ಕುಡಿಯುವ ನೀರಿನ ದುರ್ಬಳಕೆ, ಸ್ವಚ್ಛತೆಗೆ ಸಹಕರಿಸದೇ ಇದ್ದಲ್ಲಿ ನೀರಿನ ಸಂಪರ್ಕ ಕಡಿತಕ್ಕೆ ನಿರ್ಣಯ
- ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾ.ಪಂ.ನ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಹಾಗೂ ಸ್ವಚ್ಛತೆ ಕುರಿತ ಸಭೆ ಜ.17ರಂದು ಗೋಳಿತೊಟ್ಟು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
- ಕುಡಿಯುವ ನೀರು ನಿರ್ವಹಣಾ ಸಮಿತಿ ಅಧ್ಯಕ್ಷೆ ಗುಲಾಬಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತ್ಯಾಜ್ಯ ನೀರನ್ನು ಬಚ್ಚಲು ಇಂಗು ಗುಂಡಿಗೆ ಬಿಡದೆ ಚರಂಡಿ ಹಾಗೂ ಸಾರ್ವಜನಿಕ ಸ್ಥಳಗಳಿಗೆ ಬಿಟ್ಟರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಪಂಚಾಯತ್‌ನಿಂದ ಸರಬರಾಜು ಆಗುವ ಕುಡಿಯುವ ನೀರನ್ನು ದುರ್ಬಳಕೆ ಮಾಡಿದ್ದಲ್ಲಿ ಹಾಗೂ ಸ್ವಚ್ಛತೆಗೆ ಸಹಾಕರಿಸದಿದ್ದಲ್ಲಿ ನಳ್ಳಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
- ಘನತ್ಯಾಜ್ಯ ಸಂಗ್ರಹಕ್ಕೆ ಸಹಕರಿಸಿ:
- ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕಕ್ಕೆ ವ್ಯಾಪಾರಸ್ಥರು ಕಸವನ್ನು ಕೊಡದಿದ್ದರೆ ಪರವಾನಿಗೆ ರದ್ದುಗೊಳಿಸುವುದು. ಈ ಬಗ್ಗೆ ಕಟ್ಟಡ ಮಾಲೀಕರಿಗೂ ನೋಟಿಸ್ ನೀಡುವುದು ಹಾಗೂ ಮನೆಯವರು ಕಸ ಸಂಗ್ರಹಕ್ಕೆ ಸಹಕಾರ ಮಾಡದಿದ್ದಲ್ಲಿ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಗ್ರಾ.ಪಂ.ಕಾರ್ಯದರ್ಶಿ ಚಂದ್ರಾವತಿಯವರು ಮಾಹಿತಿ ನೀಡಿದರು. ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ, ಉಪಾಧ್ಯಕ್ಷ ಕೆ.ಬಾಬು ಪೂಜಾರಿ ಕಿನ್ಯಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ನಾಯ್ಕ್, ಆರೋಗ್ಯ ಸಹಾಯಕಿ ಲೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ಗ್ರಾ.ಪಂ.ಕುಡಿಯುವ ನೀರಿನ ಬಳಕೆದಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.