ಜ.4: ಪುತ್ತೂರಿನಲ್ಲಿ ಪುತ್ತಿಗೆ ಶ್ರೀದ್ವಯರಿಗೆ ಪೌರ ಸನ್ಮಾನ – ಶ್ರೀ ಡಾ|ಸುಗುಣೇಂದ್ರ ತೀರ್ಥರಿಂದ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ

0

ಪುತ್ತೂರು: ವಿಶ್ವ ಗೀತಾ ಪರ್ಯಾಯ ಉಡುಪಿ ಶ್ರೀ ಕೃಷ್ಣ ಮಠ ಇದರ ಚತುರ್ಥ ಬಾರಿಗೆ ಪರ್ಯಾಯ ಪೀಠಾರೋಃಹಣ ಮಾಡಲಿರುವ ಉಡುಪಿ ಪುತ್ತಿಗೆ ಮಠಾಧೀಶರಾದ 1008 ಶ್ರೀ ಡಾ| ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರಿಗೆ ಪುತ್ತೂರಿನಲ್ಲಿ ಪೌರ ಸನ್ಮಾನ ಕಾರ್ಯಕ್ರಮ ಜ.4ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ಅದೇ ರೀತಿ ಶ್ರೀಗಳ ಸಂಕಲ್ಪದಂತೆ ಆತ್ಮೋದ್ದಾರ ಮತ್ತು ಲೋಕ ಕಲ್ಯಾಣಾರ್ಥ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಕಾರ್ಯಕ್ರಮ ನಡೆಯಲಿದೆ ಎಂದು ಪೌರ ಸನ್ಮಾನ ಸಮಿತಿ ಅಧ್ಯಕ್ಷ ಬಲರಾಮ ಆಚಾರ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಸಂಜೆ ಶ್ರೀಗಳನ್ನು ಮಹಾಲಿಂಗೇಶ್ವರ ದೇವಸ್ಥನದ ಎದುರು ಪೂರ್ಣ ಕುಂಭ ಸ್ವಾಗತ ಮಾಡಲಾಗುವುದು. ಬಳಿಕ ನಟರಾಜ ವೇದಿಕೆಯಲ್ಲಿ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಅವರಿಗೆ ನಿಧಿ ಸಮರ್ಪಣೆ ಮಾಡಲಾಗುವುದು. ವಿವಿಧ ಸಂಘ ಸಂಸ್ಥೆಗಳಿಂದ, ಸಾರ್ವಜನಿಕರಿಂದ ಮಾಲಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಮಾಜಿ ಶಾಸಕ ಸಂಜೀವ ಮಠಂದೂರು, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿದ್ದು, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.|ಎಚ್ ಮಾಧವ ಭಟ್ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷರಾಗಿರುವ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ, ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ, ಭಾಸ್ಕರ ಬಾರ್ಯ, ಪ್ರಧಾನ ಕಾರ್ಯದರ್ಶಿ ದಿವಾಕರ ನಿಡ್ವಣ್ಣಾಯ ಉಪಸ್ಥಿತರಿದ್ದರು.

ಶ್ರೀಗಳಿಗೆ 2 ನೇ ಪೌರ ಸನ್ಮಾನ
ಶ್ರೀ ಡಾ| ಸುಗುಣೇಂದ್ರ ಶ್ರೀಗಳಿಗೆ 2008ರಲ್ಲಿ ಪುತ್ತೂರಿನಲ್ಲಿ ಪೌರ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಇದೀಗ 2ನೇ ಬಾರಿ ಪುತ್ತೂರಿನಲ್ಲಿ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ವಿಶೇಷವಾಗಿ ಶ್ರೀಗಳು ಅಮೇರಿಕದಲ್ಲಿ ಅನೇಕ ಮಠಗಳನ್ನು ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಕಲ್ಪಣೆ ಮೂಡಿಸಿದ್ದಾರೆ ಎಂದು ಸಮಿತಿ ಗೌರವಾಧ್ಯಕ್ಷ ಕೆ ಸೀತಾರಾಮ ರೈ ಸವಣೂರು ಅವರು ಹೇಳಿದರು.

LEAVE A REPLY

Please enter your comment!
Please enter your name here