ಮಂಗಳೂರು:ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ ಸಲ್ಲಿಸಲಾಗಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಸ್ತಾವನೆಗಳ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ರೂ.957.39 ಕೋಟಿ ಮೊತ್ತದ ಎರಡು ಬೃಹತ್ ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿವರೆಗಿನ 28.49 ಕಿ.ಮೀ. ದ್ವಿಪಥ ಅಭಿವೃದ್ಧಿ ಯೋಜನೆಗೆ ರೂ.613.65 ಕೋಟಿ ಹಾಗೂ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು-ಮೂಡಿಗೆರೆ-ತುಮಕೂರು ಸೆಕ್ಷನ್‌ನಲ್ಲಿ 11.20 ಕಿ.ಮೀ.ಅಭಿವೃದ್ದಿಗೆ ರೂ.343.75 ಕೋಟಿ ಕಾಮಗಾರಿಗಳಿಗೆ ಕೇಂದ್ರ ಭೂಸಾರಿಗೆ ಸಚಿವಾಲಯ ಅನುಮೋದನೆ ನೀಡಿದ್ದು ಟೆಂಡರ್ ಆಹ್ವಾನಿಸಿದೆ.ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಾಣಿ-ಮೈಸೂರು ರಸ್ತೆಯ ಒಟ್ಟು 71.60 ಕಿ.ಮೀ ಚತುಷ್ಪಥ ಕಾಮಗಾರಿಯ ಸಮಗ್ರ ಯೋಜನಾ ವರದಿ ತಯಾರಿಸಲು ಟೆಂಡರ್ ಕರೆಯಲಾಗಿದೆ. ಕಾಮಗಾರಿಗೆ ಅಂದಾಜು ರೂ.1000 ಕೋಟಿಗೂ ಅಧಿಕ ವೆಚ್ಚ ಆಗಬಹುದು ಎಂದು ಅಂದಾಜಿಸಲಾಗಿದ್ದು, ಸಮಗ್ರ ಯೋಜನಾ ವರದಿ ಬಳಿಕ ನಿಖರ ವೆಚ್ಚ ತಿಳಿಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.