ಮಹಿಳೆಗೆ 108 ಸಿಬ್ಬಂದಿಯಿಂದ ಮರುಜೀವ

0

ಉಪ್ಪಿನಂಗಡಿ: ಕೌಟುಂಬಿಕ ಕಲಹದ ವಿಷಮಗಳಿಗೆಯಲ್ಲಿ ವಿಷ ಸೇವಿಸಿ ಅಸ್ವಸ್ಥಳಾದ ಗೃಹಿಣಿಯೋರ್ವರನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿಗೆ ಕರೆದೊಯ್ಯುವ ವೇಳೆ 108 ಅಂಬುಲೆನ್ಸ್‌ನ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆಯಿಂದಾಗಿ ದಾರಿಯುದ್ದಕ್ಕೂ ದೇಹದೊಳಗಿನ ವಿಷವನ್ನು ಹೊರ ತೆಗೆಯುವ ಮೂಲಕ ಮಹಿಳೆಯ ಜೀವ ರಕ್ಷಣೆ ಮಾಡಿದ ಘಟನೆ ವರದಿಯಾಗಿದೆ.


ಡಿ. 29 ರಂದು ಮಧ್ಯಾಹ್ನದ ಸುಮಾರಿಗೆ ಉಪ್ಪಿನಂಗಡಿಯ ಮಠ ಪರಿಸರದ ಮಹಿಳೆಯೋರ್ವರು ವಿಷ ಸೇವಿಸಿ ಅಸ್ವಸ್ಥರಾದ ಸ್ಥಿತಿಯಲ್ಲಿ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಕರೆ ತರಲಾಗಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದ ಮಹಿಳೆಯನ್ನು ಅಗತ್ಯ ಚಿಕಿತ್ಸೆಯೊಂದಿಗೆ ಮಂಗಳೂರಿಗೆ ಕರೆದೊಯ್ಯುವ ಅನಿವಾರ್ಯತೆ ಎದುರಾಗಿತ್ತು. ದುರಾದೃಷ್ಠಾವಶಾತ್ ಉಪ್ಪಿನಂಗಡಿಯ 108 ಅಂಬುಲೆನ್ಸ್‌ನಲ್ಲಿ ಅಳವಡಿಸಲಾದ ಸೈರನ್ ಹಿಂದಿನ ದಿನ ಕೆಟ್ಟು ಹೋಗಿತ್ತು. ಉಪ್ಪಿನಂಗಡಿಯಿಂದ ಮಂಗಳೂರುವರೆಗಿನ ದಾರಿ ಮಧ್ಯೆ ಹಲವೆಡೆ ವಾಹನ ದಟ್ಟನೆ ಇರುವುದರಿಂದ ಸೈರನ್ ಇಲ್ಲದೆ ಅಂಬುಲೆನ್ಸ್ ನಲ್ಲಿ ರೋಗಿಯನ್ನು ಕರೆದೊಯ್ಯುವುದು ಅಸಾಧ್ಯವಾಗಿತ್ತು. ಈ ವೇಳೆ ಸ್ಥಳೀಯ ಟೀಮ್ ದಕ್ಷಿಣ ಕಾಶಿ ಅಂಬುಲೆನ್ಸ್ ಅನ್ನು ಸೈರನ್ ಸೇವೆಗಾಗಿ ಬಳಸಿಕೊಂಡು ಅಸ್ವಸ್ಥ ಮಹಿಳೆಯನ್ನು 108 ಅಂಬುಲೆನ್ಸ್ ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಒಟ್ಟು 50 ನಿಮಿಷಗಳಾವಧಿಯ ಈ ಪ್ರಯಾಣದುದ್ದಕ್ಕೂ ಅಸ್ವಸ್ಥ ಮಹಿಳೆಯ ದೇಹದಲ್ಲಿದ್ದ ವಿಷವನ್ನು ಪೂರ್ಣ ಪ್ರಮಾಣದಲ್ಲಿ ಹೊರತೆಗೆಯುವಲ್ಲಿ 108 ಅಂಬುಲೆನ್ಸ್ ನ ಸಿಬ್ಬಂದಿ ಯಶಸ್ವಿಯಾಗಿದ್ದರು. ಅವರು ತೋರಿದ ಕೌಶಲ್ಯತೆಯ ಫಲವಾಗಿ ಮಹಿಳೆ ಮುಂದಿನ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿ ಅಪಾಯದಿಂದ ಪಾರಾಗಿದ್ದಾರೆ. ಮಂಗಳವಾರದಂದು ತೀವ್ರ ನಿಗಾ ವಿಭಾಗದಿಂದ ವಾರ್ಡ್ ಗೆ ಸ್ಥಳಾಂತರಗೊಂಡಿದ್ದಾರೆ.


108 ಸಿಬ್ಬಂದಿಯ ಇಚ್ಚಾಶಕ್ತಿಯಿಂದ ಮಹಿಳೆಯ ಜೀವ ಉಳಿಯಿತು:
ಅಂದು ವಿಷ ಸೇವಿಸಿ ಅಸ್ವಸ್ಥರಾದ ಮಹಿಳೆಯನ್ನು ಆಸ್ಪತ್ರೆಗೆ ನಾವು ಕರೆ ತಂದಿದ್ದೇವು. ದೇಹದೊಳಗಿನಿಂದ ವಿಷವನ್ನು ಹೊರತೆಗೆಯದೇ ಆಕೆಯನ್ನು ಮಂಗಳೂರಿಗೆ ಕರೆದೊಯ್ಯುತ್ತೇವೆ ಎಂದರೆ ಆಕೆ ಮಾಣಿ ತನಕ ಮಾತ್ರ ಬದುಕಿ ಉಳಿಯಬಲ್ಲರು ಎಂದು ಆಸ್ಪತ್ರೆಯ ವೈದ್ಯರು ಹೇಳಿದಾಗ ನಾವು ಅತಂತ್ರರಾದೆವು. 108 ಅಂಬುಲೆನ್ಸ್ ಬಳಸೋಣ ಎಂದರೆ ಅದರಲ್ಲಿ ಸೈರನ್ ಕೆಟ್ಟು ಹೋಗಿತ್ತು. ಈ ವೇಳೆ 108ರ ಶುಶ್ರೂಷಕ ಅವಿನಾಶ್ ಎಚ್.ಎಂ. ತೋರಿದ ಧೈರ್ಯ ಮತ್ತು ಜಾಣ್ಮೆ ಮೆಚ್ಚಲೇ ಬೇಕು. ಸೈರನ್ ಮೊಳಗಿಸಿಕೊಂಡು ದಾರಿ ಒದಗಿಸಲು ಟೀಮ್ ದಕ್ಷಿಣ ಕಾಶಿಯ ಅಂಬುಲೆನ್ಸ್‌ನ ಸಹಕಾರ ಪಡೆದ ಅವರು, ದಾರಿಯುದ್ದಕ್ಕೂ ಮಹಿಳೆಯ ದೇಹದಿಂದ ವಿಷವನ್ನು ಹೊರಕ್ಕೆ ತೆಗೆಯಲು ತೋರಿದ ಕಾಳಜಿ, ಕೌಶಲ್ಯತೆ ಶ್ಲಾಘನೀಯವಾಗಿತ್ತು. ಮಂಗಳೂರು ತಲುಪಲು ನಾವು ಬಳಸಿಕೊಂಡ 50 ನಿಮಿಷದಲ್ಲಿ ಪ್ರಾಣ ರಕ್ಷಕನಾಗಿ ಕಾರ್ಯನಿರ್ವಹಿಸಿದ ಅವಿನಾಶ್‌ರವರ ಕಾರ್ಯವೈಖರಿಂದಾಗಿ ಮಹಿಳೆಯು ಅಪಾಯದ ಸ್ಥಿತಿಯಿಂದ ಹೊರಬಂದಿದ್ದಾರೆ. ಇಬ್ಬರು ಮಕ್ಕಳ ತಾಯಿಗೆ ಪುನರ್ ಜನ್ಮ ನೀಡಿರುವುದಕ್ಕೆ 108 ಅಂಬುಲೆನ್ಸ್ ತಂಡ ನಿಜಕ್ಕೂ ಕಾರಣವಾಗಿದೆ ಎಂದು ಟೀಮ್ ದಕ್ಷಿಣ ಕಾಶಿಯ ಚಾಲಕ ರವಿನಂದನ್ ಹೆಗ್ಡೆ ಅಭಿಪ್ರಾಯಿಸಿದ್ದಾರೆ.

LEAVE A REPLY

Please enter your comment!
Please enter your name here