ಮಕ್ಕಳನ್ನೇ ಆಸ್ತಿ ಮಾಡಬೇಕೇ ವಿನಃ ಮಕ್ಕಳಿಗಾಗಿ ಆಸ್ತಿ ಮಾಡಬಾರದು : ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಈ ಹಿಂದೆ ನಮ್ಮ ಹಿರಿಯರು ಮಕ್ಕಳಿಗಾಗಿ ಎಂದು ಆಸ್ತಿ ಮಾಡಿ ಇಡುತ್ತಿದ್ದರು, ಅವರ ಕಾಲ ನಂತರ ಮಕ್ಕಳು ಅದನ್ನು ಅನುಭವಿಸುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ ಪ್ರತೀಯೊಬ್ಬ ಪೋಷಕರು ಮಕ್ಕಳನ್ನೇ ಆಸ್ತಿ ಮಾಡಲು ಮುಂದಾಗುತ್ತಿದ್ದು ಇದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಕಾವು ಸರಕಾರಿ ಜಿ.ಪಂ.ಜಿ ಪ್ರಾ.ಶಾಲೆಯನ್ನು ದತ್ತು ತೆಗೆದುಕೊಂಡಿರುವ ಪುತ್ತೂರು ಶ್ರೀರಾಮ ಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅವರು ಡಿ.28 ರಂದು ಕಾವು ಉನ್ನತೀಕರಿಸಿದ ಹಿ ಪ್ರಾ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮತನಾಡಿದರು.
ನಾವು ದುಡಿದು ಸಂಪಾದನೆ ಮಾಡುವುದು ನಮ್ಮ ಮಕ್ಕಳಿಗಾಗಿ , ನಾವು ಕಷ್ಟಪಟ್ಟು ಸಾಕಿದ ಮಕ್ಕಳು ಉನ್ನತ ವ್ಯಕ್ತಿಗಳಾಗಬೇಕು ಎಂಬುದು ಎಲ್ಲ ಹೆತ್ತವರು ಕನಸು ಕಾಣುತ್ತಾರೆ, ಅವರ ಕನಸು ನನಸಾಗಬೇಕಾದರೆ ಮಕ್ಕಳಿಗೆ ಪ್ರಾರಂಭದಲ್ಲೇ ಉತ್ತಮ ವಿದ್ಯಬ್ಯಾಸವನ್ನು ಕಲಿಸಬೇಕಿದೆ, ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಒಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಮುಂದೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕಾವು ಸರಕಾರಿ ಶಾಲೆಯಲ್ಲಿ ದಾಖಲಾಗಿರುವ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬುದೇ ನಮ್ಮೆಲ್ಲರ ಉದ್ದೇಶವಾಗಿದ್ದು ಇದಕ್ಕಾಗಿ ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭ ಮಾಡಿದ್ದು ಉತ್ತಮ ಶಿಕ್ಷಣ ದೊರೆಯುತ್ತಿರುವುದು ಆಶಾಧಾಯಕವಾಗಿದೆ ಎಂದು ಹೇಳಿದರು.
ಪ್ರತೀಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಮೇಲೆ ಅನೇಕ ಜವಾಬ್ದಾರಿಗಳಿವೆ, ಆ ಜವಾಬ್ದಾರಿಯನ್ನು ಎಂದೂ ಮರೆಯಬಾರದು,ಶಾಲೆಗೆ ಮಕ್ಕಳನ್ನು ಕಲಿಸಿದ ಮಾತ್ರಕ್ಕೆ ಸಾಕಾಗುವುದಿಲ್ಲ, ಮಕ್ಕಳ ಕಲಿಕೆಯ ಮೇಲೂ ನಿಗಾ ಇಡಬೇಕು, ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರವಹಿಸಿಬೇಕು ಮತ್ತು ಅವರಿಗೆ ಸಂಸ್ಕಾರವನ್ನು ಕಲಿಸುವಂತಾಗಬೇಕು ಎಂದು ಹೇಳಿದರು.
ಏಸಿ ಕೊಠಡಿ ಮಾಡಿದ್ದೇವೆ
ಕಾವು ಶಾಲೆಯಲ್ಲಿ ಬಡವರ ಮಕ್ಕಳು ಎ ಸಿ ರೂಮಲ್ಲಿ ಕುಳಿತು ವ್ಯಾಸಂಗ ಮಾಡಬೇಕು ಎಂಬ ಉದ್ದೇಶದಿಂದ ಎ ಸಿ ರೂಮನ್ನು ಆರಂಭ ಮಾಡಿದ್ದೇವೆ, 300 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿರುವುದು ಸರಕಾರಿ ಶಾಲೆಯೂ ಗುಣಮಟ್ಟದ ಶಿಕ್ಷಣ ನೀಡುತ್ತದೆ ಎಂಬುದಕ್ಕೆ ಕಾವು ಶಾಲೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಹೇಳಿದರು.
ಖಾಸಗಿ ಶಾಲೆಯ ಬಸ್ಸುಗಳು ಮನೆ ಬಾಗಿಲಿಗೆ ಬಂದರೂ ಕಾವು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ; ಮೂಡಿತ್ತಾಯ
ಕಾವು ಸರಕಾರಿ ಶಾಲೆಯ ಸುತ್ತಲಿರುವ ಮನೆಯಂಗಳಕ್ಕೆ ವಿವಿಧ ಕಡೆಯ ಖಾಸಗಿ ಶಾಲೆಯ ಬಸ್ಸುಗಳು ಮನೆಯಂಗಳಕ್ಕೆ ಬಂದರೂ ಕಾವು ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ ಎಂಬುದು ಹೆಮ್ಮೆಯ ವಿಚಾರವಾಗಿದ್ದು ಗ್ರಾಮದ ಪ್ರಮುಖರೆಲ್ಲರೂ ಸೇರಿ ಶಾಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಇಲ್ಲಿನ ಶಾಲೆಯ ಅಭಿವೃದ್ದಿಗೆ ಕಾರಣರಾಗಿದ್ದಾರೆ. ತಮ್ಮ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ಪ್ರತೀಯೊಬ್ಬ ತಂದೆ ತಾಯಿ ಆಸೆಪಡುತ್ತಾರೆ ಆ ಆಸೆಯನ್ನು ಕಾವು ಶಾಲೆಯಲ್ಲಿ ಈಡೇರಿಸಲಾಗುತ್ತದೆ. ಗ್ರಾಮಸ್ಥರು ಮನಸ್ಸು ಮಾಡಿದರೆ ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗಿಂತಲೂ ಭಿನ್ನವಾಗಿ ರೂಪಿಸಬಹುದು ಎಂಬುದಕ್ಕೆ ಕಾವು ಸರಕಾರಿ ಶಾಲೆಯೇ ಸಾಕ್ಷಿಯಾಗಿದೆ, ಇಲ್ಲಿನ ಶಿಕ್ಷಕರ ಬಗ್ಗೆಯೂ ಜನರಲ್ಲಿ ಅಪಾರವಾದ ಗೌರವ ಇದ್ದು ಅದನ್ನು ಉಳಿಸಿಕೊಂಡು ಹೋಗುವ ಮೂಲಕ ಮಕ್ಕಳ ಏಳಿಗೆಗಾಗಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಸಚ್ಚುತ್ತ ಮೂಡಿತ್ತಾಯರು ಹೇಳಿದರು.
ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್‌ಮಣಿಯಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ತನ್ನ ಗ್ರಾಮದಲ್ಲಿ ಇಂತಹದೊಂದು ಮಾದರಿ ಶಾಲೆಯ ಇರುವುದು ಅತ್ಯಂತ ಸಂತೋಷದ ವಿಚಾರವಾಗಿದೆ. ಇಲ್ಲಿನ ಆಂಗ್ಲ ಮಾಧ್ಯಮ ತರಗತಿಗೆ ಪಕ್ಕದ ಗ್ರಾಮಗಳಿಂದಲೂ ವಿದ್ಯಾರ್ಥಿಗಳನ್ನು ದಾಖಲು ಮಾಡುತ್ತಿರುವುದು ಇಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸನ್ಮಾನ ಕಾರ್ಯಕ್ರಮ
ರಾಜ್ಯಮಟ್ಟದ ಅತ್ಯುತ್ತಮ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಶಶ್ತಿಯನ್ನು ಪಡೆದುಕೊಂಡಿರುವ ಶಾಲೆಯ ದೈಹಿಕ ಶಿಕ್ಷಕಿ ವಸಂತಿ ಟೀಚರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಫಲಪುಷ್ಪ, ಫಲಕಗಳನ್ನು ನೀಡಿ ಶಾಲು ಹೊದಿಸಿ ಶಿಕ್ಷಕಿಯನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನೆಟ್ಟಣಿಗೆ ಮುಡ್ನೂರು ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಕಾವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯತೀಶ್ ಪೂಜಾರಿ, ಗ್ರಾಪಂ ಸದಸ್ಯ ಅಬ್ದುಲ್ ರಹಿಮಾನ್, ಕೃಷ್ಣಪ್ಪ ಗೌಡ ಡೆಂಬಾಳೆ, ಹಳೆ ವಿದ್ಯಾರ್ಥಿ ಸಂಗದ ಅಧ್ಯಕ್ಷ ಹರೀಶ್‌ಕುಂಜತ್ತಾಯ, ಜೋಲು ಅಲುಕಾಶ್ ಅಕೌಂಟ್ಸ್ ಮೆನೆಜರ್ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸವಿತಾಕುಮಾರಿ ವರದಿ ವಾಚಿಸಿ ವಂದಿಸಿದರು.