷಿಸಿದರು. 

ಸಭಾಧ್ಯಕ್ಷತೆ ವಹಿಸಿದ್ದ ಪಾಣಾಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ  ಮೈಮುನಾತುಲ್ ಮೆಹ್ರಾ ಅವರು ವಿದ್ಯಾರ್ಥಿಗಳ ಸಂಕುಚಿತ ಮನೋಭಾವವನ್ನು ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವವು ಪ್ರಮುಖ ಪಾತ್ರವಹಿಸುತ್ತದೆ ಎಂದರು.ಪಾಣಾಜೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ರವೀಂದ್ರ ಭಂಡಾರಿ ಬೈಂಕ್ರೋಡು ಶುಭಾಶಂಸನೆಗೈದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ  ಭಾಸ್ಕರ ಪೂಜಾರಿ ನಡುಕಟ್ಟ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರ; 2022 – 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಅರ್ಪಿತಾ ಹಾಗೂ ತನುಶ್ರೀ ಇವರಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕ  ಮಹಾಬಲೇಶ್ವರ ಭಟ್ ಗಿಳಿಯಾಲು ಶಾಲು ಹೊದೆಸಿ ಫಲಪುಷ್ಪ, ಬೆಳ್ಳಿ ಪದಕ,ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ನಿರ್ಮಲ ಇವರು ಪ್ರಥಮ ಸ್ಥಾನ ಗಳಿಸಿದ ಅರ್ಪಿತಾ ಇವರಿಗೆ ಸ್ವರ್ಣ ಪದಕ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆಗೈದ ವಿದ್ಯಾರ್ಥಿಗಳಾದ ಫಾತಿಮಾ ಅಫ್ನ ಹಾಗೂ ನೆಫೀಸತ್ ಮಶ್ ರೂಫಾ ಇವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ದತ್ತಿ ನಿಧಿ ಹಾಗೂ ಬಹುಮಾನಗಳನ್ನು ವಿತರಿಸಿದರು.

ಶಾಲಾ ಶಿಕ್ಷಕಿ  ವಿನುತಾ ದತ್ತಿನಿಧಿ ವಿತರಣಾ ಕಾರ್ಯಕ್ರಮವನ್ನು ನೆರವೇರಿದರು. ಶಾಲಾ ಶಿಕ್ಷಕಿ ಕವಿತಾ ಹಾಗೂ ಹರ್ಷಿತಾ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ವಿದ್ಯಾರ್ಥಿಗಳಾದ ದೀಪಕ್, ಸಿಂಚನ ಹಾಗೂ ದೀಪಿಕಾ ಪ್ರಾರ್ಥಿಸಿದರು.ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಗುರು ಶ್ರೀಪತಿ ಭಟ್ ಇಂದಾಜೆ ವಾರ್ಷಿಕ ವರದಿ ವಾಚಿಸಿದರು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್ ಪಿ  ವಂದಿಸಿದರು.ಶಾಲಾ ಶಿಕ್ಷಕಿ ನಿರ್ಮಲಾ ಹಾಗೂ ಪ್ರಶಿಕ್ಷಣಾರ್ಥಿ ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿ  ಶಾರದಾ ಹಾಗೂ ಪ್ರಶಿಕ್ಷಣಾರ್ಥಿ ರೇಶ್ಮ ಸಹಕರಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಸಿಬ್ಬಂದಿ ವರ್ಗ, ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಪಾಲ್ಗೊಂಡರು.

LEAVE A REPLY

Please enter your comment!
Please enter your name here