ಪುತ್ತಿಲ ಪರಿವಾರದ ಸಂಕಲ್ಪದಂತೆ ಭಕ್ತರನ್ನು ಒಗ್ಗೂಡಿಸಿದ ಶ್ರೀನಿವಾಸ ಕಲ್ಯಾಣೋತ್ಸವ – ಪೇಜಾವರ ಶ್ರೀ
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪೇಜಾವರ ಶ್ರೀಗಳಿಗೆ ಪುಷ್ಪವೃಷ್ಟಿ ಅರ್ಪಣೆ
ಆಕರ್ಷಕ ಕುಣಿತ ಭಜನೆ, ಸಂಕೀರ್ತನೆ, ರಾತ್ರಿ ಸುಡುಮದ್ದು ಪ್ರದರ್ಶನ
ಕಲ್ಯಾಣೋತ್ಸವದಲ್ಲಿ ಪುನೀತರಾದ ಸಹಸ್ರಾರು ಮಂದಿ ಭಕ್ತರು
ಸಾವಿರಾರು ಮಂದಿಯಿಂದ ಅನ್ನಸಂತರ್ಪಣೆ ಸ್ವೀಕಾರ -ಪ್ರಸಾದ ಸ್ವೀಕಾರ
ಪುತ್ತೂರು: ಲೋಕ ಕಲ್ಯಾಣಾರ್ಥವಾಗಿ ಶೂರರಾಜ ಪೌತ್ರನಾದ ವಸುದೇವನ ಪುತ್ರನಾದ ಶ್ರೀ ವಶಿಷ್ಠ ಗೋತ್ರೋತ್ಪನ್ನನಾದ ಸಾಕ್ಷತ್ ಮನ್ಮಥನಾದ ರಮಾವಲ್ಲಭಾನಾದ, ಭೂವೈಕುಂಠಾಧಿಪತಿ ಶ್ರೀ ಶ್ರೀನಿವಾಸ ಹಾಗೂ ಸುಧರ್ಮರಾಜನ ಪೌತ್ರಿಯಾದ ಆಕಾಶರಾಜನ ಪುತ್ರಿಯಾದ ಶ್ರೀ ಅತ್ರಿಗೋತ್ತೋತ್ಪನ್ನಳಾದ ಶ್ರೀ ಪದ್ಮಾವತಿಯ ಕಲ್ಯಾಣೊತ್ಸವ ಗೊಧೋಳಿ ಲಗ್ನದಲ್ಲಿ ವಿಜೃಂಭಣೆಯಿಂದ ಮತ್ತು ಭಕ್ತಿ ಪ್ರದಾನದಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಭವ್ಯವಾದ ವೇದಿಕೆಯಲ್ಲಿ ನಿರ್ಮಿಸಿದ ಆಯೋಧ್ಯಾ ಮಂಟಪದಲ್ಲಿ ಡಿ.25ರಂದು ನಡೆಯಿತು. ರಾತ್ರಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಕಲ್ಯಾಣೋತ್ಸವಕ್ಕೆ ಆಗಮಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಅವರಿಗೆ ಪುತ್ತಿಲ ಪರಿವಾರದಿಂದ ಪುಷ್ಪವೃಷ್ಟಿ ಅರ್ಪಣೆ ಮಾಡಲಾಯಿತು.
ತಿರುಪತಿ ಶ್ರೀಕ್ಷೇತ್ರ ಮೂಲದ ಬೆಂಗಳೂರಿನ ಲಕ್ಷ್ಮೀಪತಿ ಶರ್ಮ ಅವರ ನೇತೃತ್ವದಲ್ಲಿ ಮತ್ತು ಸುಮಾರು 27 ಮಂದಿ ಆಗಮಿಕರು ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು. ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಪೂಜೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಮಧ್ಯಾಹ್ನ ಪದ್ಮಾವತಿ ಮಹಾಲಕ್ಷ್ಮೀ ಸಹಿತ ಶ್ರೀನಿವಾಸ ದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಜರಗಿತು. ಸಂಜೆ ಶ್ರೀನಿವಾಸ ದೇವರ ಕಲ್ಯಾಣೋತ್ಸವದ ಕುರಿತು ತಿರುಪತಿಯ ಅರ್ಚಕರು ಪ್ರವಚನ ನೀಡಿದರು. ಅದಾದ ಬಳಿಕ ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು. ಶುಭಗಳಿಗೆಯಲ್ಲಿ ಸಹಸ್ರಾರು ಭಕ್ತರ ಗೋವಿಂದನ ಉದ್ಘೋಷದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಿತು.
ಶ್ರೀನಿವಾಸನ ಆಶೀರ್ವಾದ ಪಡೆಯಲು ಸರಥಿ ಸಾಲು:
ಶ್ರೀನಿವಾಸ ದೇವರ ಅಶೀರ್ವಾದ ಪಡೆಯಲು ಮಧ್ಯಾಹ್ನ ಸರಥಿ ಸಾಲಿನಲ್ಲಿ ಭಕ್ತರು ವೇದಿಕೆಗೆ ಬಂದು ಶ್ರೀನಿವಾಸ ದೇವರ ದರುಶನ ಪಡೆದು ಅರ್ಚಕರಿಂದ ತಿರುಪತಿ ತಿಮ್ಮಪ್ಪನ ಕಿರೀಟ ಆಶೀರ್ವಾದ ಪಡೆದರು. ಈ ಸಂದರ್ಭ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಸ್ವಾಗತ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ, ಕಾರ್ಯದರ್ಶಿ ಗಣೇಶ್ಚಂದ್ರ ಭಟ್ ಮಕರಂದ ಸಹಿತ ಹಲವಾರು ಮಂದಿ ವೇದಿಕೆಯಲ್ಲಿ ಭಕ್ತರಿಗೆ ಸಾವಕಾಶವಾಗಿ ದೇವರ ದರುಶನ ಪಡೆಯುವಂತೆ ವಿನಂತಿಸಿದರು.
ಅನ್ನಪ್ರಸಾದಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ:
ಶ್ರೀನಿವಾಸ ಕಲ್ಯಾಣೋತ್ಸವ ವೇದಿಕೆಯ ರಥಬೀದಿಯ ಪಕ್ಕದಲ್ಲಿ ವಿಶಾಲವಾದ ಪೆಂಡಾಲ್ನಲ್ಲಿ ಅನ್ನಪ್ರಸಾದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅನ್ನಪ್ರಸಾದಕ್ಕೆ ಸರತಿ ಸಾಲಿನಲ್ಲಿ ಬಂದ ಭಕ್ತರಿಗೆ ನಾಲ್ಕು ಕೌಂಟರ್ನಲ್ಲಿ ಅನ್ನಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಪೆಂಡಾಲ್ ಸುತ್ತ ಕುಳಿತು ಕೊಳ್ಳಲು ಚಯರ್ ವ್ಯವಸ್ಥೆ ಮಾಡಲಾಗಿತ್ತು. ಸಣ್ಣ ಮಕ್ಕಳೊಂದಿಗೆ ಬಂದ ತಾಯಂದಿರು, ವಯಸ್ಕರು ಕಲ್ಯಾಣೋತ್ಸವದ ಕಾರ್ಯಕರ್ತರು ನೇರವಾಗಿ ಅನ್ನಪ್ರಸಾದ ಕೌಂಟರ್ಗೆ ಕರೆದೊಯ್ದು ಅವರಿಗೆ ಸಾವಕಾಶವಾಗಿ ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನ ಜರಗಿದ ಅನ್ನಸಂತರ್ಪಣೆಯಲ್ಲಿ ಹದಿನೈದು ಸಾವಿರ ಭಕ್ತಾದಿಗಳು ಅನ್ನದಾನ ಸ್ವೀಕರಿಸಿದರು. ರಾತ್ರಿ 50ಸಾವಿರ ಮಂದಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಅಡುಗೆ ತಯಾರಿಗೆ ಸ್ವಯಂ ಸೇವಕರು ರಾತ್ರಿ ಹಗಲು ತರಕಾರಿ ಹಚ್ಚಿದರು.
ಭಜನೆ, ಕುಣಿತ ಭಜನೆ ವಿಶೇಷ:
ಬೆಳಿಗ್ಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಎದುರಿನ ವೇದಿಕೆಯಲ್ಲಿ ಮಂಗಳೂರಿನ ರಾಗ ಲಾಸ್ಯ ತಂಡದಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ, ಇದರ ಜೊತೆಗೆ ಜಿಲ್ಲೆಯ ಪ್ರತಿಷ್ಠಿತ ಭಜನಾ ತಂಡಗಳಿಂದ ಸಭಾಂಗಣದಲ್ಲಿ ಆಕರ್ಷಕ ಕುಣಿತ ಭಜನೆ ನಡೆಯಿತು. ಸಂಜೆ ಗುರುಪ್ರಿಯ ನಾಯಕ್ ಬಳಗದಿಂದ ಭಕ್ತಿ ರಸಮಂಜರಿ ಬಳಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.
ಸುಡುಮದ್ದು ಪ್ರದರ್ಶನ:
ರಾತ್ರಿ ಶ್ರೀನಿವಾಸ ಕಲ್ಯಾಣೋತ್ಸವ ಸಂದರ್ಭ ಸುಡುಮದ್ದು ಪ್ರದರ್ಶನ ನಡೆಯಿತು. ಬಾನೆತ್ತರದಲ್ಲಿ ಚಿಮ್ಮಿದ ಸಿಡಿಮದ್ದು ಪ್ರದರ್ಶನ ಬಣ್ಣ ಬಣ್ಣದ ಪ್ರಕಾಶವನ್ನು ಚಿಮ್ಮುತ್ತಿತ್ತು. ಭಕ್ತರು ಸಿಡಿಮದ್ದು ಪ್ರದರ್ಶನ ವೀಕ್ಷಿಸಿದರು. ಸುಮಾರು 20 ನಿಮಿಷಗಳ ಕಾಲ ಸಿಡಿಮದ್ದು ಪ್ರದರ್ಶನ ನಡೆಯಿತು.
ಪುತ್ತಿಲ ಪರಿವಾರದ ಸಂಕಲ್ಪದಂತೆ ಭಕ್ತರನ್ನು ಒಗ್ಗೂಡಿಸಿದ ಶ್ರೀನಿವಾಸ ಕಲ್ಯಾಣೋತ್ಸವ
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅಶೀರ್ವಚನ ನೀಡಿ ಮಾತನಾಡಿ ಮಹಾಲಿಂಗೇಶ್ವರನ ಅಂಗಳದಲ್ಲಿ ವೈಭವದ ಶ್ರೀನಿವಾವಾಸ ಕಲ್ಯಾಣ ಮಹೋತ್ಸವ ನಡೆಯುತ್ತಿದೆ. ಪುತ್ತಿಲ ಪರಿವಾರದ ಸಂಕಲ್ಪದಂತೆ ನಾಡಿನ ಎಲ್ಲಾ ಭಕ್ತರನ್ನು ದೇವಳದ ಅಂಗಳದಲ್ಲಿ ಒಗ್ಗೂಡಿಸಿ ಬಂದು ಎಲ್ಲರನ್ನು ಸೇರಿಸಿಕೊಂಡು ಆ ಶ್ರೀನಿವಾಸ ದೇವರ ಕಲ್ಯಾಣೋತ್ಸವವನ್ನು ನೆರವೇರಿಸುತ್ತಿರುವುದು ಹಿಂದು ಸಮಾಜದ ಒಗ್ಗಟಿಗೆ ಮೂಲ ಮಂತ್ರವಾಗಿದೆ. ದೇವರಿಗೆ ಈ ವೈಭವದ ಕಲ್ಯಾಣೋತ್ಸವ ಯಾಕೆ ಎಂಬ ಪ್ರಶ್ನೆ ಬರುತ್ತದೆ. ಆ ಪ್ರಶ್ನೆಗೆ ದೇವರಿಗೂ ನಮಗೂ ಇರುವ ಸಂಬಂಧ ಬಿಂಬ ಪ್ರತಿಬಿಂಬ ಸಂಬಂಧ ಎಂಬ ಉತ್ತರವೂ ಇದೆ. ಇಲ್ಲಿ ನಾವು ನಮ್ಮನ್ನು ನಾವು ವೈಭವೀಕರಿಸುವುದು ಅಲ್ಲ. ಭಗವಂತನ್ನು ಹೇಗೆ ಉಪಾಸಣೆ ಮಾಡುತ್ತೇವೆಯೋ ಅದಕ್ಕೆ ಅನುಗುಣವಾಗಿ ಪ್ರತಿಫಲ ಕೊಡುತ್ತಾನೆ. ನಮ್ಮ ಬದುಕು ಮಂಗಳವಾಗಬೇಕೆಂದಾದರೆ ಭಗವಂತನಿಗೆ ಕಲ್ಯಾಣೋತ್ಸವ ಮಾಡಿಸಬೇಕು ಎಂದ ಅವರು ಮಾನವನ ವಿವಾಹದಲ್ಲಿ ’ಮಾಂಗಲ್ಯಂ ತಂತು ನಾನೆನಾ ಮಮ ಜೀವನ ಹೇತುನಾ’ ಎಂಬ ಮಂತ್ರಘೋಷಗಳು ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ’ಮಾಂಗಲ್ಯ ತಂತು ನಾನೇನಾ ಜಗತ್ಜೀವನ ಹೇತುನಾ’ ಎಂಬ ಘೋಷಣೆಯೊಂದಿಗೆ ಜಗತ್ತಿಗೆ ಸನ್ಮಂಗಲವುಂಟಾಗುತ್ತದೆ. ಎಲ್ಲರ ಬದುಕು ಮಂಗಲಮಯವಾಗಲಿ ಎಂದರು.
ರಾಮಮಂದಿರ ಉಳಿಯಲು ಅಪಸ್ವರವನ್ನು ಸುಳ್ಳಾಗಿಸಬೇಕು
ಹಿಂದು ಸನಾತನ ಸಂಸ್ಕೃತಿಯ ಕುರಿತಾಗಿ ಇರುವ ಗೌರವ ಜಾಗೃತಿ ನಮ್ಮಲ್ಲಿ ನಿರಂತರ ಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ ಜನ್ಮಭೂಮಿಯಲ್ಲಿ ವೈಭವದ ಮಂದಿರ ಉದ್ಘಾಟನೆಯಗುತ್ತಿದೆ. ಮಂದಿರ ನಿರ್ಮಾಣ ಮಾಡಿ ಆಗಿದೆ. ಶತಮಾನಗಳ ಕನಸು ನನಸಾಗುತ್ತಿದೆ. ವಿಶೇಷವಾದ ಜವಾಬ್ದಾರಿ ಇವತ್ತಿನಿಂದ ಪ್ರಾರಂಭವಾಗುತ್ತಿದೆ. ಶತಶತಮಾನಗಳ ಹೋರಾಟದ ಫಲವಾಗಿ ಮಂದಿರ ನಿರ್ಮಾಣ ಆಗುತ್ತಿದೆ. ಆಚಂದ್ರಾರ್ಕವಾಗಿ ರಾಮಮಂದಿರ ಉಳಿಯಬೇಕು. ಮತ್ತೊಮ್ಮೆ ಪರಕೀಯರ ಪಾಲಾಗಬಾರದು. ನಾವು ಹಿಂದುಗಳು ಹಿಂದೂಗಳಾಗಿ ಉಳಿದರೆ ರಾಮಮಂದಿರ ಉಳಿಯುತ್ತದೆ. ಇದರ ಜೊತೆಗೆ ಯೋಗಿ ಮೋದಿ ಇರುವಷ್ಟು ದಿವಸ ನಿಮ್ಮ ಮಂದಿರ ಇರುತ್ತದೆ. ಅವರು ಪದವಿಯಿಂದ ಕೆಳಗಳಿದಾಗ ಅದನ್ನು ಕಿತ್ತೊಗೆಯುತ್ತೇವೆ ಎಂಬ ಮಾತನ್ನು ಕೇಳಿದ್ದೇವೆ. ಈ ಮಾತನ್ನು ಸುಳ್ಳಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಮಕ್ಕಳು ಹಿಂದೂಗಳಾಗಿ ಉಳಿಯಬೇಕು. ಅದಕ್ಕಾಗಿ ಸನಾತನ ಸಂಸ್ಕೃತಿಯನ್ನು ಮಕ್ಕಳಿಗೆ ರಕ್ತಗತಗೊಳಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪೇಜಾವರ ಶ್ರೀಗಳಿಗೆ ಪುಷ್ಪವೃಷ್ಟಿ
ಉಡುಪಿ ಪೇಜಾವರ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ರಾತ್ರಿ ಆಗಮಿಸಿದರು. ಈ ಸಂದರ್ಭ ಶ್ರೀನಿವಾಸ ಕಲ್ಯಾಣೋತ್ಸವ ಮಾಂಗಲ್ಯ ಧಾರಣೆ ಸಹಿತ ಎಲ್ಲಾ ಕಾರ್ಯಕ್ರಮ ವೀಕ್ಷಣೆ ಮಾಡಿ ಬಳಿಕ ಆಶೀರ್ವಚನ ನೀಡಿದರು. ಈ ಸಂದರ್ಭ ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯಿಂದ ಶ್ರೀಗಳ ಷಷ್ಠ್ಯಬ್ದಾಚಾರಣೆಯ ಹಿನ್ನೆಲೆಯಲ್ಲಿ ಅವರಿಗೆ ಪುಷ್ಪವೃಷ್ಟಿ ಸಮರ್ಪಿಸಲಾಯಿತು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಶಾಂಕ್ ಕೊಟೇಚಾ, ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು, ಪ್ರಸನ್ನ ಕುಮಾರ್ ಮಾರ್ತ ಸಹಿತ ವೇದಿಕೆಯಲ್ಲಿದ್ದ ಸೇವಾರ್ಥಿಗಳು ಪುಷ್ಪವೃಷ್ಟಿ ಮಾಡಿದರು.
ಶ್ರೀನಿವಾಸ ಕಲ್ಯಾಣೋತ್ಸವ ಹೀಗೆ ನಡೆಯಿತು…
ಡಿ.25ಕ್ಕೆ ವೈಷ್ಣವ, ಮಧ್ವಾ ಪಾರಂಪರೆಯಿಂದ ಪ್ರಾತಃ ಕಾಲದ ಸುಪ್ರಭಾತ ಸೇವೆ ನಡೆಯಿತು. ಬಳಿಕ ಪುಷ್ಪಮಾಲಿಕೆ ತೋಮಾಲೆ ಸೇವೆ, ತುಪ್ಪ, ಹಾಲು ಮೊಸರು ಸೇರಿದಂತೆ ವಿಶೇಷ ದ್ರವ್ಯ ಅಭಿಷೇಕ, ಮಂಗಳದ್ರವ್ಯ ಅಭಿಷೇಕವಾಗಿ ತಿರುಮಜ್ಜನಾಭಿಷೇಕ. ಹೋಮ ಕೈಂಕಾರ್ಯ, ಮಧ್ಯಾಹ್ನ 12 ಗಂಟೆಗೆ ಹೋಮದ ಪೂರ್ಣಾಹುತಿ, ಇದೇ ಸಂದರ್ಭ ಶ್ರೀನಿವಾಸ ದೇವರ ಪಾದ ತೊಳೆದ ತೀರ್ಥ ವಿತರಣೆ, ಆ ಬಳಿಕ ಸಂಜೆಯ ತನಕ ದರ್ಬಾರ್ ಅಲಂಕಾರ ನಡೆಯಿತು. ಶ್ರೀನಿವಾಸನ ಸಣ್ಣ ವಿಗ್ರಹದೊಂದಿಗೆ ಕಾಶಿಯಾತ್ರೆ, ಇದರಲ್ಲಿ ಕೋಲಾಟ ನಡೆಯಿತು. ಕಾಶಿಯಾತ್ರೆಯಲ್ಲಿ ಗರುಡಾರೂಢನಾಗಿ ಬಂದು ಮರಳಿ ಕಲ್ಯಾಣೋತ್ಸವಕ್ಕೆ ಕರೆ ತಂದು ಲಗ್ನಪತ್ರಿಕೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ವಧುನಿರೀಕ್ಷಣೆ(ಮಂಗಳಮುಹೂರ್ತ), ಬಳಿಕ ಕನ್ಯಾದಾನ, ಕಂಕಣಕ್ಕೆ ನಾಗನ ಆಹವಾನೆ, ಮಾಂಗಲ್ಯ ಪೂಜೆ, ಮಾಂಗಲ್ಯ ಧಾರಣೆ, ರಾಜಾ ಹೋಮ, ಅಕ್ಷತಾರೋಹಣ ಸೇವೆ, ನಾದೋಪನಾ ಸೇವೆ, ಶೃಂಗಾರ ಕೀರ್ತನೆಗಳಲ್ಲಿ ಲೀನಾ ವಿನೋದ, ಮಾಲಿಕಾ ರೂಪಣಾ, ಮಾಲಾಧಾರಣೆ ಸೇವೆ, ಉಡುಗೊರೆ ಸೇವೆ, ಮೂರು ಬಾರಿ ನರ್ತನ, ಬೋಗ ಮೂರ್ತಿ ಊಂಜಲ್ ಸೇವೆ, ಅಷ್ಟಾವಧಾನ ಸೇವೆ ನಡೆದು, ಕೊನೆಗೆ ಸ್ವಾಮಿ ಪಾದ ತೊಳೆದ ಜಲ, ಅಕ್ಷತೆ ಮತ್ತು ತಿರುಮಲ ದೇವಸ್ಥಾನದ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.