ಪುತ್ತೂರು: ಕೆಲವು ದಿನಗಳ ಹಿಂದೆ ಪೆರ್ನಾಜೆಯಲ್ಲಿ ತೋಟಕ್ಕೆ ನುಗ್ಗಿ ಗಿಡಗಳಿಗೆ ಹಾನಿ ಮಾಡಿದ್ದ ಕಾಡಾನೆ ಮತ್ತೆ ಪ್ರತ್ಯಕ್ಷಗೊಂಡಿದೆ. ಆದರೆ ಈ ಬಾರಿ ಕಾಡಾನೆ ಪ್ರತ್ಯಕ್ಷವಾಗಿರುವುದು ಅಮ್ಚಿನಡ್ಕ ಸಮೀಪದ ಉಬರಾಜೆಯ ಗಣೇಶ್ ಭಂಡಾರಿ ಎಂಬವರ ತೋಟಕ್ಕೆ ಜ.18ರಂದು ರಾತ್ರಿ ಗಜಪ್ರವೇಶ ಮಾಡಿದ್ದು ತೆಂಗಿನ ಗಿಡಗಳಿಗೆ ಹಾನಿ ಮಾಡಿದೆ. ಜ.19ರಂದು ರಾತ್ರಿ ಮತ್ತೆ ಇದೇ ಕಾಡಾನೆ ಇಲ್ಲಿನ ಜಗನ್ನಾಥ ರೈ, ಹೊನ್ನಪ್ಪ ನಾಯ್ಕ ಮತ್ತು ಅವಿನಾಶ್ ನಾಯ್ಕ ಎಂಬವರ ತೋಟಕ್ಕೆ ನುಗ್ಗಿದೆ. ಕೆಲವೊಂದು ತೆಂಗಿನಗಿಡ, ಬಾಳೆಗಿಡಗಳಿಗೆ ಹಾನಿಮಾಡಿದೆ. ಇಂದು ಬೆಳಿಗ್ಗೆ ಬಂದ ದಾರಿಯಲ್ಲೇ ಆನೆ ಮರಳಿ ಹೋಗಿರಬಹುದು ಎನ್ನುವ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಮೋದ್ ಕೆ ಎಸ್ ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯರಿಗೆ ಜಾಗೃತರಾಗಿರುವಂತೆ ಸೂಚನೆ ನೀಡಿದ್ದಾರೆ. ಒಂಟಿ ಕಾಡಾನೆಯ ಬಗ್ಗೆ ಮಾಹಿತಿ ಸಿಕ್ಕಿದರೆ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ತಿಳಿಸಿರುವ ಅವರು ಗಾಳಿ ಸುದ್ದಿಗೆ ಕಿವಿಕೊಡದಂತೆ ಗ್ರಾಮಸ್ಥರರಿಗೆ ಮನವಿ ಮಾಡಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ