ಪುತ್ತೂರು: ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸುಮಾರು 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಫೆಲ್ಸಿ ಡಿಸೋಜಾರವರಿಗೆ ದಕ್ಷಿಣ ಕನ್ನಡ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಪರವಾಗಿ ಡಿ.31 ರಂದು ಬೀಳ್ಕೊಡುಗೆ ಸನ್ಮಾನ ಮಾಡಲಾಯಿತು.
ದ.ಕ ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಎಂ. ಮಾತನಾಡಿ,40 ವರ್ಷಗಳ ಸುದೀರ್ಘ ಸೇವೆಯಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ಸಾವಿರಾರು ವಿದ್ಯಾರ್ಥಿಗಳು ತಾಲೂಕು, ಜಿಲ್ಲೆ ರಾಜ್ಯ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ಗುಂಪು ಸ್ಪರ್ಧೆ ಹಾಗೂ ವೈಯಕ್ತಿಕ ಸ್ಪರ್ಧೆಗಳಲ್ಲಿ ಅನೇಕ ಬಾರಿ ಪದಕಗಳನ್ನು ಪಡೆದು ಇಲಾಖೆಗೆ ಮತ್ತು ನಮ್ಮ ತಾಲೂಕಿಗೆ, ಸಂಸ್ಥೆಗೆ ಕೀರ್ತಿಯನ್ನು ತರುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು, ತರಬೇತಿಯನ್ನು ನೀಡಿರುತ್ತಾರೆ. ಅತ್ಯಂತ ಸರಳ ಸಜ್ಜನಿಕೆಯ ಸೌಮ್ಯ ಸ್ವಭಾವದ ಶ್ರೀಮತಿ ಫೆಲ್ಸಿ ಡಿಸೋಜಾರವರ ಮುಂದಿನ ನಿವೃತ್ತ ಬದುಕು ಆಯುರಾರೋಗ್ಯದಿಂದ ಕೂಡಿರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ದೈ.ಶಿ.ಶಿ ಫೆಲ್ಸಿ ಡಿ’ಸೋಜರವರ ಪತಿ ಕ್ಲೋಡಿಯಸ್ ಡಿ’ಸೋಜ, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ_ ಎಲ್ಯಾಸ್ ಪಿಂಟೊ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.