ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ ಹಾಗೂ ಆರೋಗ್ಯ ರಕ್ಷಾ ಸಮಿತಿ ಸಂಪ್ಯ ಇದರ ಆಶ್ರಯದಲ್ಲಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ವೈದ್ಯಕೀಯ ಶಿಬಿರದ 22ನೇ ತಿಂಗಳ ವೈದ್ಯಕೀಯ ಶಿಬಿರವು ಜ.7ರಂದು ನಡೆಯಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿದ ನಗರಸಭಾ ಸದಸ್ಯ ರಮೇಶ್ ರೈ ಮಾತನಾಡಿ, ಸಾಧಾರಣ ಭಕ್ತರಾಗಿರುವ ನನ್ನನ್ನು ನಿಮ್ಮ ಮನೆ ಮಗನಂತೆ ಸ್ವೀಕರಿಸಿ ಗೌರವಿಸಿರುವುದು ಸಂತಸ ತಂದಿದೆ. ನಾನು ಸದಾ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸಲಿದ್ದೇನೆ. ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಲ್ಲಿಸುವ ಸೇವೆಗೆ ಪ್ರತಿಯೊಬ್ಬರಿಗೂ ಸದಾ ದೇವರ ಆಶಿರ್ವಾದವಿದೆ. ಉಪ ಚುನಾವಣೆಯು ಯುದ್ದದ ರೀತಿಯಲ್ಲಿತ್ತು. ದೇವರ ಅನುಗ್ರಹ, ನಿಮ್ಮೆಲ್ಲರ ಆಶಿರ್ವಾದದಿಂದ ನನ್ನ ಗೆಲುವಾಗಿದೆ ಎಂದರು.
ಜಾತ್ರೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೆ. ಮಾತನಾಡಿ, ಡಾ. ಸುರೇಶ್ ಪುತ್ತೂರಾಯರವರ ನೇತೃತ್ವದಲ್ಲಿ ನಡೆಯುವ ಸಂಪ್ಯ ದೇವಸ್ಥಾನದ ಶಿಬಿರವು ಜಿಲ್ಲೆಯಲ್ಲಿಯೇ ಪ್ರಸಿದ್ದಿ ಪಡೆದಿದೆ. ದೇವರ ಪ್ರಸಾದ ರೂಪದಲ್ಲಿ ಭಕ್ತರಿಗೆ ಸುಲಭ ಹಾಗೂ ಶೀಘ್ರವಾಗಿ ಚಿಕಿತ್ಸೆ, ಔಷಧಿಗಳ ದೊರೆಯುತ್ತಿದೆ. ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಆವಶ್ಯಕತೆಯಿದೆ. ಇಂದಿನ ಶಿಬಿದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದ ಅವರು ಕಳೆದ 22 ಶಿಬಿರಗಳಲ್ಲಿ ಇದೇ ಮೊದಲ ಬಾರಿಗೆ ವೇದಿಕೆಯಲ್ಲಿರುವ ರಮೇಶ್ ರೈಯವರು ದೇವಸ್ಥಾನದ ಜಾತ್ರೋತ್ಸವ, ವೈದ್ಯಕೀಯ ಶಿಬಿರ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಹಕಾರ, ಪ್ರೋತ್ಸಾಹ ನೀಡುತ್ತಿರುವವರಲ್ಲಿ ಪ್ರಮುಖರಾಗಿದ್ದಾರೆ ಎಂದರು. ದೇವಸ್ಥಾನದ ಜಾತ್ರೋತ್ಸವ ಸಮಿತಿ ಉಪಾಧ್ಯಕ್ಷ ಶ್ರೀ ಕೃಷ್ಣ ಭಟ್, ನವಚೇತನಾ ಯುವಕ ಮಂಡಲದ ಮಾಜಿ ಅಧ್ಯಕ್ಷ ನಾಗೇಶ್ ಸಂಪ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ನಗರ ಸಭಾ ಉಪ ಚುನಾವಣೆಯಲ್ಲಿ ಸದಸ್ಯರಾಗಿ ಚುನಾಯಿತರಾದ ದೇವಸ್ಥಾನದ ಉತ್ಸವ ಸಮಿತಿ ಸದಸ್ಯ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿರುವ ರಮೇಶ್ ರೈ ಮೊಟ್ಟೆತ್ತಡ್ಕರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪ್ರಥಮ ಚಿಕಿತ್ಸೆಯ ಮಾಹಿತಿ:
ಈ ಬಾರಿಯ ಶಿಬಿರದಲ್ಲಿ ವಿಶೇಷವಾಗಿ ಶ್ವಾಸಕೋಶ ತಜ್ಞ ಡಾ. ಪ್ರೀತಿರಾಜ್ ಬಲ್ಲಾಳ್, ಪ್ರಥಮ ಚಿಕಿತ್ಸೆ ಬಗ್ಗೆ ವಿಶೇಷ ಮಾಹಿತಿ, ಹೃದಯಾಘಾತ, ವಿಷ ಸೇವನೆ ಮತ್ತು ನೀರಿನಲ್ಲಿ ಮುಳುಗಿದ ಸಂದರ್ಭದಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ಎಲ್‌ಸಿಡಿ ಪ್ರಾಜೆಕ್ಟರ್ ಮೂಲಕ ವಿವರಿಸಿದರು.
ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಶ್ವಾಸಕೋಶ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮಧುಮೇಹ ರಕ್ತಪರೀಕ್ಷೆ ಹಾಗೂ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು. ತಜ್ಞ ವೈದ್ಯ ಡಾ.ಸುರೇಶ್ ಪುತ್ತೂರಾಯ, ಎಲುಬು ಮತ್ತು ಕೀಲು ತಜ್ಞ ಡಾ. ಸಚಿನ್ ಶಂಕರ್ ಹಾರಕೆರೆ, ಶ್ವಾಸಕೊಶ ತಜ್ಞ ಡಾ.ಪ್ರೀತಿರಾಜ್ ಬಲ್ಲಾಳ್, ಆಯುರ್ವೇದ ತಜ್ಞರಾದ ಡಾ. ಸಾಯಿ ಪ್ರಕಾಶ್ ಹಾಗೂ ಡಾ.ಗ್ರೀಷ್ಮಾ ಶಿಬಿರದಲ್ಲಿ ವೈದ್ಯಕೀಯ ತಪಾಸಣೆ ನಡೆಸಿಕೊಟ್ಟರು. ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಪುತ್ತಿಲ ಪರಿವಾರ ಆರ್ಯಾಪು ಘಟಕ, ಐಕ್ಯ ಕಲಾ ಸೇವಾ ಟ್ರಸ್ಟ್ ಮೊಟ್ಟೆತ್ತಡ್ಕ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ ಹಾಗೂ ಹಲವು ಔಷಧಿ ಕಂಪೆನಿಗಳು ಹಾಗೂ ಭಕ್ತಾದಿಗಳು ಶಿಬಿರದಲ್ಲಿ ಸಹಕರಿಸಿದರು. ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಊಟ, ಉಪಾಹಾರವನ್ನು ಒದಗಿಸಲಾಗಿತ್ತು. ಹರಿಣಿ ಪುತ್ತೂರಾಯ ಪ್ರಾರ್ಥಿಸಿದರು. ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ಉಮೇಶ್ ಎಸ್.ಕೆ ಸ್ವಾಗತಿಸಿದರು. ಉದಯ ಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು. ನವಚೇತನಾ ಯುವಕ ಮಂಡಲದ ನೂತನ ಕಾರ್ಯದರ್ಶಿ ಪ್ರವೀಣ್ ಉದಯಗಿರಿ ವಂದಿಸಿದರು.