ಪ.ಜಾತಿ ಮೀಸಲಾತಿ ಸುಳ್ಯ ಕ್ಷೇತ್ರಕ್ಕಾಗಿ ಅಲ್ಲ. ಇಡೀ ಜಿಲ್ಲೆಗಾಗಿ ಇರುವಂತಹದ್ದು. ಅದು ಸರದಿಯಂತೆ ಇತರ ಕ್ಷೇತ್ರಗಳಿಗೂ ಬದಲಾಗಬೇಕು
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಮತದಾರನಿಗೆ ಓಟಿನ ಸಮಾನ ಅವಕಾಶವಿರುವುದರಿಂದಾಗಿ ಜನಪ್ರತಿನಿಧಿಯಾಗಲು ಸ್ಪಽಸಲು ಅವಕಾಶ ಇರುವುದರಿಂದಾಗಿ, 5 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತಿರುವುದರಿಂದಾಗಿ ಮತದಾರರ ಆಶಯಗಳಿಗೆ, ಭಾವನೆಗಳಿಗೆ ಬೆಲೆ ಉಳಿದಿದೆ. ಚುನಾವಣೆಯ ಸಮಯದಲ್ಲಾದರೂ ಮತದಾರರು ನಿಜವಾದ ರಾಜರುಗಳಾಗುತ್ತಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಜನಸೇವಕರಾಗುತ್ತಾರೆ. ಆದುದರಿಂದಲೇ ಜ.26ರನ್ನು ಅತ್ಯಂತ ಶ್ರೇಷ್ಠ ದಿನವೆಂದು ನಾವು ಪರಿಗಣಿಸಿ ಆಚರಿಸಬೇಕೆಂದು ಕರೆ ಕೊಟ್ಟಿದ್ದೇವೆ.
ಬ್ರಿಟಿಷರು ನಮ್ಮ ದೇಶವನ್ನು ಶತಮಾನಗಳ ಕಾಲ ಆಳಿ ಕೊಳ್ಳೆ ಹೊಡೆದಿದ್ದಾರೆ, ಅವರು ದೇಶವನ್ನು ತೊರೆಯಬೇಕಿತ್ತು ಎಂಬುವುದು ನೂರಕ್ಕೆ ನೂರರಷ್ಟು ಸರಿ. ಆದರೆ ಅವರು ಪ್ರಜಾಪ್ರಭುತ್ವಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಹಾತ್ಮ ಗಾಂಽಜಿಯವರ ನೇತೃತ್ವದ ಹೋರಾಟಕ್ಕೆ ಮಣಿದು ಬಿಟ್ಟು ಹೋಗಿರದಿದ್ದರೆ ಏನಾಗುತ್ತಿತ್ತು?. 1857ರ ನಮ್ಮ ದೇಶದ ರಾಜರುಗಳ ಸ್ವಾತಂತ್ರ್ಯದ ಹೋರಾಟದ ವಿಷಯವನ್ನೇ ಕೈಗೆತ್ತಿಕೊಳ್ಳುವ. ಅಂದು ಬ್ರಿಟಿಷರು ಸೋತಿದ್ದರೆ ಏನಾಗುತ್ತಿತ್ತು?. ದೇಶದಲ್ಲಿ ಬ್ರಿಟಿಷರ ಆಡಳಿತ ಕೊನೆಗೊಳ್ಳುತ್ತಿತ್ತು. ಆದರೆ ಇಲ್ಲಿ ಯಾರ ಆಡಳಿತ ಬರುತ್ತಿತ್ತು?. ದೇಶದಲ್ಲಿ ಎಷ್ಟು ಜನರು ರಾಜರುಗಳಾಗುತ್ತಿದ್ದರು?. ದೇಶ ಒಂದು ದೇಶವಾಗಿ ಉಳಿಯುತ್ತಿತ್ತೆ? ಜನರಿಗೆ ತಮ್ಮ ಆಡಳಿತವನ್ನು ಆಯ್ಕೆ ಮಾಡಿಕೊಳ್ಳುವ, ಬದಲಿಸುವ, ತಾವೇ ಆಡಳಿತ ನಡೆಸುವ, ಮತದಾನದ ಹಕ್ಕು ಇರುತ್ತಿತ್ತೇ? ಎಂಬ ವಿಷಯಗಳ ಬಗ್ಗೆ ಈಗ ಅಲ್ಲದಿದ್ದರೂ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ದೃಷ್ಠಿಯಲ್ಲಿ ವಿಮರ್ಶೆಗೆ ಒಳಪಡಿಸಬೇಕಲ್ಲವೇ? ಅದಕ್ಕೆ ಪೂರಕವಾಗಿ ನಮ್ಮ ದೇಶದ ಜನತೆಗೆ ಅವರ ಹೆಸರಿಗೆ ಭೂಮಿಯ ಒಡೆತನದ ಹಕ್ಕು ಬಂದದ್ದು ಯಾರ ಆಡಳಿತದಲ್ಲಿ, ಯಾವ ಇಸವಿಯಿಂದ ಎಂದು ನೋಡಿದರೆ ಚರ್ಚೆಗೆ ಹೊಸ ಆಯಾಮ ಸಿಗಬಹುದು ಎಂದು ನನ್ನ ಅನಿಸಿಕೆ.
ಸುಳ್ಯದಲ್ಲಿ 1952ರಿಂದ ಮತದಾನದ ಹಕ್ಕು ದೊರೆತಲ್ಲಿಂದ ಮೊದಲ 10 ವರ್ಷ ಪರಿಶಿಷ್ಟ ಪಂಗಡದವರಿಗೆ ಅದರ ನಂತರದ ಈಗಿನ ಶಾಸಕತ್ವ ಮುಗಿಯುವವರೆಗಿನ 66 ವರ್ಷಗಳು ಪರಿಶಿಷ್ಟ ಜಾತಿಗೆ ಒಟ್ಟು 76 ವರ್ಷಗಳ ಕಾಲ ಮೀಸಲಾತಿಯಾಗಿ ಉಳಿದಿದೆ. ಇನ್ನೂ ಮುಂದುವರಿಯುತ್ತದೆ. ಈ ಮೀಸಲಾತಿ ಸುಳ್ಯಕ್ಕೇ ಸೀಮಿತವಾಗಿ ಇರಿಸಿದ್ದಲ್ಲ. ಜಿಲ್ಲೆಯ ಎಲ್ಲಾ ಪ.ಜಾತಿಯವರಿಗಾಗಿ ಇರುವ ಮೀಸಲಾತಿಯಾಗಿದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಸುಳ್ಯದಲ್ಲಿ ಹೆಚ್ಚು ಜನ ಪ.ಜಾತಿ, ಪ.ಪಂಗಡದವರಿದ್ದಾರೆ ಎಂದು ಪ್ರಾರಂಭದಲ್ಲಿ ಮೀಸಲಾತಿ ಇಲ್ಲಿಗೆ ಬಂದಿತ್ತು. ದ.ಕ. ಜಿಲ್ಲೆಯಲ್ಲಿ ಇತರ ಕ್ಷೇತ್ರದಲ್ಲೂ ಸಾಕಷ್ಟು ಮಂದಿ ಪ.ಜಾತಿ, ಪ.ಪಂಗಡದವರು ಇದ್ದಾರೆ. ಈ ಮೀಸಲಾತಿ ಸರದಿಯಂತೆ ಆ ಕ್ಷೇತ್ರಗಳಿಗೂ ಹೋಗಬೇಕಾಗಿತ್ತು.ಹಾಗೆ ಆದರೆ ಮಾತ್ರ ಆ ಮೀಸಲಾತಿಯ ಉದ್ದೇಶ ಇಡೀ ಜಿಲ್ಲೆಯ ಜನರಿಗೆ ದೊರಕುತ್ತಿತ್ತು ಎಂದು ಹೇಳಬಹುದು. ಅದಕ್ಕಾಗಿ ಜಿಲ್ಲೆಯ ಇತರ ಕ್ಷೇತ್ರದಲ್ಲಿರುವ ಪ.ಜಾತಿ ಮತ್ತು ಪ.ಪಂಗಡದವರು ತಮ್ಮ ತಮ್ಮ ಕ್ಷೇತ್ರಕ್ಕೆ ಮೀಸಲಾತಿ ಸರದಿಯಲ್ಲಿ ಬರಲಿ ಎಂದು ಬಯಸಬೇಕು. ಸುಳ್ಯದ ಜನರು ಮೀಸಲಾತಿ ಸುಳ್ಯದಿಂದ ಇತರ ಕ್ಷೇತ್ರಗಳಿಗೆ ಹೋಗುವಂತೆ ಪ್ರಯತ್ನಪಡಬೇಕು.
2026ರಲ್ಲಿ ಮಹಿಳಾ ಮೀಸಲಾತಿ ವಿಷಯವಾಗಿ ಮತ್ತು ಕ್ಷೇತ್ರಗಳ ಸಂಖ್ಯೆಗಳನ್ನು ಜನಸಂಖ್ಯೆಯ ಆಧಾರದಲ್ಲಿ ಹೆಚ್ಚುವರಿ ಮಾಡಲಿಕ್ಕಾಗಿ ಕೇಂದ್ರ ಸರಕಾರ ಡಿ.ಲಿಮಿಟೇಷನ್ ಸಭೆಯನ್ನು ಕರೆಯಲಿದೆ. ಅಲ್ಲಿ ಕ್ಷೇತ್ರದ ಮೀಸಲಾತಿ ಬದಲಾವಣೆ ವಿಷಯವೂ ಪ್ರಸ್ತಾಪವಾಗಬಹುದು. ಈ ಅವಧಿಗಿಂತ ಮುಂಚಿತವಾಗಿಯೇ ಸುಳ್ಯದ ಕ್ಷೇತ್ರದ ಮೀಸಲಾತಿ ಸರದಿಯಂತೆ ಬದಲಾವಣೆ ವಿಷಯ ಮತ್ತು ಸುಳ್ಯ ಜನರಲ್ ಕ್ಷೇತ್ರವಾಗಬೇಕು ಎಂಬ ವಿಷಯ ಮುನ್ನಲೆಗೆ ಬರಬೇಕು. ಇಲ್ಲದಿದ್ದರೆ ಎಷ್ಟು ವರ್ಷ ಕಳೆದರೂ ಮೀಸಲಾತಿ ಸರದಿಯಂತೆ ಇತರ ಕ್ಷೇತ್ರಗಳಿಗೆ ಹೋಗದೆ ಸುಳ್ಯದಲ್ಲಿ ಮಾತ್ರ ಉಳಿಯಬಹುದು ಎಂಬ ವಿಚಾರವನ್ನು ಗಮನಕ್ಕೆ ತರಲು ಇಚ್ಚಿಸುತ್ತೇನೆ. ಯಾರೇ ಈ ವಿಚಾರವನ್ನು ಎತ್ತಿಕೊಂಡರೂ ಈ ನ್ಯಾಯಯುತ ಹೋರಾಟಕ್ಕೆ ಸುದ್ದಿ ಬೆಂಬಲ ನೀಡುತ್ತದೆ ಎಂದು ತಿಳಿಸಲು ಇಚ್ಚಿಸುತ್ತೇನೆ.