ಪುತ್ತೂರು: ಶ್ವಾಸಕೋಶದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಳಿಕೆ ಗ್ರಾಮದ ಮಿತ್ತಳಿಕೆ ನಿವಾಸಿ ಪುಲಕಿತ ಎಂಬವರಿಗೆ ಪುತ್ತೂರು ಶಾಸಕ ಅಶೋಕ್ ರೈ ಯವರು ಆಕ್ಸಿಜನ್ ಯಂತ್ರವನ್ನು ಹಸ್ತಾಂತರಿಸಿದರು.
ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು , ಆರ್ಥಿಕವಾಗಿ ತೀರ ಬಡತನದಲ್ಲಿರುವ ಇವರಿಗೆ ಆಕ್ಸಿಜನ್ ಯಂತ್ರ ಖರೀದಿಸಲು ಹಣಕಾಸಿನ ಅಡಚಣೆಯಾಗಿತ್ತು. ತನ್ನ ಸಂಕಷ್ಟವನ್ನು ಕಳೆದ ಮೂರು ದಿನಗಳ ಹಿಂದೆ ಶಾಸಕರ ಬಳಿ ಹೇಳಿಕೊಂಡಿದ್ದರು. ಆಕ್ಸಿಜನ್ ಯಂತ್ರ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಮೂರು ದಿನದೊಳಗೆ ಅದನ್ನು ಸಂತ್ರಸ್ಥ ಮಹಿಳೆಗೆ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ಅಳಿಕೆ ಗ್ರಾಪಂ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಉಪಸ್ಥಿತರಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕರು ನನ್ನ ಬಳಿ ಸಹಾಯ ಕೇಳಿ ಈ ಬಡ ಕುಟುಂಬ ಕಚೇರಿಗೆ ಕಳೆದ ಮೂರು ದಿನಗಳ ಹಿಂದೆ ಬಂದಿದ್ದರು. ತಕ್ಷಣವೇ ಮಹಿಳೆಯ ಉಸಿರಾಟಕ್ಕೆ ಅಗತ್ಯವಾಗಿ ಬೇಕಾದ ಆಕ್ಸಿಜನ್ ಯಂತ್ರವನ್ನು ಕೊಡಿಸಿದ್ದೇನೆ. ಅವರು ಆರೋಗ್ಯವಂತರಾಗಿರಲಿ ಎಂಬುದೇ ನನ್ನ ಆಶಯವಾಗಿದೆ ಎಂದು ತಿಳಿಸಿದ್ದಾರೆ.