ಉಪ್ಪಿನಂಗಡಿಯಲ್ಲಿ ಲಕ್ಷ್ಮೀ ಇಂಡಸ್ಟ್ರೀಸ್‌ನವರ ‘ಕನಸಿನ ಮನೆ’ ಶುಭಾರಂಭ

0

ಗುಣಮಟ್ಟದ ಸೇವೆಯಿಂದ ಉದ್ಯಮದ ಬೆಳವಣಿಗೆ ಸಾಧ್ಯ: ಡಿ. ಹರ್ಷೇಂದ್ರ ಕುಮಾರ್

ಉಪ್ಪಿನಂಗಡಿ: ಇಲ್ಲಿನ ಬಿ.ಎಂ. ಆರ್ಕೇಡ್‌ನಲ್ಲಿ ಆರಂಭವಾದ ಲಕ್ಷ್ಮೀ ಇಂಡಸ್ಟ್ರೀಸ್‌ನವರ ‘ಕನಸಿನ ಮನೆ’ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ದೀಪ ಪ್ರಜ್ವಲನೆಗೈಯುವ ಮೂಲಕ ಜ.14ರಂದು ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು, ಲಕ್ಷ್ಮೀ ಇಂಡಸ್ಟ್ರೀಸ್‌ನವರ ‘ಕನಸಿನ ಮನೆ’ಯ ಎರಡನೇ ಶಾಖೆ ಇಂದು ಉಪ್ಪಿನಂಗಡಿಯಲ್ಲಿ ಆರಂಭವಾಗಿದೆ. ಮರಗಳ ಅಲಭ್ಯತೆ, ಕೈಗೆಟಕದ ದರಗಳ ನಡುವೆ ಸಿಮೆಂಟ್, ಫೈಬರ್‌ನಿಂದ ಮಾಡುವ ಮೋಹನ್ ಕುಮಾರ್‌ರವರ ಲಕ್ಷ್ಮೀ ಇಂಡಸ್ಟ್ರೀಸ್‌ನಲ್ಲಿ ತಯಾರಾಗುವ ದಾರಂದ ಮತ್ತಿತರ ಉತ್ಪನ್ನಗಳಿಂದಾಗಿ ಜನರಿಗೆ ಅನುಕೂಲವಾಗಿವೆ. ಅದೊಂದು ದಿನ ಇವರ ತಂದೆಯವರಾದ ದಿ. ರಾಜು ಮೇಸ್ತ್ರಿಯವರಲ್ಲಿ ನಾನು ಕರೆದು ಅವರಿಗೊಂದು ಸಲಹೆ ನೀಡಿದ್ದು, ಅದನ್ನು ಸ್ವೀಕರಿಸಿದ ಅವರು ಸಿಮೆಂಟ್ ದಾರಂದ, ಕಿಟಕಿಯಂತಹ ಉತ್ಪನ್ನಗಳನ್ನು ತಯಾರಿಸಲು ತೊಡಗಿದರು. ವೃತ್ತಿಯಲ್ಲಿ ಇವರ ಶೃದ್ಧೆ, ಗುಣಮಟ್ಟದ ಸೇವೆ ನೋಡಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಮಾರು 2000ಕ್ಕೂ ಹೆಚ್ಚು ಸಿಮೆಂಟ್ ದಾರಂದವನ್ನು ಇವರಿಂದ ಖರೀದಿಸಲಾಗಿದೆ. ಇದೀಗ ಅವರ ಮಗ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಿದ್ದು, ಎರಡು ವರ್ಷಗಳ ಹಿಂದೆ ಉಜಿರೆಯಲ್ಲಿ ಕನಸಿನ ಮನೆಯ ಮೊದಲ ಶಾಖೆಯನ್ನು ನಾನೇ ಉದ್ಘಾಟಿಸಿದ್ದೆ. ಇನ್ನೊಂದು ಶಾಖೆಯನ್ನು ನೀವು ಆರಂಭಿಸಬೇಕು ಎಂದು ನಾನಾಗ ನೀಡಿದ ಸಲಹೆಯನ್ನು ಅವರಿಂದು ಉಪ್ಪಿನಂಗಡಿಯಲ್ಲಿ ಎರಡನೇ ಶಾಖೆ ತೆರೆಯುವ ಮೂಲಕ ಕಾರ್ಯರೂಪಕ್ಕೆ ತಂದು, ನನ್ನ ಕೈಯಲ್ಲೇ ಉದ್ಘಾಟಿಸಿದ್ದಾರೆ. ಹಲವು ಮಂದಿಗೆ ಮೋಹನ್ ಕುಮಾರ್ ಅವರು ಉದ್ಯೋಗವಕಾಶ ಕಲ್ಪಿಸಿದ್ದಾರೆ. ವ್ಯವಹಾರದಲ್ಲಿ ಗುಣಮಟ್ಟದ ಸೇವೆ ಮುಖ್ಯವಾಗಿದ್ದು, ಆದ್ದರಿಂದಲೇ ಇವರ ಉದ್ಯಮ ಕ್ಷೇತ್ರ ಬೆಳೆಯಲು ಸಾಧ್ಯವಾಗಿದೆ. ಧಾರವಾಹಿಯಂತೆ ಇವರ ಶಾಖೆಗಳು ಇನ್ನಷ್ಟು ಎಲ್ಲಾ ಕಡೆಗಳಿಗೆ ವಿಸ್ತರಿಸಲಿ. ಬದುಕು ಕಟ್ಟೋಣ ಬನ್ನಿ ಎಂಬ ತಂಡವನ್ನು ಕಟ್ಟಿ ಸಮಾಜ ಸೇವೆ ಮಾಡಲು ಹಲವರಿಗೆ ಪ್ರೇರಣೆ ನೀಡಿದ ಇವರು ಹಾಗೂ ಇವರ ತಂಡದ ಸಮಾಜ ಸೇವೆಗಳು ನಿರಂತರ ಸಾಗಲಿ ಎಂದು ಶುಭ ಹಾರೈಸಿದರು.


ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಮಾತನಾಡಿ, ಮೋಹನ್ ಕುಮಾರ್ ಅವರು ಸಾಮಾಜಿಕ ಕಳಕಳಿಯುಳ್ಳ ಉದ್ಯಮಿಯಾಗಿದ್ದು, ಸಮಾಜದಿಂದ ಪಡೆದದ್ದು ಸಮಾಜದೆಡೆಗೆ ಎಂಬ ಧ್ಯೇಯವುಳ್ಳವರು. ಇವರಿಗೆ ತಾಯಿಯ ಆಶೀರ್ವಾದವೇ ಶಕ್ತಿಯಾಗಿದ್ದು, ತಾಯಿಯ ಆಶೀರ್ವಾದವಿದ್ದರೆ ಸಮಾಜದಲ್ಲಿ ಬೆಳೆಯಲು ಸಾಧ್ಯ. ಇವರ ಉದ್ಯಮ ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಶುಭ ಹಾರೈಸಿದರಲ್ಲದೆ, ಓರ್ವ ಶಾಸಕನಾಗಿ ನನ್ನಿಂದಾಗುವ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.


ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪ್ ಸಿಂಹ ನಾಯಕ್ ಅವರು ಮಾತನಾಡಿ, ಕಾಲದ ಅಗತ್ಯಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನದೊಂದಿಗೆ ಹೊಸ- ಹೊಸ ಉತ್ಪನ್ನಗಳನ್ನು ಅವಿಷ್ಕರಿಸಿರುವ ಮೋಹನ್ ಕುಮಾರ್ ಅವರು ತಾನು ಗಳಿಸುವುದು ಕೇವಲ ಸ್ವಂತಕ್ಕಾಗಿ ಅಲ್ಲ. ಸಮಾಜಕ್ಕಾಗಿ ಎಂಬ ಭಾವನೆಯುಳ್ಳವರು. ಆದ್ದರಿಂದ ಅವರಿಗೆ ಭಗವಂತನ ಆಶೀರ್ವಾದ, ಊರಿನವರ ಸಹಕಾರ ಎಂದೆಂದಿಗೂ ಇದೆ. ಇವರ ತಂದೆ ದಿ. ರಾಜು ಮೇಸ್ತಿಯವರ ಕಾಲದಿಂದಲೂ ಇವರ ಸಂಸ್ಥೆಯಲ್ಲಿ ಅದೇ ಶೃದ್ಧೆ, ಪ್ರಾಮಾಣಿಕತೆ, ನಂಬಿಕೆ ಉಳಿದುಕೊಂಡಿದೆ. ಹಾಗಾಗಿ ಇವರ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ ಎಂದರು.


ಪುತ್ತೂರು ಕೌಶಲ್ ಕನ್‌ಸ್ಟ್ರಕ್ಷನ್‌ನ ನವೀನ್ ಕುಮಾರ್ ಮಾತನಾಡಿ, 2000 ಇಸವಿಯಿಂದ ನನಗೆ ಇವರು ಪರಿಚಿತರಾಗಿದ್ದು, ಅಂದಿನಿಂದ ಇಂದಿನವರೆಗೆ ಕಟ್ಟಡ ಕಾಮಗಾರಿಗಳಿಗೆ ಇವರ ಸಂಸ್ಥೆಯ ಉತ್ಪನ್ನಗಳನ್ನೇ ಬಳಸುತ್ತಿದ್ದೇನೆ. ಉತ್ತಮ ಗುಣಮಟ್ಟಕ್ಕೆ ಹೆಸರೇ ಮೋಹನ್ ಕುಮಾರ್ ಎಂಬಂತಾಗಿದೆ ಎಂದು ಶ್ಲಾಘಿಸಿದರು.


ಅಧ್ಯಕ್ಷತೆ ವಹಿಸಿದ್ದ ಬರೋಡದ ಶಶಿ ಕೆಟರಿಂಗ್ ಸರ್ವೀಸಸ್ ಪ್ರೈ.ಲಿ.ನ ಶಶಿಧರ ಶೆಟ್ಟಿ ಮಾತನಾಡಿ, ಒಬ್ಬರು ಬೆಳೆದಾಗ ಅಸೂಯೆ ಪಟ್ಟುಕೊಳ್ಳುವವರೇ ಇಂದಿನ ಸಮಾಜದಲ್ಲಿ ಹೆಚ್ಚು. ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಇನ್ನೊಬ್ಬರನ್ನು ಬೆಳೆಸಿ, ಅವರು ಬೆಳೆದು ನಿಂತಾಗ ಖುಷಿ ಪಡುವ ಗುಣದವರು. ಬದಲಾದ ಕಾಲ ಘಟ್ಟಕ್ಕೆ ತಕ್ಕಂದೆ ಮರದ ಉತ್ಪನ್ನಗಳ ಬದಲಿಗೆ ತಮ್ಮ ಸಂಸ್ಥೆಯ ಮೂಲಕ ಸಿಮೆಂಟ್, ಫೈಬರ್ ಉತ್ಪನ್ನಗಳನ್ನು ತಯಾರಿಸಿ ಆಧುನಿಕತೆಯ ಸ್ಪರ್ಶ ನೀಡಿದವರು ಮೋಹನ್ ಕುಮಾರ್ ಅವರು. ಅವರ ಉದ್ಯಮ ಕ್ಷೇತ್ರ ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.


ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಮಾಲಕರಾದ ಕೆ. ಮೋಹನ್ ಕುಮಾರ್ ಅವರು, ೩೬ ವರ್ಷದ ಹಿಂದೆ ತನ್ನ ತಂದೆಯವರಾದ ದಿ. ರಾಜು ಮೇಸ್ತ್ರಿಯವರು ಈ ಸಂಸ್ಥೆಯನ್ನು ಕಟ್ಟಿದರು. ಈ ಇದು ಇನ್ನಷ್ಟು ಬೆಳೆದಿದ್ದು, ರಾಜ್ಯಾದಾದ್ಯಂತ ನಮ್ಮ ಸಂಸ್ಥೆಯ ಉತ್ಪನ್ನಗಳು ಪರಿಚಿತವಾಗಿವೆ. ನಮ್ಮ ಬೆಳವಣಿಗೆಗೆ ಕಾರಣರಾದವರು ಪರಮಪೂಜ್ಯ ಖಾವಂದರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರು. ಇದರೊಂದಿಗೆ ನಮ್ಮ ಸಂಸ್ಥೆಯಲ್ಲಿ 250 ಸಿಬ್ಬಂದಿಯಿದ್ದು, ಅವರ ನಿಷ್ಠೆ, ಪ್ರಾಮಾಣಿಕತೆಯ ದುಡಿಮೆ ಹಾಗೂ ಗ್ರಾಹಕ ಬಂಧುಗಳ ಸಹಕಾರ. 2 ವರ್ಷದ ಹಿಂದೆ ‘ಕನಸಿನ ಮನೆ’ಯ ಮೊದಲ ಶಾಖೆಯನ್ನು ಉಜಿರೆಯಲ್ಲಿ ಆರಂಭಿಸಿದ್ದೆ. ಅದನ್ನು ಉದ್ಘಾಟಿಸಿದ ಡಿ. ಹರ್ಷೇಂದ್ರ ಕುಮಾರ್ ಅವರು ಆಗ ಎರಡನೇ ಶಾಖೆ ತೆರೆಯುವಂತೆ ಹೇಳಿದ್ದರು. ಅವರ ಆಶೀರ್ವಾದದಿಂದ ಅದಿಂದು ಸಾಕಾರಗೊಂಡಿದೆ ಎಂದರು.


ಕಾರ್ಯಕ್ರಮದಲ್ಲಿ ಬಿ.ಎಂ. ಆರ್ಕೇಡ್‌ನ ಮಾಲಕರಾದ ಇಮ್ತಿಯಾಝ್ ಯು.ಟಿ. ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾಜೇಶ್ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ನವಶಕ್ತಿಯ ರಾಜೇಶ್ ಶೆಟ್ಟಿ, ಧನ್ಯಕುಮಾರ್ ರೈ ಬಿಳಿಯೂರು ಗುತ್ತು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕರಾದ ವೇ.ಮೂ. ಹರೀಶ ಉಪಾಧ್ಯಾಯ, ಪಿಡಬ್ಲ್ಯೂಡಿ ಗುತ್ತಿಗೆದಾರ ರಾಧಾಕೃಷ್ಣ ನಾಕ್, ಉದಯಕುಮಾರ್ ಉದಯಗಿರಿ, ಗೋಪಾಲ ಹೆಗ್ಡೆ, ಮೋಹನ್ ಕುಮಾರ್ ಅವರ ಮಾತೃಶ್ರೀ ಲೀಲಾವತಿ ರಾಜು ಮೇಸ್ತ್ರಿ, ಪತ್ನಿ ರೇಶ್ಮಾ ಮೋಹನ್ ಕುಮಾರ್, ಮಕ್ಕಳಾದ ಮೌಲ್ಯ ಲಕ್ಷ್ಮೀ, ಮಾನ್ವಿ ಲಕ್ಷ್ಮೀ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಮ್ಮಯ್ಯ ನಾಯ್ಕ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here