ಪುತ್ತೂರು:ತಮ್ಮ ವರ್ಗ ಜಾಗದ ಬೇಲಿ ತೆರವು ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನೆಲ್ಯಾಡಿ ಮರಂಕಲದಲ್ಲಿ ಜ.6ರಂದು ನಡೆದಿದ್ದು ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಬೇಬಿ ಜೋಸೆಫ್ ಮತ್ತು ತಹಸೀಲ್ದಾರ್, ಪೊಲೀಸರ ವಿರುದ್ದವೇ ಅವರು ಅರೋಪ ಹೊರಿಸಿದ್ದಾರೆ.
ನೆಲ್ಯಾಡಿ ಮರಂಕಲ ನಿವಾಸಿ ಮೋಹನ್ ನಾಯ್ಕ ಅವರ ಪತ್ನಿ ವಾರಿಜಾ(34ವ)ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು.`ನಾನು ಮತ್ತು ಗಂಡ, ನನ್ನ ತಂದೆ, ತಾಯಿ ಜೊತೆ ನೆಲ್ಯಾಡಿಯ ಮರಂಕಲದಲ್ಲಿ ವಾಸ್ತವ್ಯ ಹೊಂದಿದ್ದು, ನಮಗೆ 1.18 ಎಕ್ರೆ ಜಮೀನು ಇದೆ.ಬೇಬಿ ಜೋಸೆಫ್ ಎಂಬವರು ಕೆಲ ಸಮಯಗಳ ಹಿಂದೆ ಯಾವುದೋ ಕೆಲಸಕ್ಕಾಗಿ ನಮ್ಮ ಜಾಗದಿಂದ ತಾತ್ಕಾಲಿಕವಾಗಿ ದಾರಿಗೆ ಮನವಿ ಮಾಡಿದಂತೆ ಅವರಿಗೆ ತಾತ್ಕಾಲಿಕ ದಾರಿ ಬಟ್ಟು ಕೊಡಲಾಗಿತ್ತು.ಅವರ ಕೆಲಸ ಮುಗಿದು ಅವರಿಗೆ ಬೇರೆ ದಾರಿಯಾದ ಬಳಿಕ ನಾವು ತಾತ್ಕಾಲಿಕ ದಾರಿಯಿನ್ನು ಮುಚ್ಚಿದ್ದೆವು. ಆದರೆ ಬೇಬಿ ಜೋಸೆಫ್ ಅವರು ನಮ್ಮ ತಾತ್ಕಾಲಿಕ ದಾರಿಯನ್ನು ಖಾಯಂ ಮಾಡುವಂತೆ ಪಟ್ಟು ಹಿಡಿದು ನಮ್ಮ ವರ್ಗ ಜಾಗದ ಬೇಲಿ ತೆರವು ಮಾಡಿದ್ದಾರೆ.ಜ.6ರಂದು ತಹಶೀಲ್ದಾರ್ ಮತ್ತು ಪೊಲೀಸರೊಂದಿಗೆ ಬಂದು ನಮ್ಮ ಬೇಲಿಯನ್ನು ತೆರವು ಮಾಡಿದ್ದಾರೆ.ಇದು ದಲಿತ ಕುಟುಂಬಕ್ಕೆ ಮಾಡಿದ ಅನ್ಯಾಯವಾಗಿದ್ದು, ಇದರಿಂದ ನೊಂದ ನಾನು ಆತ್ಮಹತ್ಯೆಗೆ ಯತ್ನಿಸಿದ್ದೆ.ಆದರೆ ನನ್ನ ಸಹೋದರ ಸದಾನಂದ ನನ್ನನ್ನು ಪುತ್ತೂರು ಅಸ್ಪತ್ರೆಗೆ ದಾಖಲಿಸಿದ್ದಾನೆ’ ಎಂದು ವಾರಿಜಾ ಅವರು ತಿಳಿಸಿದ್ದಾರೆ.
ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು:
ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿದ ಬೇಬಿ ಜೋಸೆಫ್ ಮತ್ತು ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ಅಂಬೇಡ್ಕರ್ ಆಪತ್ಭಾಂಧವ ಸಂಘಟನೆಯ ರಾಜ್ಯಾಧ್ಯಕ್ಷ ರಾಜು ಹೊಸ್ಮಠ ಮತ್ತು ಮರಾಠಿ ಸಂರಕ್ಷಣಾ ಸಮಿತಿಯ ಅಶೋಕ್ ಅವರು ಆಗ್ರಹಿಸಿದ್ದಾರೆ.ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಿ ಆಕೆಗೆ ಧೈರ್ಯ ತುಂಬಿ, ಮುಂದೆ ನ್ಯಾಯಾಯಕ್ಕಾಗಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.