ಉಪ್ಪಿನಂಗಡಿ: ನದಿಯಲ್ಲಿ ತೇಲುತ್ತಿದ್ದ ಮೃತ ನಾಯಿಗೆ ಮುಕ್ತಿ

0

ಉಪ್ಪಿನಂಗಡಿ: ಇಲ್ಲಿನ ಹಳೆ ಕುಮಾರಧಾರ ಸೇತುವೆಯ ಕೆಳಗೆ ನದಿಯಲ್ಲಿ ನಿಂತ ಹಿನ್ನೀರಿನಲ್ಲಿ ಕೊಳೆತ ನಾಯಿ ಮೃತದೇಹ ಇರುವುದರ ಬಗ್ಗೆ ಸಾರ್ವಜನಿಕರೋರ್ವರಿಂದ ಮಾಹಿತಿ ಪಡೆದ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಅವರು ತಕ್ಷಣವೇ ಸ್ಪಂದಿಸಿ ಅದನ್ನು ನದಿ ನೀರಿನಿಂದ ತೆಗೆದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿಸಿದ ಘಟನೆ ಜ.24ರಂದು ನಡೆದಿದೆ.


ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ಕಟ್ಟಿದ್ದರಿಂದ ನದಿಯಲ್ಲಿ ಈಗ ನೀರು ನಿಂತಿದೆ. ಹಳೆಯ ಕುಮಾರಧಾರ ಸೇತುವೆಯ ಕೆಳಗೆ ನದಿಯಲ್ಲಿ ಸತ್ತು ಕೊಳೆತು ಹೋದ ಸ್ಥಿತಿಯಲ್ಲಿ ಸಾರ್ವಜನಿಕರೋರ್ವರಿಗೆ ನಾಯಿಯೊಂದು ಕಂಡು ಬಂದಿತ್ತು. ಇದನ್ನು ಅವರು ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಅವರಿಗೆ ತಿಳಿಸಿದ್ದು, ತಕ್ಷಣ ಸ್ಪಂದಿಸಿದ ಅವರು ಪೊಲೀಸ್ ಇಲಾಖೆಯಲ್ಲಿದ್ದ ಬೋಟ್ ಅನ್ನು ಪಡೆದು ಗೃಹರಕ್ಷಕದಳದ ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್ ಹಾಗೂ ಗೃಹರಕ್ಷಕದಳದ ಜನಾರ್ದನ ಅವರ ಮುಖೇನ ಬೋಟ್‌ನಲ್ಲಿ ಗ್ರಾ.ಪಂ.ನ ಜಾಡಮಾಲಿಗಳನ್ನು ಕಳುಹಿಸಿ, ನಾಯಿಯ ಮೃತದೇಹವನ್ನು ನದಿ ನೀರಿನಿಂದ ತೆಗೆಸಿ, ಬಳಿಕ ಅದನ್ನು ದಫನ ಮಾಡಿಸಿದರು. ಗ್ರಾ.ಪಂ.ನ ಸಿಬ್ಬಂದಿ ಇಸಾಕ್, ಆನಂದ, ಸುಂದರ ಸಹಕರಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಅವರು ಕೂಡಾ ಈ ಸಂದರ್ಭ ಸ್ಥಳದಲ್ಲಿದ್ದರು.


ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ದಿನೇಶ್ ಅವರು, ನಾಯಿಯ ಮೃತದೇಹ ಕೊಳೆತು ಊದಿಕೊಂಡ ಸ್ಥಿತಿಯಲ್ಲಿತ್ತಲ್ಲದೆ, ನಾಯಿಯ ಕಳೇಬರಹದಲ್ಲಿ ಹುಳಗಳು ಆಗಿತ್ತು. ನದಿ ನೀರು ಕಲುಷಿತವಾಗಬಾರದು ಎಂಬ ಮಾನವೀಯ ಸೇವೆಯ ನೆಲೆಯಿಂದ ನಾವು ಬೋಟನ್ನು ಚಲಾಯಿಸಿ ಆ ನಾಯಿಯನ್ನು ತೆಗೆಯಲು ಸಹಕಾರ ನೀಡಿದ್ದೇವೆ. ಸತ್ತ ನಾಯಿಯನ್ನು ಯಾರೋ ಸೇತುವೆಯ ಮೇಲಿನಿಂದ ನದಿ ನೀರಿಗೆ ಎಸೆದಿರುವ ಸಾಧ್ಯತೆಯಿದೆ. ಯಾಕೆಂದರೆ ಇದು ಯಾರೋ ಸಾಕುತ್ತಿದ್ದ ಒಳ್ಳೆಯ ಜಾತಿಯ ನಾಯಿ. ಕುತ್ತಿಗೆಯಲ್ಲಿ ಬೆಲ್ಟ್ ಕೂಡಾ ಇತ್ತು. ನೇತ್ರಾವತಿ- ಕುಮಾರಧಾರ ನದಿಗಳು ನಮ್ಮ ಜೀವನದಿಗಳು. ಎಷ್ಟೋ ಜನ ಈ ನೀರನ್ನು ಕುಡಿಯಲು ಬಳಸುತ್ತಾರೆ. ಅದನ್ನು ಮಲೀನ ಮಾಡುವಂತಹ ಮನೋಸ್ಥಿತಿ ಒಳ್ಳೆಯದಲ್ಲ. ಈ ಬಗ್ಗೆ ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

LEAVE A REPLY

Please enter your comment!
Please enter your name here