ಆಲಂಕಾರು: ಒಕ್ಕಲಿಗ ಗೌಡರ ’ ಕ್ರೀಡಾ ಸಂಭ್ರಮ’

0

ಕ್ರೀಡೆಯಿಂದ ಸಹಬಾಳ್ವೆ, ಸಾಮರಸ್ಯ ಮೂಡಲಿದೆ: ಸಂಜೀವ ಮಠಂದೂರು

ಕಡಬ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ಗ್ರಾಮ ಸಮಿತಿ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ ಇದರ ’ಕ್ರೀಡಾ ಸಂಭ್ರಮ 2023-24’ ಆಲಂಕಾರು ಶ್ರೀ ದುರ್ಗಾಂಬಾ ಮೈದಾನದಲ್ಲಿ ಜ.7ರಂದು ನಡೆಯಿತು.

ನಿವೃತ್ತ ಅಧ್ಯಾಪಕರಾದ ಗುಮ್ಮಣ್ಣ ಗೌಡ ರಾಮಕುಂಜ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಧ್ವಜವು ಒಗ್ಗಟ್ಟು, ಸ್ನೇಹ, ವಿಜಯದ ಸಂಕೇತವಾಗಿದೆ. ಇದರಲ್ಲಿ ನಾವೆಲ್ಲರೂ ಸಂಘಟಿತರಾಗಿ ಸೌಹಾರ್ದತೆಯೊಂದಿಗೆ ಸಂಭ್ರಮಿಸಿ ವಿಜೇತರಾಗಬೇಕೆಂದು ಹೇಳಿ ಶುಭಹಾರೈಸಿದರು. ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಆಲಂಕಾರು ವಲಯ ಸದಾ ಚಟುವಟಿಕೆಯಲ್ಲಿ ಇರುವ ವಲಯ ಆಗಿದೆ. ಮುಂದಿನ ಪೀಳಿಗೆಗೆ ಇತಿಹಾಸ ನಿರ್ಮಾಣ ಮಾಡಲು ಪ್ರೇರಣೆ ಕೊಡುವ ಕೆಲಸ ಈ ಕ್ರೀಡಾಕೂಟದಿಂದ ಆಗಲಿದೆ. ಕ್ರೀಡಾಕೂಟದ ಜೊತೆಗೆ ಸಮುದಾಯದ ವಿಚಾರ ತಿಳಿದುಕೊಳ್ಳುವ ಕೆಲಸವೂ ಆಗಬೇಕು. ಸಹಬಾಳ್ವೆ, ಸಾಮರಸ್ಯ ಮೂಡಿಸುವುದು ಕ್ರೀಡಾಕೂಟದ ಉದ್ದೇಶವಾಗಿದೆ ಎಂದರು ಹೇಳಿದರು. ಪ್ರತಿಯೊಂದು ಸಮಾಜವೂ ದೇಶಕ್ಕೆ ಬೇರೆ ಬೇರೆ ರೀತಿಯಲ್ಲಿ ಕೊಡುಗೆ ನೀಡಿದೆ. ನಾವು ಸಂಘಟಿತರಾಗಿ ಅಸ್ತಿತ್ವ ಉಳಿಸಿಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ವ್ಯಕ್ತಿಗೂ, ಆ ಸಮಾಜಕ್ಕೂ ಗೌರವ ಸಿಗಲು ಸಾಧ್ಯವಿಲ್ಲ. ಒಕ್ಕಲಿಗ ಸಮುದಾಯಕ್ಕೆ ಗೌರವ ಸಿಗಲು ನಾವು ಸಂಘಟಿತರಾಗಬೇಕು. ಯುವಕರು ಮುಂಚೂಣಿಗೆ ಬರಲು ಕ್ರೀಡೆಯೂ ಸಹಕಾರಿ. ಆದ್ದರಿಂದ ಈ ಕ್ರೀಡಾ ಸಂಭ್ರಮ ಪ್ರತಿ ಮನೆಯ ಸಂಭ್ರಮ ಆಗಬೇಕು. ಆಲಂಕಾರು ವಲಯ ವ್ಯಾಪ್ತಿಯ ಆರೂ ಗ್ರಾಮದ ಸಮಾಜ ಬಾಂಧವರೂ ಇದರಲ್ಲಿ ತೊಡಗಿಕೊಳ್ಳಬೇಕೆಂದು ಸಂಜೀವ ಮಠಂದೂರು ಹೇಳಿದರು.

ಕ್ರೀಡೆಯಿಂದ ಸಂಘಟನೆ ಆಗುತ್ತದೆ: ಚಿದಾನಂದ ಬೈಲಾಡಿ
ಅತಿಥಿಯಾಗಿದ್ದ ಪುತ್ತೂರು ತಾಲೂಕು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ, ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದಲ್ಲಿ ವಲಯ ರಚನೆಗೆ ಆಲಂಕಾರು ಒಕ್ಕಲಿಗ ಗೌಡ ಸಂಘವೇ ಪ್ರೇರಣೆ ನೀಡಿತ್ತು. ಇಲ್ಲಿ ಪ್ರತಿ ವರ್ಷವೂ ಕ್ರೀಡಾಕೂಟ ನಡೆಯುತ್ತದೆ. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಶಾಖೆ ಆಲಂಕಾರಿನಲ್ಲಿ ಆರಂಭಕ್ಕೂ ಇಲ್ಲಿ ಉತ್ತಮ ರೀತಿಯ ಸಹಕಾರ ದೊರೆತಿದೆ. ಈಗ ಕಡಬ ಹಾಗೂ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಂಘವು ಬೌಗೋಳಿಕವಾಗಿ ಬೇರೆ ಬೇರೆ ಆದರೂ ಮಾನಸಿಕವಾಗಿ ಒಂದೇ ಆಗಿದೆ. ಕ್ರೀಡಾಕೂಟ ನಿಮಿತ್ತ ಮಾತ್ರ. ಇದರಿಂದ ಸಮಾಜದ ಸಂಘಟನೆ ಆಗುತ್ತದೆ. ಸಂಘ ಇನ್ನಷ್ಟೂ ಬೆಳೆಯಲಿ. ಸಮಾಜದ ಯಾವುದೇ ವ್ಯಕ್ತಿಗೆ ತೊಂದರೆಯಾದರೂ ನೆರವಿಗೆ ಮುಂದಾಗಬೇಕೆಂದು ಹೇಳಿದರು. ಕ್ರೀಡಾಕೂಟದ ಜೊತೆಗೆ ಸಮಾಜದ 13 ಮಂದಿ ಕ್ರೀಡಾಪಟುಗಳಿಗೆ, ಐವರು ಹಿರಿಯರನ್ನು ಸನ್ಮಾನಿಸುವ ಮೂಲಕ ಆಲಂಕಾರು ಒಕ್ಕಲಿಗ ಗೌಡ ಸಂಘವು ಮಾದರಿ ಕಾರ್ಯಕ್ರಮ ಮಾಡಿದೆ ಎಂದರು.

ಸದೃಢ ಸಮಾಜ ನಿರ್ಮಾಣವೇ ಧ್ಯೇಯ: ಸುರೇಶ್ ಬೈಲು
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರು ಮಾತನಾಡಿ, ಕ್ರೀಡಾಕೂಟದ ಮೂಲಕ ಸಂಘಟನೆ ಸಾಧ್ಯವಿದೆ. ಯುವಕರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು. ಆರೋಗ್ಯಪೂರ್ಣ ಸಂಘಟನೆ ಆಗಬೇಕೆಂದು ಹೇಳಿದ ಅವರು ಡಿ.೨೬ರಂದು ಕಡಬದಲ್ಲಿ ನಡೆದ ಒಕ್ಕಲಿಗ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದ ಯಶಸ್ವಿಗೆ ಆಲಂಕಾರು ವಲಯದಿಂದ ಉತ್ತಮ ರೀತಿಯ ಸಹಕಾರ ದೊರೆತಿದೆ. ಸದೃಢ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಒಂದೇ ಮನಸ್ಸಿನಿಂದ ಒಗ್ಗಟ್ಟಿನಲ್ಲಿ ಕೆಲಸ ಮಾಡುವ. ಇದಕ್ಕೆ ತಾಯಿ ಮನೆಯಾಗಿರುವ ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದಿಂದಲೂ ಸಹಕಾರ ಸಿಗಬೇಕೆಂದು ಹೇಳಿದರು.

ಚಿಂತೆಗೆ ಕ್ರೀಡೆ ಪರಿಹಾರ: ಎವಿ ನಾರಾಯಣ
ಪುತ್ತೂರು ಕೃಷ್ಣನಗರ ಎವಿಜಿ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕರಾದ ಎ.ವಿ.ನಾರಾಯಣ ಅವರು ಮಾತನಾಡಿ, ಚಿಂತೆಗೆ ಪರಿಹಾರ ಕ್ರೀಡೆ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಒಂದೇ ಕಡೆ ಕೇಂದ್ರೀಕೃತವಾಗಿರುತ್ತಿದೆ. ಇದರಿಂದ ಮಾನಸಿಕ ಸ್ಥೈರ್ಯ, ಏಕಾಗ್ರತೆ ಸಿಗುತ್ತದೆ. ಆದ್ದರಿಂದ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.

ಕ್ರೀಡೆ ದೇಹಕ್ಕೆ ಟಿಟಿ ಇಂಜೆಕ್ಷನ್ ನೀಡಿದಂತೆ: ಸುಂದರ ಗೌಡ
ನೋಟರಿ, ನ್ಯಾಯವಾದಿ ಸುಂದರ ಗೌಡ ಅವರು ಮಾತನಾಡಿ, ಕ್ರೀಡಾಕೂಟ ಆಯೋಜಿಸುವ ಮೂಲಕ ಸಮಾಜ ಬಾಂಧವರಿಗೆ ಉತ್ತಮ ಸಂದೇಶ ಕೊಡುವ ಕೆಲಸ ಆಗಿದೆ. ಹಿರಿಯರು ಕಿರಿಯರಿಗೆ ಜೀವನ ರೂಪಿಸಲು ಮಾರ್ಗದರ್ಶನ ನೀಡಬೇಕು. ಸಂಘಟನೆ ಸಮುದಾಯಕ್ಕೆ ಮಾತ್ರವಲ್ಲ, ಸಮಾಜಕ್ಕೆ ಮಾದರಿಯಾಗಬೇಕು. ಕ್ರೀಡೆಯು ಶಾರೀರಿಕ, ಮಾನಸಿಕ ನೋವುಗಳಿಗೆ ಟಿಟಿ ಇಂಜೆಕ್ಷನ್ ನೀಡಿದಂತೆ ಎಂದು ಹೇಳಿದರು.

ಸಂಭ್ರಮಿಸುವ ದಿನವಾಗಿದೆ: ಬಾಲಕೃಷ್ಣ ಗೌಡ
ವಿಜಯ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಬಾಲಕೃಷ್ಣ ಗೌಡ ಕತ್ಲಡ್ಕ ಅವರು ಮಾತನಾಡಿ, ಕ್ರೀಡಾಕೂಟ ಸಮುದಾಯವನ್ನು ಒಗ್ಗೂಡಿಸಿ ಸಂಭ್ರಮಿಸುವ ದಿನವಾಗಿದೆ. ಕ್ರೀಡೆಯಲ್ಲಿ ಗೆಲುವು, ಸೋಲು ಮುಖ್ಯವಲ್ಲ. ಯುವ ಪೀಳಿಗೆಯನ್ನು ಹುರಿದುಂಬಿಸಿ, ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಕ್ರೀಡೆಯಿಂದ ದೈಹಿಕ, ಮಾನಸಿಕ ನೆಮ್ಮದಿಯೊಂದಿಗೆ ಸಾಮಾನ್ಯ ಜ್ಞಾನವೂ ಸಿಗುತ್ತದೆ ಎಂದು ಹೇಳಿದರು.

ಮನಸ್ಸು ಮನಸ್ಸುಗಳನ್ನು ಬೆಸೆಯಲಿದೆ: ತೇಜಸ್ವಿನಿ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖಾ ಸಲಹಾ ಸಮಿತಿ ಅಧ್ಯಕ್ಷೆ ತೇಜಸ್ವಿನಿಶೇಖರ ಗೌಡ ಮಾತನಾಡಿ, ಕ್ರೀಡೆಯು ಮನಸ್ಸು, ಮನಸ್ಸುಗಳನ್ನು ಬೆಸೆಯಲಿದೆ. ಹೊಸ ಪ್ರತಿಭೆಗಳ ಹುಟ್ಟಿಗೂ ಕಾರಣವಾಗುತ್ತದೆ. ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಸಮಾಜ ಬಾಂಧವರು ಬೆಳೆಯುವಂತಾಗಬೇಕೆಂದು ಹೇಳಿದರು.

ಆಲಂಕಾರಿನಲ್ಲಿ 10 ಸೆಂಟ್ಸ್ ಜಾಗ ಆಗಬೇಕು: ರಾಮಣ್ಣ ಗೌಡ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ದೋಳ ಮಾತನಾಡಿ, ಕಳೆದ 10ವರ್ಷದಿಂದ ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘ ನಿರಂತರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. 3 ಸಲ ಕ್ರೀಡಾಕೂಟ ಆಯೋಜಿಸಿದೆ. ಉಚಿತ ಕಣ್ಣಿನ ತಪಾಸಣೆ ಶಿಬಿರ, ಕನ್ನಡಕ ವಿತರಣೆ, ಸಾರ್ವಜನಿಕ ಬಸ್ಸು ನಿಲ್ದಾಣದ ನಿರ್ಮಾಣ, ನೀರಿನ ಟ್ಯಾಂಕ್ ನಿರ್ಮಾಣ, ಶಾಲೆಗೆ ವಾಟರ್ ಫಿಲ್ಟರ್ ಕೊಡುಗೆ, ಧನಸಹಾಯ, ಪೆರಿಯಡ್ಕ ಶಾಲೆಗೆ ಸಮವಸ್ತ್ರ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿದೆ. ಆಲಂಕಾರಿನಲ್ಲಿ ಸಂಘಕ್ಕೆ 10 ಸೆಂಟ್ಸ್ ಜಾಗ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.


ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೀನಪ್ಪ ಗೌಡ ಕೊಂಡಾಡಿ, ಮಂಜಪ್ಪ ಗೌಡ, ಭವಾನಿಶಂಕರ, ದಯಾನಂದ ಗೌಡ ಆಲಡ್ಕ, ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಗೋಪಾಲ ಗೌಡ ಕಕ್ವೆ, ಡೊಂಬಯ್ಯ ಗೌಡ, ತಿಮ್ಮಪ್ಪ ಗೌಡ ಸಂಕೇಶ, ಜಯಶ್ರೀ ಪಜ್ಜಡ್ಕ, ಆನಂದ ಗೌಡ ಪಜ್ಜಡ್ಕ ಅತಿಥಿಗಳಿಗೆ ಶಾಲುಹಾಕಿ, ಹೂ ನೀಡಿ ಗೌರವಿಸಿದರು. ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಕ್ರಪಾಣಿ ಬಾಕಿಲ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಸದಾನಂದ ಕುಂಟ್ಯಾನ ವಂದಿಸಿದರು. ಶಿಕ್ಷಕ ಪ್ರಕಾಶ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಕ್ರೀಡಾಕೂಟ ನಡೆಯಿತು. ಸಂಜೆ ಸಮಾರೋಪ ಸಮಾರಂಭ ನಡೆಯಿತು.


ರಾಜ್ಯ ಒಕ್ಕಲಿಗ ಸಂಘದ ಸದಸ್ವತ್ವ ಪಡೆಯಿರಿ:
ರಾಜ್ಯ ಒಕ್ಕಲಿಗ ಸಂಘದಲ್ಲಿ ದ.ಕ.ಜಿಲ್ಲೆಯ ಒಕ್ಕಲಿಗ ಸಂಘದ ಸದಸ್ಯರ ಸಂಖ್ಯೆ ಕಡಿಮೆ ಇದೆ. ಸದಸ್ಯತ್ವ ಹೆಚ್ಚಿಸಲು ರಾಜ್ಯಾಧ್ಯಕ್ಷರು ಅವಕಾಶ ಮಾಡಿಕೊಟ್ಟಿದ್ದು ಸುಮಾರು 2500 ಅರ್ಜಿಗಳನ್ನು ಪುತ್ತೂರು ತಾಲೂಕು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅರ್ಜಿಗಳನ್ನು ಸಹಕಾರ ಸಂಘದ ಆಲಂಕಾರು ಶಾಖೆಗೂ ಕಳುಹಿಸಿಕೊಡಲಾಗುವುದು. 18 ವರ್ಷ ಮೇಲ್ಪಟ್ಟವರು 1650 ರೂ.ಶುಲ್ಕ ಹಾಗೂ ಅಗತ್ಯ ದಾಖಲೆ ನೀಡಿ ಸದಸ್ಯತ್ವ ಪಡೆದುಕೊಳ್ಳಬೇಕು. ಆಲಂಕಾರು ವಲಯದ 6 ಗ್ರಾಮಗಳಿಂದಲೂ ತಲಾ 100 ಮಂದಿಯಾದರೂ ಸದಸ್ಯತ್ವ ಪಡೆದುಕೊಳ್ಳಬೇಕು. ಸದಸ್ವತ್ವ ಇದ್ದಲ್ಲಿ ರಾಜ್ಯ ಒಕ್ಕಲಿಗ ಸಂಘದಿಂದ ಸಿಗುವ ಹಲವಾರು ಸವಲತ್ತು ಪಡೆದುಕೊಳ್ಳಬಹುದು.
ಸಂಜೀವ ಮಠಂದೂರು
ಮಾಜಿ ಶಾಸಕರು

ಪ್ರತಿಜ್ಞಾ ವಿಧಿ ಸ್ವೀಕಾರ:
ಆಲಂಕಾರು ಶ್ರೀ ದುಗಾಂಬಾ ವಿದ್ಯಾಲಯದಿಂದ ಕ್ರೀಡಾಪಟುಗಳು ಕ್ರೀಡಾಜ್ಯೋತಿ ತಂದರು. ಕ್ರೀಡಾಜ್ಯೋತಿ ಪಡೆದುಕೊಂಡ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಕ್ರೀಡಾಕೂಟ ಉದ್ಘಾಟಿಸಿದರು. ವಲಯ ಆರು ಗ್ರಾಮಗಳ ಧ್ವಜದೊಂದಿಗೆ ಪ್ರತಿಜ್ಞಾ ವಿಧಿ ಸ್ವೀಕಾರವೂ ನಡೆಯಿತು. ದೈಹಿಕ ಶಿಕ್ಷಣ ಶಿಕ್ಷಕ ರವಿ ನೆಕ್ಕಿಲಾಡಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಸನ್ಮಾನ:
ಮೆಸ್ಕಾಂನ ನಿವೃತ್ತ ಅಧಿಕಾರಿ ಲಿಂಗಪ್ಪ ಗೌಡ ಕಡೆಂಬ್ಯಾಳ್, ನಾಗಪ್ಪ ಗೌಡ ಮರುವಂತಿಲ ಈಶ್ವರ ಗೌಡ ಪಜ್ಜಡ್ಕ, ಪದ್ಮಪ್ಪ ಗೌಡ ಸಂಪ್ಯಾಡಿ ರಾಮಕುಂಜ, ಮಹಾಬಲ ಕಕ್ವೆ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹರಿಶ್ಚಂದ್ರ ಕೋಡ್ಲ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಗೆ ಗೌರವಾರ್ಪಣೆ
ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಸಮಾಜದ ವಿದ್ಯಾರ್ಥಿಗಳಾದ ದಿಲೀಪ್ ಗೌಡ ಕೊಯಿಲ, ಸೃಜನಾ ಆನೆಗುಂಡಿ, ಸತ್ಯ ನಾಡ್ತಿಲ, ಕೃತಿ ಕೇವಳ, ಲಿಖಿತ್ ಪರಕ್ಕಾಲ್, ಸನ್ವಿತ್ ಸೊರೊಳ್ತಡಿ, ನಿಶಾಂತ್ ಹಳೆನೇರೆಂಕಿ, ವಾತ್ಸಲ್ಯ ಕೊಯಿಲ, ಚಿನ್ಮಯಿ ಪಜ್ಜಡ್ಕ, ಯಶಸ್ವಿನಿ ಬಡ್ಡಮೆ, ಭವ್ಯ ಪಲ್ಲತ್ತಡ್ಕ, ಅನ್ವಿತಾ ಕುಂತೂರು ಹಾಗೂ ಅಲ್ವಿತ ಎರ್ಮಾಳ ಇವರಿಗೆ ಶಾಲು,ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here