ತಮ್ಮ ಜನಾಂಗದ ಏಳಿಗೆಯೊಂದಿಗೆ ಇತರೇ ಜನಾಂಗಕ್ಕೂ ಒಕ್ಕಲಿಗ ಸಂಘಟನೆ ಧ್ವನಿಯಾಗಿದೆ: ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ
ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಇದರ ವತಿಯಿಂದ ಕಡಬ ಸಮೀಪದ ಹೊಸಮಠದಲ್ಲಿರುವ ಸ್ವಂತ ನಿವೇಶನದಲ್ಲಿ ಸುಮಾರು 15 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ’ ಒಕ್ಕಲಿಗ ಗೌಡ ಸಮುದಾಯ ಭವನ’ಕ್ಕೆ ಡಿ.26ರಂದು ಬೆಳಿಗ್ಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಿದರು. ಇದಕ್ಕೂ ಮೊದಲು ಅವರು ಕಡಬ ಪೇಟೆಯಲ್ಲಿರುವ ಅನುಗ್ರಹ ಕಾಂಪ್ಲೆಕ್ಸ್ನಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಘಟಕ ಪ್ರಾಯೋಜಿತ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘವನ್ನೂ ಉದ್ಘಾಟಿಸಿದರು. ಹೊಸಮಠದಲ್ಲಿ ನಡೆದ ಸಮಾರಂಭದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ, ಮಹಿಳಾ ಘಟಕ ಹಾಗೂ ಯುವ ಘಟಕದ ಪದಾಧಿಕಾರಿಗಳ ಪದಗ್ರಹಣ, ಹೊಸಮಠದ ನಿವೇಶನದಲ್ಲಿ ನಿರ್ಮಾಣಗೊಳ್ಳಲಿರುವ ವಸತಿ ನಿಲಯ, ವಾಣಿಜ್ಯ ಸಂಕೀರ್ಣದ ನಾಮಫಲಕವನ್ನೂ ಅನಾವರಣಗೊಳಿಸಲಾಯಿತು.
ಹೊಸಮಠದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ದೀಪ ಬೆಳಗಿಸಿ, ತೆಂಗಿನ ಕೊಂಬು ಅರಳಿಸಿ ಉದ್ಘಾಟಿಸಿ ಬಳಿಕ ಅನುಗ್ರಹ ಸಂದೇಶ ನೀಡಿದ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು, ಮಾನವ ಸಂಪನ್ಮೂಲ ದೇಶದ ದೊಡ್ಡ ಶಕ್ತಿಯಾಗಿದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಂಡಲ್ಲಿ ದೇಶವೂ ಅಭಿವೃದ್ಧಿಯಾಗಲಿದೆ. ಆದರೆ ಒಬ್ಬ ವ್ಯಕ್ತಿಯಿಂದ ದೇಶದ ಉದ್ಧಾರ ಸಾಧ್ಯವಿಲ್ಲ. ಜನಾಂಗದ ಸಂಘಟನೆಯಾದಾಗ ದೇಶ ಉದ್ಧಾರ ಆಗಲಿದೆ. ಈ ನಿಟ್ಟಿನಲ್ಲಿ ಸ್ವಾಮೀ ವಿವೇಕಾನಂದರ ಮಾತಿನಿಂದ ಪ್ರೇರಣೆಗೊಂಡ ಕೆ.ಹೆಚ್.ರಾಮಯ್ಯ ಹಾಗೂ ಸಮಾನ ಮನಸ್ಕರು ಸೇರಿಕೊಂಡು ಒಕ್ಕಲಿಗ ಸಮುದಾಯದ ಕೇಂದ್ರ ಸಂಘವನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದಾರೆ. ಒಕ್ಕಲಿಗ ಸಂಘಟನೆ ಎಲ್ಲೇ ಅಸ್ತಿತ್ವಕ್ಕೆ ಬಂದರೂ ತಮ್ಮ ಜನಾಂಗದ ಏಳಿಗೆಯ ಜೊತೆಗೆ ಇತರೇ ಜನಾಂಗಕ್ಕೂ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಠದಿಂದಲೂ ನೆರವು: ಕಡಬ ತಾಲೂಕಿನಲ್ಲಿ ಒಕ್ಕಲಿಗ ಗೌಡ ಸೇವಾ ಸಂಘವು ಆರಂಭದಲ್ಲಿಯೇ 15 ಕೋಟಿ ರೂ.ವೆಚ್ಚದಲ್ಲಿ ಸಾಂಸ್ಕ್ರತಿಕ ಭವನ ನಿರ್ಮಾಣಕ್ಕೆ ಮುಂದಾಗಿದೆ. 1 ವರ್ಷದೊಳಗೆ ಭವನ ನಿರ್ಮಾಣ ಪೂರ್ಣಗೊಳಿಸಲು ಜೊತೆಯಾಗಬೇಕಾಗಿರುವುದು ಸಮುದಾಯದ ಜನರ ಕರ್ತವ್ಯವಾಗಿದೆ. ಸಮುದಾಯ ಭವನವೂ ಸಮುದಾಯದ ಹೆಮ್ಮೆ ಹಾಗೂ ಅಸ್ಮಿತತೆಯ ಭಾಗವೂ ಆಗಿದೆ. ವಿಧಾನಪರಿಷತ್ ಸದಸ್ಯ ಬೋಜೇ ಗೌಡರವರು 15 ಲಕ್ಷ ರೂ., ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರು 20 ಲಕ್ಷ ರೂ.ದೇಣಿಗೆ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಶ್ರೀ ಆದಿಚುಂಚನಗಿರಿ ಮಠವೂ ಆರ್ಥಿಕ ಸೇರಿದಂತೆ ಇತರೇ ರೂಪದಲ್ಲೂ ನೆರವು ನೀಡಲು ಬದ್ಧವಿದೆ ಎಂದು ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಕೀಳರಿಮೆ ಬೇಡ: ಒಕ್ಕಲಿಗ ಸಮುದಾಯದ ಹಲವು ನಾಯಕರು ರಾಜ್ಯ, ರಾಷ್ಟ್ರಕ್ಕೆ ಕೊಡುಗೆ, ಸೇವೆ ನೀಡಿದ್ದಾರೆ. ಆದ್ದರಿಂದ ಒಕ್ಕಲಿಗ ಸಮುದಾಯದವರಲ್ಲಿ ಯಾವುದೇ ಕೀಳರಿಮೆ ಬೇಡ. ಸದೃಢ ಸಮಾಜ ನಿರ್ಮಾಣಕ್ಕೆ ಸಂಘಟನೆಯನ್ನೂ ಮತ್ತಷ್ಟು ಬಲಗೊಳಿಸಬೇಕು. ಸಮುದಾಯಕ್ಕೆ ಸ್ವಾಭಿಮಾನ ಬರಬೇಕು. ಮಕ್ಕಳಿಗೆ ಸರಿಯಾದ ವಿದ್ಯೆ ನೀಡಬೇಕೆಂದು ಹೇಳಿದ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು, ಒಕ್ಕಲಿಗ ಸಮುದಾಯದ ಜನರ ಸಂಖ್ಯೆ ಪುತ್ತೂರು, ಕಡಬ, ಸುಳ್ಯ ಭಾಗದಲ್ಲಿ ಹೆಚ್ಚು ಇದೆ. ಆದ್ದರಿಂದ ರಾಜ್ಯ ಒಕ್ಕಲಿಗ ಸಂಘದಲ್ಲಿ ಈ ಭಾಗಕ್ಕೆ 3 ನಿರ್ದೇಶಕ ಸ್ಥಾನ ಸಿಗಬೇಕು. ಅದರಲ್ಲಿ 1 ಸ್ಥಾನ ಮಹಿಳೆಯರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಹೆಚ್ಚು ಮಂದಿಗೆ ಸದಸ್ಯತ್ವ ನೀಡಬೇಕೆಂದು ಹೇಳಿದರು.
ಸ್ವಾಭಿಮಾನದ ಸಂಕೇತ: ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ: ಆದಿಚುಂಚನಗಿರಿ ಮಂಗಳೂರು ಕಾವೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ಸಮುದಾಯ ಭವನವು ಸ್ವಾಭಿಮಾನದ ಸಂಕೇತವಾಗಿದೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ದಿಟ್ಟವಾದ ಹೋರಾಟ ಮಾಡಲು ಜನಾಂಗ ಹಿಂದೇಟು ಹಾಕಬಾರದು. ಸ್ವಾಭಿಮಾನ ಬಿಡಬಾರದು. ಎಂದಿಗೂ ಹೇಡಿಗಳಾಗಬಾರದು. ತಮ್ಮ ಧರ್ಮದೊಂದಿಗೆ ಪರಧರ್ಮವನ್ನೂ ಪ್ರೀತಿಸಬೇಕು ಎಂದರು. ದ.ಕ.ಜಿಲ್ಲೆಯಲ್ಲಿ 6 ಲಕ್ಷ ಒಕ್ಕಲಿಗರಿದ್ದು ಈ ಪೈಕಿ 3 ಲಕ್ಷ ಮತದಾರರೂ ಇದ್ದಾರೆ. ಆದರೆ ಈ ಭಾಗದಲ್ಲಿ ಒಕ್ಕಲಿಗರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದ ಶ್ರೀಗಳು, ಕಡಬದ ಹೊಸಮಠ ಪ್ರದೇಶವು ಆದಿಚುಂಚನಗಿರಿ ಮಠದ 71ನೇ ಪೀಠಾಧ್ಯಕ್ಷರಾದ ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಸಂಚರಿಸಿದ ತಾಣ. ಇಲ್ಲಿ ಇದೀಗ ಮಠದ 72ನೇ ಪೀಠಾಧ್ಯಕ್ಷರಾದ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಮುದಾಯ ಭವನಕ್ಕೆ ಶಿಲಾನ್ಯಾಸ ನಡೆದಿದೆ. ಈ ಮೂಲಕ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘವು ಜನ ಹಾಗೂ ಜಗ ಮೆಚ್ಚುವ ಕೆಲಸಕ್ಕೆ ಮುಂದಾಗಿದೆ. ಇದಕ್ಕೆ ಸಮುದಾಯದ ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯದ ಕೊರತೆ: ಡಿ.ವಿ.ಎಸ್.: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಸಂಸದ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಒಕ್ಕಲಿಗ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದ.ಕ.ಜಿಲ್ಲೆಯಲ್ಲಿ ಒಕ್ಕಲಿಗ ಮತದಾರರೂ ಸಂಖ್ಯೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಆದರೆ ಜಿಲ್ಲೆಯಲ್ಲಿ ಒಕ್ಕಲಿಗ ಜನಾಂಗಕ್ಕೆ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ. ಯಾವುದೇ ಪಕ್ಷದಲ್ಲಾದರೂ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ 1 ಸ್ಥಾನ ಕಲ್ಪಿಸುವಲ್ಲಿ ಒಕ್ಕಲಿಗರೆಲ್ಲರೂ ಮುಂದಾಗಬೇಕಿದೆ. ಶಾಸಕರಾಗಿ ಸಂಜೀವ ಮಠಂದೂರು ಅವರು 5 ವರ್ಷ ಉತ್ತಮ ಕೆಲಸ ಮಾಡಿದ್ದರೂ, ಆಶಾ ತಿಮ್ಮಪ್ಪ ಅವರಿಗೆ ಆಶೀರ್ವಾದ ಮಾಡುವಲ್ಲಿ ನಾವು ವಿಫಲವಾಗಿದ್ದೇವೆ. ಮುಂದಿನ ದಿನ ಜಿಲ್ಲೆಯಲ್ಲಿ ಈ ಕೊರತೆ ತುಂಬುವ ನಿಟ್ಟಿನಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಹಾಗೂ ಅವರ ತಂಡ ಮಾಡಿರುವ ಕೆಲಸ ಪ್ರೇರಣೆಯಾಗಲಿ ಎಂದು ಹೇಳಿದರು. ಕಡಬ ತಾಲೂಕಿನಲ್ಲಿ ಶೇ.75ಕ್ಕಿಂತ ಹೆಚ್ಚು ಗೌಡ ಜನಾಂಗದವರಿದ್ದಾರೆ. ಇಲ್ಲಿ ಗೌಡ ಜನಾಂಗದವರಿಂದ ನಿರ್ಮಾಣಗೊಳ್ಳುತ್ತಿರುವ ಸಮುದಾಯ ಭವನ ಎಲ್ಲಾ ಸಮಾಜದವರಿಗೂ ಕೊಡುವ ಕೊಡುಗೆಯಾಗಿದೆ. ಇದರ ಪ್ರಾರಂಭೋತ್ಸವವೂ ದ.ಕ.ಜಿಲ್ಲೆಯಲ್ಲಿ ಗೌಡ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಬೇಕು ಎಂಬ ಭಾವನೆ ಎಲ್ಲಾ ಪಕ್ಷದವರಿಗೂ ಬರಲಿ ಎಂಬ ಸಂದೇಶ ನೀಡುವ ಕಾರ್ಯಕ್ರಮವೂ ಆಗಿದೆ. ಸಮಾಜಕ್ಕೆ ಬೇಕಾದ ವ್ಯವಸ್ಥೆ ಕೊಡುವುಲ್ಲಿಯೂ ಗೌಡ ಜನಾಂಗದವರು ಮುಂದೆ ಬರಬೇಕು. ಕೀಳರಿಮೆ ಬಿಡಬೇಕೆಂದು ಡಿ.ವಿ.ಸದಾನಂದ ಗೌಡ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೂ ಕುತ್ತು ಬಂತು: ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರಿನಲ್ಲಿ ಒಕ್ಕಲಿಗ ಗೌಡ ಸಂಘದ ನೇತೃತ್ವದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದೊಡ್ಡ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ 4 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಒಕ್ಕಲಿಗ ಸಮಾಜದಲ್ಲಿ ಹುಟ್ಟಿ ಆದಿಚುಂಚನಗಿರಿ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದು ಮುಖ್ಯಮಂತ್ರಿ ಆದೆ ಎಂದು ಸಭೆಯಲ್ಲಿ ನಾನು ಮಾಡಿದ ಭಾಷಣ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಮುಳುವಾಯಿತು ಎಂದು ಡಿ.ವಿ.ಎಸ್. ಹೇಳಿದರು.
ಚುನಾವಣಾ ರಾಜಕೀಯದಿಂದ ನಿವೃತ್ತಿ: ಹರಕು ನಾಲಗೆ, ಚೀಲ ತುಂಬಾ ದುಡ್ಡು, ಗುಂಪುಗಾರಿಕೆಯಿಂದಲೇ ರಾಜಕಾರಣ ನಡೆಯುತ್ತಿದೆ. ಸುಳ್ಯದ ಪುಣ್ಯ ಭೂಮಿಯಿಂದ ರಾಜಕೀಯ ಕ್ಷೇತ್ರಕ್ಕೆ ಹೋದ ನನಗೆ ನನ್ನ ಪಕ್ಷ 30 ವರ್ಷ ಎಲ್ಲಾ ಸ್ಥಾನವನ್ನೂ ಕೊಟ್ಟಿದೆ. ಸಾಮಾಜಿಕ ಪರಿವರ್ತನೆ ಆಗಬೇಕಾದಲ್ಲಿ ಹೊಸ ಯುವಕರಿಗೆ ನಾವು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ. ಮುಂದೆ ಪಕ್ಷಕ್ಕಾಗಿ ದುಡಿಯುತ್ತೇನೆ. ಜನ ಸೇವೆ ಮಾಡುತ್ತೇನೆ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಎಂದಿಗೂ ಪ್ರಚಾರಕ್ಕೆ ಅಂಟಿಕೊಂಡಿಲ್ಲ. ಗುಂಪುಗಾರಿಕೆ ಮಾಡಿಲ್ಲ. ವ್ಯಕ್ತಿಯಾಗಿ ಸಮಾಜಕ್ಕೆ ಶಕ್ತಿಯಾಗಬೇಕಾಗುವ ನಿಟ್ಟಿನಲ್ಲಿ ಹೆಜ್ಜೆ ಇಡೋಣ ಎಂದು ಹೇಳಿದರು.
ಸ್ವಾಭಿಮಾನದ ಸಮುದಾಯ ಭವನ: ಅಶ್ವತ್ಥ್ ನಾರಾಯಣ: ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಮಾತನಾಡಿ, ಇದೊಂದು ಕನಸ್ಸಿನ ಸಮುದಾಯ ಭವನ ಆಗಿದೆ. ಒಕ್ಕಲಿಗ ಸಮಾಜದ ಸ್ವಾಭಿಮಾನದ ಸಮುದಾಯ ಭವನಕ್ಕೆ ನನ್ನದೂ ಕೊಡುಗೆ ಇರಬೇಕು ಎಂಬ ಭಾವನೆ ಎಲ್ಲರಲ್ಲೂ ಇರಬೇಕು. ಸಾಧನೆಯ ಛಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರಲ್ಲದೆ, ಒಕ್ಕಲಿಗ ಸಮಾಜಕ್ಕಾಗಿ ಏನೇ ತ್ಯಾಗ ಮಾಡಲು ಹಾಗೂ ಯಾವುದೇ ಸಹಕಾರ ನೀಡಲು ಸಿದ್ಧ ಎಂದರು.
ಆದಿಚುಂಚನಗಿರಿ ಮಠದಿಂದ ಉತ್ತಮ ಕಾರ್ಯ: ಭೋಜೇಗೌಡ: ಮುಖ್ಯ ಅತಿಥಿಯಾಗಿದ್ದ ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರು ಮಾತನಾಡಿ, 1837ರಲ್ಲಿ ಒಕ್ಕಲಿಗ ಸಮಾಜದ ಕೆದಂಬಾಡಿ ರಾಮಯ್ಯ ಗೌಡರು ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದರು. ಇದು ಪಠ್ಯ ಪುಸ್ತಕದಲ್ಲೂ ಪ್ರಕಟವಾಗಬೇಕಿದೆ. ಸರಕಾರದಿಂದ ಮಾಡಲು ಆಗದ ಕೆಲಸ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದಿಂದ ಆಗಿದೆ. ವಿದ್ಯೆ, ಆರೋಗ್ಯ ಕ್ಷೇತ್ರದಲ್ಲಿ ಶ್ರೀ ಆದಿಚುಂಚನಗಿರಿ ಮಠವು ಉತ್ತಮ ಕೆಲಸ ಮಾಡುತ್ತಿದೆ. ಸಮಾಜದ ಯುವಕರು ಮುಂದೆ ಬಂದು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಶಿಲಾನ್ಯಾಸಗೊಂಡ ಒಕ್ಕಲಿಗ ಸಮುದಾಯ ಭವನವು ಆದಷ್ಟು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಲಿ ಎಂದು ಹೇಳಿದರು.
ಒಕ್ಕಲಿಗರ ಸಂಘಕ್ಕೆ ಜಮೀನು: ಹನುಮಂತಯ್ಯ: ರಾಜ್ಯ ಒಕ್ಕಲಿಗ ಸಂಘ ಬೆಂಗಳೂರು ಇದರ ಅಧ್ಯಕ್ಷ ಹನುಮಂತಯ್ಯ ಅವರು ಮಾತನಾಡಿ, ಈ ಭಾಗದಲ್ಲಿ ರಾಜ್ಯ ಒಕ್ಕಲಿಗ ಸಂಘದಲ್ಲಿ ಸದಸ್ಯತ್ವ ಪಡೆಯುವವರ ಸಂಖ್ಯೆ ಕಡಿಮೆ ಇದೆ. ಸುಮಾರು 2 ಲಕ್ಷ ಅರ್ಜಿ ಪ್ರಿಂಟ್ ಮಾಡಿ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ಗಳಿಗೆ ಕಳಿಸಲಾಗಿತ್ತು. ಆದರೆ ಮಂಗಳೂರು ಡಿಸಿಸಿ ಬ್ಯಾಂಕ್ ಮೂಲಕ ಕೇವಲ 150 ಅರ್ಜಿ ಮಾತ್ರ ಹೋಗಿದೆ. ಜಿಲ್ಲೆಗಳಲ್ಲಿ ಒಕ್ಕಲಿಗರ ಸಂಘಕ್ಕೆ ಜಮೀನು ಕಾದಿರಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಕಡಬದಲ್ಲಿ ಒಕ್ಕಲಿಗ ಸಾಮ್ರಾಜ್ಯ: ಸಂಜೀವ ಮಠಂದೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಸ್ವಾಭಿಮಾನಿಗಳಾಗಿ ನಾಡಪ್ರಭು ಕೆಂಪೇಗೌಡರಂತೆ ಹೊಸ ನಾಡು ಕಟ್ಟಲು ಕಡಬ ತಾಲೂಕು ಒಕ್ಕಲಿಗ ಗೌಡ ಸಂಘ ಮುಂದಾಗಿದೆ. ಈಗ ಕಡಬದಲ್ಲಿ ಒಕ್ಕಲಿಗರ ಸಾಮ್ರಾಜ್ಯವಿದೆ. ಇಲ್ಲಿಂದ ಇನ್ನೊಂದು ಚರಿತ್ರೆಯೂ ನಿರ್ಮಾಣ ಆಗಬೇಕು. ಸಮುದಾಯ ಭವನವು ಸಮಾಜದ ಪರಿವರ್ತನೆಯ ಕೇಂದ್ರವೂ ಆಗಬೇಕು. ಮುಂದಿನ ದಿನದಲ್ಲಿ ಕಡಬ ತಾಲೂಕು ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಲಿದೆ ಎಂದರು.
ದ.ಕ.ಜಿಲ್ಲೆಗೆ ಸಂದೇಶ: ಕಿರಣ್ ಬುಡ್ಲೆಗುತ್ತು: ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನೆ ಸಮಿತಿ ಅಧ್ಯಕ್ಷ, ಮಂಗಳೂರು ಒಕ್ಕಲಿಗ ಯುವ ಘಟಕದ ಅಧ್ಯಕ್ಷರೂ ಆದ ಕಿರಣ್ ಬುಡ್ಲೆಗುತ್ತು ಅವರು ಮಾತನಾಡಿ, ಒಕ್ಕಲಿಗರಲ್ಲಿ ರಾಜಕೀಯ, ಶೈಕ್ಷಣಿಕವಾದ ಕೀಳರಿಮೆ ಇರಬಾರದು. ಹೊಸಮಠದಲ್ಲಿ ನಡೆದ ಬೃಹತ್ ಸಮಾರಂಭವು ದ.ಕ.ಜಿಲ್ಲೆಗೆ ಒಕ್ಕಲಿಗ ಸಮುದಾಯ ನೀಡಿದ ಸಂದೇಶವಾಗಿದೆ ಎಂದು ಹೇಳಿದರು.
1 ವರ್ಷದೊಳಗೆ ಲೋಕಾರ್ಪಣೆ: ಸುರೇಶ್ ಬೈಲು : ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ಸ್ಥಾಪನೆ ಸಂದರ್ಭ ಕಡಬದಲ್ಲಿ ಒಕ್ಕಲಿಗ ಗೌಡರ ಒಗ್ಗೂಡಿಸಲು ಅವಕಾಶ ದೊರೆತಿತ್ತು. ಮುಂದೆ ಎಲ್ಲರ ಒತ್ತಾಸೆಯಂತೆ ಕಡಬ ತಾಲೂಕು ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಕಡಬದಲ್ಲಿ ಈಗಿರುವ ಒಕ್ಕಲಿಗ ಸಮುದಾಯ ಭವನ ತೀರಾ ಚಿಕ್ಕದಾಗಿದ್ದು ಈ ಹಿನ್ನೆಲೆಯಲ್ಲಿ ಹೊಸಮಠದಲ್ಲಿ ನಿವೇಶನ ಖರೀದಿಸಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ಯೋಜನೆಗೆ ಈಗಾಗಲೇ 400ಕ್ಕೂ ಹೆಚ್ಚು ಮಂದಿ ತಲಾ 1 ಲಕ್ಷ ರೂ. ನೀಡಿ ಸ್ಥಾಪಕ ಸದಸ್ಯತ್ವ ಪಡೆದುಕೊಂಡಿದ್ದಾರೆ. ಸುಮಾರು 15 ಕೋಟಿ ರೂ.ವೆಚ್ಚದಲ್ಲಿ ಎಲ್ಲಾ ಸಮಾಜದವರಿಗೂ ಅನುಕೂಲವಾಗುವ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ. 2024ರ ಡಿಸೆಂಬರ್ 25ರೊಳಗೆ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸುವ ಇರಾದೆ ಇದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು. ಇದರೊಂದಿಗೆ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘವೂ ಉದ್ಘಾಟನೆಗೊಂಡಿದೆ. ವಸತಿ ನಿಲಯ, ವಾಣಿಜ್ಯ ಸಂಕೀರ್ಣಕ್ಕೂ ಶಿಲಾನ್ಯಾಸ ನಡೆದಿದೆ. ಮುಂದೆ ಆರೋಗ್ಯ ವಿಮೆ, ವಿದ್ಯಾನಿಧಿ, ಕ್ರೀಡಾಪಟುಗಳಿಗೆ ತರಬೇತಿ ಸೇರಿದಂತೆ ಇತರೇ ಯೋಜನೆ ಹಮ್ಮಿಕೊಳ್ಳಲಿದ್ದೇವೆ. ಸಂಘದ ನಿವೇಶನದಲ್ಲಿ ಎಲ್ಕೆಜಿಯಿಂದ ಪಿಯುಸಿ ತನಕದ ಸಿಬಿಎಸ್ಇ ಶಾಲೆ ಆರಂಭಕ್ಕೆ ಆದಿಚುಂಚನಗಿರಿ ಮಹಾಸ್ವಾಮೀಜಿಯವರು ಮುಂದಾಗಬೇಕೆಂದು ಸುರೇಶ್ ಬೈಲು ಮನವಿ ಮಾಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಸಹಕಾರಿ ಧುರೀಣ ಮಾಧವ ಗೌಡ ಜಾಕೆ, ಮಂಗಳೂರು ವಿಜಿಯಸ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲೋಕಯ್ಯ ಗೌಡ, ಬೆಳ್ತಂಗಡಿ ವಾಣಿ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಪದ್ಮ ಗೌಡ ಬೆಳಾಲು, ಕೊಡಗು-ದ.ಕ ಗೌಡ ಅಭಿವೃದ್ದಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ಅಧ್ಯಕ್ಷ ಉಮೇಶ್ ಎಂ.ಪಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎ.ವಿ ತೀರ್ಥರಾಮ, ಮಂಗಳೂರು ಒಕ್ಕಲಿಗ ಸೇವಾ ಸಂಘದ ಕಾರ್ಯದರ್ಶಿ ಡಿ.ಬಿ ಬಾಲಕೃಷ್ಣ ಗೌಡ, ಸುಳ್ಯ ವೆಂಕಟ್ರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ, ವಿಟ್ಲ ಗೌಡರ ಯಾನೆ ಒಕ್ಕಲಿಗರ ಗೌರವ ಸಲಹೆಗಾರರ ಲಿಂಗಪ್ಪ ಗೌಡ ಅಳಿಕೆ, ಸುಳ್ಯ ಗೌಡರ ಯುವ ಸೇವಾ ಸಂಘ ಅಧ್ಯಕ್ಷ ಚಂದ್ರ ಕೋಲ್ಚಾರು, ಬೆಳ್ತಂಗಡಿ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಬಂಟ್ವಾಳ ತಾಲೂಕು ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಮೋನಪ್ಪ ಗೌಡ, ಬೆಳ್ತಂಗಡಿ ತಾಲೂಕು ಶ್ರೀ ಕಾಲಬೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ, ಮಂಗಳೂರು ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಗುರುದೇವ್ ಗೌಡ ಯು.ಬಿ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ, ಪುತ್ತೂರು ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ ವಿ ನಾರಾಯಣ ಗೌಡ, ಕಡಬ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ ಅಮೈ , ಕಡಬ ಒಕ್ಕಲಿಗ ಸೇವಾ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ ಪೂಯಿಲ , ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗೌಡ ಪಂಜೋಡಿ ಖಜಾಂಜಿ ಶಿವಪ್ರಸಾದ್ ಗೌಡ ಪುತ್ತಿಲ, ಉಪಾಧ್ಯಕ್ಷ ತಮ್ಮಯ್ಯ ಗೌಡ, ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು , ಕಾರ್ಯದರ್ಶಿ ಮಂಜುನಾಥ ಗೌಡ, ಕೊಲಂತ್ತಾಡಿ, ಮಹಿಳಾ ಘಟಕ ಅಧ್ಯಕ್ಷೆ ವೀಣಾ ರಮೇಶ್ ಗೌಡ ಕೊಲ್ಲೆಸಾಗು , ಪ್ರಧಾನ ಕಾರ್ಯದರ್ಶಿ ಲಾವಣ್ಯ ಹೇಮಂತ್ ಮಂಡೆಕರ, ತಾಲೂಕು ಯುವ ಘಟಕ ಅಧ್ಯಕ್ಷ ಬಿ.ಎಂ. ಪೂರ್ಣೇಶ್ ಗೌಡ ಬಾಬ್ಲುಬೆಟ್ಟು, ಬಲ್ಯ, ಪ್ರಧಾನ ಕಾರ್ಯದರ್ಶಿ ಸುಧೀಶ್ ಗೌಡ ಪಟ್ಟೆ, ಕೊಲ ಉಪಸ್ಥಿತರಿದ್ದರು.
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು ಸ್ವಾಗತಿಸಿದರು. ಉಪಾಧ್ಯಕ್ಷ ತಮ್ಮಯ್ಯ ಗೌಡ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ, ಉಪನ್ಯಾಸಕಿ ಸುಶ್ಮಿತಾ ಆದಿತ್ಯ ಚಿದ್ಗಲ್ ನಿರೂಪಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳ ನಾಯಕರು, ವಿವಿಧ ಸಮಾಜದ ಮುಖಂಡರು, ಒಕ್ಕಲಿಗ ಸಮಾಜದ ಮುಖಂಡರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನೂತನ ಪದಾಧಿಕಾರಿಗಳ ಪದಗ್ರಹಣ
ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕು ಘಟಕದ ನೂತನ ಅಧ್ಯಕ್ಷ ಸುರೇಶ್ ಗೌಡ ಬೈಲು, ಗೌರವಾಧ್ಯಕ್ಷ ಗೋಪಾಲಕೃಷ್ಣ ಗೌಡ ಪುಯಿಲ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಗೌಡ ಪಂಜೋಡಿ, ಖಜಾಂಜಿ ಶಿವಪ್ರಸಾದ್ ಗೌಡ ಪುತ್ತಿಲ, ಸಂಘಟನಾ ಕಾರ್ಯದರ್ಶಿ ಶಿವರಾಮ ಗೌಡ ಏನೆಕಲ್ಲು, ಉಪಾಧ್ಯಕ್ಷ ತಮ್ಮಯ್ಯ ಗೌಡ, ಕಾರ್ಯದರ್ಶಿ ಮಂಜುನಾಥ ಗೌಡ, ವಲಯವಾರು ಉಪಾಧ್ಯಕ್ಷರಾದ ದಯಾನಂದ ಗೌಡ ಆಲಡ್ಕ, ರಾಧಾಕೃಷ್ಣ ಗೌಡ ಕೆರ್ನಡ್ಕ, ವೆಂಕಟ್ರಾಜ್ ಗೌಡ ಕೋಡಿಬೈಲ್, ಗೋಪಾಲಕೃಷ್ಣ ಗೌಡ ಪಟೇಲ್, ವಾಡ್ಯಪ್ಪ ಗೌಡ ಎರ್ಮಾಯಿಲ್, ಧರ್ಮಪಾಲ ಗೌಡ ಕಣ್ಕಲ್, ಯುವ ಘಟಕದ ಅಧ್ಯಕ್ಷ ಬಿ.ಎಂ.ಪೂರ್ಣೇಶ್ ಗೌಡ ಬಲ್ಯ, ಪ್ರಧಾನ ಕಾರ್ಯದರ್ಶಿ ಸುಧೀಶ್ ಗೌಡ ಪಟ್ಟೆ, ಮಹಿಳಾ ಘಟಕದ ಗೌರವಾಧ್ಯಕ್ಷೆ ನೀಲಾವತಿ ಶಿವರಾಮ ಗೌಡ, ವೀಣಾರಮೇಶ್ ಗೌಡ ಕೊಳ್ಳೆಸಾಗು, ಪ್ರಧಾನ ಕಾರ್ಯದರ್ಶಿ ಲಾವಣ್ಯ ಹೇಮಂತ್ ಅವರಿಗೆ ಸ್ವಾಮೀಜಿ ಗುರುತಿನ ಚೀಟಿ ತೊಡಿಸಿ ಪದಗ್ರಹಣ ನೆರವೇರಿಸಿದರು.
ಲೋಗೋ/ವೆಬ್ಸೈಟ್ ಅನಾವರಣ:
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಲೋಗೋವನ್ನು ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಕೃಷಿಗೆ ಉಪಯೋಗಿಸುವ ಉಪಕರಣ ಹಾಗೂ ಒಕ್ಕಲಿಗರ ಸಂಪ್ರದಾಯಿಕ ಆಯುಧಗಳನ್ನು ಒಳಗೊಂಡ ಲೋಗೋ ರಚಿಸಲಾಗಿದೆ. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವೆಬ್ಸೈಟ್ ಅನ್ನು ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಅನಾವರಣಗೊಳಿಸಿದರು.
ಸ್ವಾಮೀಜಿಗಳಿಗೆ ಗೌರವಾರ್ಪಣೆ
ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಗೆ ವೇದಿಕೆಯಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಾಽಕಾರಿಗಳು ಶಾಲು, ಏಲಕ್ಕಿ ಮಾಲೆ, ತುಳಸಿ ಮಾಲೆ, ಕಾರ್ಯಕ್ರಮದ ಸವಿನೆನಪಿಗಾಗಿ ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು. ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರಿಗೆ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವಲಯ ಉಪಾಧ್ಯಕ್ಷರು ಗೌರವಾರ್ಪಣೆ ಮಾಡಿದರು. ಅತಿಥಿಗಳಿಗೆ ಸಂಘದ ಪರವಾಗಿ ಸ್ವಾಮೀಜಿ ಶಾಲು,ಏಲಕ್ಕಿ ಮಾಲೆ, ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನ
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ, ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಸುರೇಶ್ ಪಣೆಮಜಲು, ರಕ್ಷಿತ್ ಪುತ್ತಿಲ, ಕಿರಣ್ ಹೊಸಳಿಕೆ ಅವರನ್ನು ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸನ್ಮಾನಿಸಿ ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮಕ್ಕೂ ಮುನ್ನ ಹಾಗೂ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಿದುಷಿ ಪ್ರಮೀಳಾ ಲೋಕೇಶ್ ಅವರ ನೇತೃತ್ವದ ನೃತ್ಯ ನಿನಾದ ಕಡಬ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಭಾ ವೇದಿಕೆಯನ್ನು ಅಡಿಕೆಗಳಿಂದ ಸಾಂಪ್ರದಾಯಿಕವಾಗಿ ಶೃಂಗರಿಸಲಾಗಿತ್ತು. ವೇದಿಕೆಯ ಮುಂಭಾಗದಲ್ಲಿ ತುಳುನಾಡಿನಲ್ಲಿ ಬಳಕೆಯಲ್ಲಿದ್ದ ವಿವಿಧ ಪರಿಕರಗಳನ್ನು ಪ್ರದರ್ಶನಕ್ಕೆಇಡಲಾಗಿತ್ತು.