ಸಂಚಾರಿ ನಿಯಮ ಪಾಲನೆ ತಂದೆ ತಾಯಂದಿರಿಂದಾಗಬೇಕು ಪ್ರಾರಂಭವಾಗಬೇಕು-ಆರ್‌ಟಿಓ ವಿಶ್ವನಾಥ ನಾಯ್ಕ
ಪುತ್ತೂರು:ವಾಹನ ಚಾಲನೆಯ ಸಮಯದಲ್ಲಿ ತಂದೆ-ತಾಯಿಯಂದಿರೇ ಪ್ರಮುಖವಾಗಿ ನಿಯಮ ಪಾಲಿಸಬೇಕು. ತಂದೆ-ತಾಯಿ ನಿಯಮ ಉಲ್ಲಂಘಿಸಿದರೆ ಮಕ್ಕಳು ಅದನ್ನೇ ಪಾಲಿಸುತ್ತಾರೆ. ಹೀಗಾಗಿ ಪ್ರತಿಯೊಬ್ಬರ ತಂದೆ-ತಾಯಿ ಸಂಚಾರಿ ನಿಯಮ ಪಾಲಿಸುವ ಮೂಲಕ ಮಕ್ಕಳಲ್ಲಿ ನಿಯಮ ಪಾಲನೆಯ ಜಾಗೃತಿ ಮೂಡಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್.ವಿಶ್ವನಾಥ ನಾಯ್ಕ ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆ ಪುತ್ತೂರು ಉಪ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಜ.20ರಂದು ಬನ್ನೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಲನ ವೃತ್ತಿಯೂ ಒಂದು ಕಲೆ. ಅದರ ಪ್ರಾವಿಣ್ಯತೆ ಎಲ್ಲರಿಗೂ ಬರುವುದಿಲ್ಲ. ವಾಹನ ಚಾಲನೆಯ ಸಮಯದಲ್ಲಿ ಎಲ್ಲರ ಜೀವ ಚಾಲಕರಲ್ಲಿದ್ದು ತಪ್ಪು ನಿರ್ಧಾರ ಕೈಗೊಳ್ಳಬಾರದು. ಚಾಲನೆಯ ಜೊತೆಗೆ ಸಂಚಾರಿ ನಿಯಮ ಪಾಲಿಸುವುದು ಮುಖ್ಯ. ಪ್ರತಿಯೊಬ್ಬ ಚಾಲಕರೂ ತಮ್ಮ ಜವಾಬ್ದಾರಿ ಅರಿತು ಸಂಚಾರಿ ನಿಯಮ ಪಾಲಿಸಬೇಕು. ವಾಹನ ನಿಮ್ಮದಾಗಿರಬಹುದು. ಆದರೆ ರಸ್ತೆ ಎಲ್ಲರಿಗೂ ಸೇರಿದ್ದು. ಪಾದಚಾರಿಗಳ ಜೀವಕ್ಕೂ ಬೆಲೆಯಿದೆ. ಕುರುಡರ ಬಗ್ಗೆಯೂ ಜಾಗರೂಕರಾಗಿರಬೇಕು. ಚಾಲನ ವೃತ್ತಿಯಲ್ಲಿ ಕಲಿಯಲು ಸಾಕಷ್ಟಿದೆ. ಕಾನೂನು ಉಲ್ಲಂಘಿಸಿದರೆ ಶಿಕ್ಷೆಯೂ ಇದ್ದು ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧು ದೂರು ದಾಖಲಾದರೆ ಕನಿಷ್ಠ ಆರು ತಿಂಗಳ ಕಾಲ ಚಾಲನ ಪರವಾನಿಗೆಯನ್ನು ಅಮಾನತು ಮಾಡುವಂತೆ 2019ರಲ್ಲಿ ಸುಪ್ರಿಂ ಕೋಟ್ ಆದೇಶಿಸಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಗರ ಠಾಣಾ ನಿರೀಕ್ಷಕ ಸುನಿಲ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಅಧಿಕವಾಗುತ್ತಿದೆ. ನಿರ್ಲಕ್ಷತನ, ಅತೀ ವೇಗ, ದುಡುಕಿನ ನಿರ್ದಾರಗಳೇ ಅಪಘಾತಗಳಿಗೆ ಕಾರಣವಾಗುತ್ತಿದೆ. ವಾಹನ ಚಾಲನೆಯ ಸಮಯದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಮುಖ್ಯ. ಸಂಚಾರಿ ನಿಯಮ ಪಾಲಿಸಿಕೊಂಡು ನಮ್ಮ ಜೀವದ ಜೊತೆಗೆ ಇನ್ನೊಬ್ಬರ ಜೀವ ಉಳಿಸುವ ಮೂಲಕ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಾಯಕರಾಗಬೇಕು ಎಂದರು.
ಹಿರಿಯ ಮೋಟಾರು ವಾಹನ ನಿರೀಕ್ಷಕ ಆಶ್ಫಾನ್ ಬಿ.ಎಸ್.ಮಾತನಾಡಿ, ಪ್ರತಿವರ್ಷ ರಸ್ತೆ ಸುರಕ್ಷತಾ ಸಪ್ತಾಹ ನಡೆಯುತ್ತಿದ್ದು ಈ ವರ್ಷ ಕೇಂದ್ರ ಸರಕಾರದ ಆದೇಶದಂತೆ ಮಾಸಾಚರಣೆ ನಡೆಸಲಾಗುತ್ತಿದೆ. ಶೇ.75ರಷ್ಟು ಮಂದಿ ಸಮಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ. ಸಂಚಾರಿ ನಿಯಮ ಪಾಲನೆ ಕೆಲಸವಲ್ಲ. ಅದು ಜವಾಬ್ದಾರಿ. ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಬೇಕು ಎಂದರು.
ಕೈಪಿಡಿ ಬಿಡುಗಡೆ:
ಸಂಚಾರಿ ನಿಯಮಗಳನ್ನು ಒಳಗೊಂಡ ಕೈಪಿಡಿಯನ್ನು ಕಾರ್ಯಕ್ರಮದಲ್ಲಿ ನಗರ ಠಾಣಾ ನಿರೀಕ್ಷಕ ಸುನೀಲ್ ಕುಮಾರ್ ಬಿಡುಗಡೆಗೊಳಿಸಿದರು.
ಶ್ವೇತಾ ಪ್ರಾರ್ಥಿಸಿದರು. ಕಚೇರಿ ಅಧೀಕ್ಷಕ ದೀಪಕ್ ಕುಮಾರ್ ಸ್ವಾಗತಿಸಿದರು. ಅಧೀಕ್ಷಕರಾದ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿ, ಆಸ್ಕರ್ ಸಂತೋಷ್ ವಂದಿಸಿದರು.