ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ
ಸರಕಾರದ ಮಾನದಂಡ ಪಾಲಿಸದ ಶಾಲೆಗಳ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹ
ಉಪ್ಪಿನಂಗಡಿ: ಖಾಸಗಿ ಶಾಲೆಗಳು ಸರಕಾರ ನಿಗದಿಪಡಿಸಿದ ಶಾಲಾ ಶುಲ್ಕದ ಮಾನದಂಡವನ್ನು ಉಲ್ಲಂಘಿಸಿ ಮಕ್ಕಳ ಪೋಷಕರಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತವೆ. ಸರಕಾರಿ ಮಾನದಂಡದ ಪ್ರಕಾರ ಮಕ್ಕಳಿಂದ ಪಡೆಯಬೇಕಾದ ಶಾಲಾ ಶುಲ್ಕದ ವಿವರವನ್ನು ನೊಟೀಸ್ ಬೋರ್ಡ್ನಲ್ಲಿ ಪ್ರಕಟಿಸುತ್ತಿಲ್ಲ ಎಂಬ ಆರೋಪ 34 ನೆಕ್ಕಿಲಾಡಿ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಕೇಳಿ ಬಂತಲ್ಲದೆ, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಂತಹ ಶಾಲೆಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿ ಬಂತು.
34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಎ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥ ರೂಪೇಶ್ ರೈ ಅಲಿಮಾರ್, ಖಾಸಗಿ ಶಾಲೆಗಳು ಸರಕಾರದ ಮಾನದಂಡದಂತೆ ನಡೆಯುತ್ತಿದೆಯೋ ಎಂದು ಶಿಕ್ಷಣ ಇಲಾಖೆಯ ಸಿಆರ್ಪಿ ಮುಹಮ್ಮದ್ ಅಶ್ರಫ್ ಅವರಲ್ಲಿ ಪ್ರಶ್ನಿಸಿದರು. ಆಗ ಗ್ರಾಮಸ್ಥ ಕಲಂದರ್ ಶಾಫಿ ಮಾತನಾಡಿ, ಖಾಸಗಿ ಶಾಲೆಗಳಿಗೆ ಮಕ್ಕಳಿಂದ ಶಾಲಾ ಶುಲ್ಕವನ್ನು ಇಂತಿಷ್ಟೇ ಪಡೆಯಬೇಕೆಂಬ ಮಾನದಂಡ ಇಲ್ಲವೇ ಎಂದು ಪ್ರಶ್ನಿಸಿದರು. ಆಗ ಮುಹಮ್ಮದ್ ಅಶ್ರಫ್ ಮಾತನಾಡಿ, ಶಾಲಾ ಶುಲ್ಕದ ಬಗ್ಗೆ ಸರಕಾರದ ಮಾನದಂಡ ಇದೆ. ಅದನ್ನು ಖಾಸಗಿ ಶಾಲೆಯಲ್ಲಿ ನೊಟೀಸ್ ಬೋರ್ಡ್ನಲ್ಲಿ ಹಾಕಬೇಕು ಎಂದರು. ಅಲ್ಲದೇ, ನಾವು ಪೋಷಕರಲ್ಲಿ ಹೇಳೋದು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಅಂತ ಎಂದರು. ಆಗ ಈ ಬಗ್ಗೆ ಚರ್ಚೆ ನಡೆದು, ಸರಕಾರಿ ಶಾಲೆಯಲ್ಲಿ ತರಗತಿಗೊಂದರಂತೆ ಶಿಕ್ಷಕರ ನೇಮಕ ಮಾಡಿ, ಉತ್ತಮ ಮೂಲಭೂತ ಸೌಕರ್ಯ, ಶಿಕ್ಷಣವನ್ನು ಕೊಡಿ. ಆಗ ಯಾರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸೋದಿಲ್ಲ ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿ ಬಂತು. ಕಲಂದರ್ ಶಾಫಿ ಮಾತನಾಡಿ, ಖಾಸಗಿ ಶಾಲೆಯಲ್ಲಿ ಶಾಲಾ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ಡೊನೇಶನ್ ಅಂತ ಪಡೆಯಲಾಗುತ್ತದೆ ಎಂದರು. ಆಗ ಸಿಆರ್ಪಿ ಮುಹಮ್ಮದ್ ಅಶ್ರಫ್ ಮಾತನಾಡಿ, ಇಂತದ್ದು ಯಾವ ಶಾಲೆಯಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ದೂರು ನೀಡಿ. ಈ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು. ಅದಕ್ಕೆ ಕಲಂದರ್ ಶಾಫಿ ಹಾಗೆ ದೂರು ನೀಡಿದರೆ, ಅಂತಹ ಪೋಷಕರ ಮಕ್ಕಳಿಗೆ ಹಿಂಸೆ ನೀಡಲಾಗುತ್ತದೆ ಆಗೇನು ಮಾಡುವುದು ಎಂದರು. ಆಗ ಮುಹಮ್ಮದ್ ಅಶ್ರಫ್, ಹಿಂಸೆ ನೀಡಿದರೆ ಅದಕ್ಕೂ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಆಗ ಗ್ರಾಮಸ್ಥ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಹಿಂಸೆ ಅಂದರೆ ದೈಹಿಕ ಹಿಂಸೆ ಅಲ್ಲ. ಆಗು ಮಗುವನ್ನು ಶಾಲೆಯಲ್ಲಿ ಕಡೆಗಣಿಸೋದು, ಆ ಮಗುವಿನ ಬಳಿ ಯಾವುದೇ ಪ್ರಶ್ನೆ ಕೇಳದಿರುವುದು, ಯಾವುದೇ ಕ್ರಿಯಾಶೀಲ ಚಟುವಟಿಕೆಗಳಿಗೆ ಅಂತಹ ಮಕ್ಕಳನ್ನು ಸೇರಿಸಿಕೊಳ್ಳದಿರುವುದು ಹೀಗೆ ನಡೆಯುತ್ತವೆ. ಈ ರೀತಿಯ ಕಡೆಗಣನೆಯು ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಕಲಂದರ್ ಶಾಫಿ ಮಾತನಾಡಿ, ಶಾಲೆಯೊಂದನ್ನು ಆರಂಭಿಸಬೇಕಾದರೆ ಅಲ್ಲಿ ಆಟದ ಮೈದಾನ ಸೇರಿದಂತೆ ಮೂಲಭೂತ ಸೌಕರ್ಯಗಳು ಇರಬೇಕು ಅಂತ ಇದೆ. ಆದರೆ ಅದು ಎಷ್ಟು ಖಾಸಗಿ ಶಾಲೆಯಲ್ಲಿವೆ? ಆದರೂ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಅಂತಹ ಶಾಲೆಗಳ ಪರವಾನಿಗೆಯನ್ನು ಯಾಕೆ ನೀವು ರದ್ದು ಮಾಡುವುದಿಲ್ಲ ಎಂದು ಪ್ರಶ್ನಿಸಿದರು. ರೂಪೇಶ್ ರೈ ಅಲಿಮಾರ್ ಕೂಡಾ ಖಾಸಗಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಇವೆಯೇ ಎಂದು ಅಧಿಕಾರಿಗಳು ಪರಿಶೀಲಿಸಬೇಕು ಎಂದರು. ಕಲಂದರ್ ಶಾಫಿ ಇದಕ್ಕೆ ಪೂರಕವಾಗಿ ಮಾತನಾಡಿ, ಖಾಸಗಿ ಶಾಲೆಗಳಲ್ಲಿ ಸರಕಾರ ನಿಗದಿ ಪಡಿಸಿದ ಶಾಲಾ ಶುಲ್ಕವನ್ನು ನೊಟೀಸ್ ಬೋರ್ಡ್ನಲ್ಲಿ ಪ್ರಕಟಿಸುತ್ತಿಲ್ಲ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನೀವು ಖಾಸಗಿ ಶಾಲೆಗಳನ್ನು ಪರಿಶೀಲಿಸುವುದಿಲ್ಲವೇ ಎಂದರು. ಅದಕ್ಕೆ ಸಿಆರ್ಪಿ ಮುಹಮ್ಮದ್ ಅಶ್ರಫ್ ಮಾತನಾಡಿ, ದೂರು ಬಂದರೆ ಪರಿಶೀಲಿಸುತ್ತೇವೆ ಎಂದಾಗ, ಕಲಂದರ್ ಶಾಫಿ ದೂರಿಗಾಗಿ ಕಾಯಬೇಡಿ. ನೀವು ಎಲ್ಲಾ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿ, ಸರಕಾರದ ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳಿ ಎಂದರು.
ನೀವು ರಾಜಕೀಯ ಮಾಡುವುದು ಎನ್ನಬಹುದೇ?: ಗ್ರಾಮಸ್ಥೆ ಅನಿ ಮಿನೇಜಸ್ ಮಾತನಾಡಿ, ಆದರ್ಶನಗರದ ಅಂಗನವಾಡಿ ಪರಿಸರದಲ್ಲಿ ಗಿಡ-ಗಂಟಿಗಳು ತುಂಬಿಹೋಗಿದ್ದು, ಇದನ್ನು ತೆರವುಗೊಳಿಸಬೇಕೆಂದು ನಾವು ಗ್ರಾ.ಪಂ.ಗೆ ಮನವಿ ನೀಡಿದ್ದೆವು. ಆ ಬಳಿಕ ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯವರು ಮತ್ತು ಸಹಾಯಕಿಯವರೇ ಕೆಲಸದವರನ್ನು ನಿಯೋಜಿಸಿ ಅಂಗನವಾಡಿಯ ಸುತ್ತಲಿನ ಪರಿಸರದ ಗಿಡ-ಗಂಟಿಗಳನ್ನು ತೆರವು ಮಾಡಿದ್ದಾರೆ. ಆದರೆ ನಾವು ನೀಡಿದ ಮನವಿಯ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ಇದೊಂದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ. ಅದು ರಾಜಕೀಯ ಪ್ರೇರಿತ ಹೇಗಾಗುತ್ತದೆ. ಅಲ್ಲಿ ಗಿಡ-ಗಂಟಿಗಳು ತುಂಬಿದ್ದರಿಂದಲ್ಲವೇ? ಅಂಗನವಾಡಿಯವರು ಸ್ವಚ್ಛತೆ ಮಾಡಿದ್ದು. ರಸ್ತೆ ಬದಿಯ ಗಿಡ- ಗಂಟಿಯ ತೆರವು ಮಾಡುವುದು ಗ್ರಾ.ಪಂ.ನವರ ಜವಾಬ್ದಾರಿ. ಮೌಖಿಕವಾಗಿ ದೂರು ನೀಡಿದರೆ ಮನವಿ ಕೊಡಿ ಅಂತೀರಿ. ಮನವಿ ಕೊಟ್ಟರೆ ರಾಜಕೀಯ ಪ್ರೇರಿತ ಅಂತೀರಿ. ನೀವು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಗಿಡ-ಗಂಟಿಗಳ ತೆರವು ಮಾಡಿದ ಬಳಿಕ ಮತ್ತೆ ಮಾಡಿಲ್ಲವೇ ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು. ಆಗ ಪಿಡಿಒ ಸತೀಶ್ ಬಂಗೇರ ಡಿ. ಅವರು ಮಾಡಲಾಗಿದೆ ಎಂಬಂತೆ ತಲೆಯಾಡಿಸಿದರು. ಆಗ ಅನಿ ಮಿನೇಜಸ್, ಮನವಿಯನ್ನು ರಾಜಕೀಯ ಪ್ರೇರಿತ ಎಂದು ನೀವು ಹೇಳುವುದಾದರೆ ಸಪ್ಟೆಂಬರ್ ಬಳಿಕ ಹುಲ್ಲು ತೆರವು ಮಾಡಿದಾಗ ಆದರ್ಶನಗರದಲ್ಲಿ ಯಾಕೆ ಮಾಡಿಲ್ಲ. ಇದರಲ್ಲಿ ನೀವು ರಾಜಕೀಯ ಮಾಡಿದ್ದಾ ಎಂದು ನಾವು ಪ್ರಶ್ನಿಸಬಹುದಲ್ಲವೇ ಎಂದರು. ಆಗ ಕಲಂದರ್ ಶಾಫಿ ಮಾತನಾಡಿ, ನೀವು ಇಷ್ಟು ಬಾರಿ ಮಾತ್ರ ರಸ್ತೆ ಬದಿಯ ಗಿಡ-ಗಂಟಿಗಳ ತೆರವು ಅನ್ನೋ ಮಾನದಂಡ ಮಾಡಬೇಡಿ. ರಸ್ತೆ ಬದಿಯಲ್ಲಿ ಗಿಡ-ಗಂಟಿಗಳು ಬೆಳೆದು ಸಾರ್ವಜನಿಕರಿಗೆ ಸಮಸ್ಯೆಯಾದಾಗ ಇದರ ತೆರವು ಕಾರ್ಯ ನಡೆಸಿ ಎಂದರು. ರೂಪೇಶ್ ರೈ ಅಲಿಮಾರ್ ಕೂಡಾ ಮಾತನಾಡಿ, ಮೊದಲೇ ಇದಕ್ಕೊಂದು ಕ್ರಿಯಾಯೋಜನೆ ತಯಾರಿಸಿ. ಗ್ರಾಮದ ಅಭಿವೃದ್ಧಿ ಮುಖ್ಯ ಎಂದರು. ಗ್ರಾಮಸ್ಥ ಪ್ರಕಾಶ್ ಮಾತನಾಡಿ, ಆದರ್ಶನಗರ ಕಾಲನಿಯಲ್ಲಿ ಮಹಿಳೆಯೋರ್ವರ ಹೆಸರನ್ನು ಉಲ್ಲೇಖಿಸಿ, ಅವರ ಜಾಗದಲ್ಲಿ ಕಾಡು ಬೆಳೆದಿದೆ ಎಂದು ಆರೋಪಿಸಿದರು. ಆಗ ಅಲ್ಲೇ ಇದ್ದ ಮಹಿಳೆ ಎದ್ದು ನಿಂತು. ಅದು ನನ್ನ ಜಾಗವಲ್ಲ. ನನಗೆ ಅಲ್ಲಿ ಜಾಗವೇ ಇಲ್ಲ. ವೈಯಕ್ತಿಕ ದ್ವೇಷದಿಂದ ಸುಮ್ಮನೆ ಆರೋಪ ಮಾಡಬೇಡಿ ಎಂದರು. ಆಗ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ವೈಯಕ್ತಿಕ ದ್ವೇಷ ಇಲ್ಲಿಗೆ ತರಬೇಡಿ. ಹೆಸರು ಉಲ್ಲೇಖ ಮಾಡುವುದು ಸರಿಯಲ್ಲ ಎಂದರು. ಅಮಿತಾ ಹರೀಶ್ ಕೂಡ ಇದಕ್ಕೆ ಧ್ವನಿಗೂಡಿಸಿದರು.
ಭೂಮಿ ಕರ ಬೇಡ: ಭೂಮಿ ಕರದ ಬಗ್ಗೆ ವಿಷಯ ಪ್ರಸ್ತಾಪಿಸಿದ ಕಲಂದರ್ ಶಾಫಿ, ಬೇರೆಲ್ಲೂ ಗ್ರಾ.ಪಂ.ನಲ್ಲಿ ಭೂಮಿಕರ ವಸೂಲಿ ಮಾಡುತ್ತಿಲ್ಲ. ಆದರೆ ನೆಕ್ಕಿಲಾಡಿಯಲ್ಲಿ ಮಾತ್ರ ಅದನ್ನು ಮಾಡಲಾಗುತ್ತದೆ. ಇಲ್ಲಿಗೆ ಅದು ಬೇಡ ಎಂದರು. ಆಗ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಈ ಹಿಂದಿನ ಗ್ರಾಮ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಿದ್ದೇವೆ. ಹಾಗಾದರೆ ನಮ್ಮ ನಿರ್ಣಯಕ್ಕೆ ಬೆಲೆಯಿಲ್ಲವೇ ಎಂದು ಪ್ರಶ್ನಿಸಿದರು. ಆಗ ಸದಸ್ಯ ಪ್ರಶಾಂತ್ ಎನ್. ಮಾತನಾಡಿ, ಭೂಮಿ ಕರ ಬೇಡವೆಂದು ನಾವು ಕೂಡಾ ನಿರ್ಣಯ ಮಾಡಿದ್ದೇವೆ. ಆದರೆ ಅದನ್ನು ಪಡೆಯಲೇ ಬೇಕೆಂದು ಸರಕಾರದ ಆದೇಶವಿದೆ. ಹಾಗಾಗಿ ಪಿಡಿಒ ಅವರ ಮೇಲೆ ಮೇಲಾಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಗ್ರಾಮದ ಜನರಿಗೆ ಮನವರಿಕೆ ಮಾಡಿಕೊಡಲು ಜಿ.ಪಂ.ನ ಸಿಇಒ ಅವರಲ್ಲಿ ಕೇಳಿಕೊಂಡಿದ್ದೇವೆ. ಅವರು ಬರುತ್ತೇನೆ ಎಂದಿದ್ದಾರೆ. ಅಲ್ಲಿಯೇ ಈ ಬಗ್ಗೆ ಚರ್ಚೆ ನಡೆಸೋಣ ಎಂದರು. ಆಗ ಗ್ರಾಮಸ್ಥ ಅಸ್ಕರ್ ಅಲಿ ಮಾತನಾಡಿ, ಅದು ಒಳ್ಳೆಯ ಅಭಿಪ್ರಾಯ. ಭೂಮಿ ಕರ ಪಡೆಯಬೇಕೆಂದು ಆದೇಶವಿದ್ದರೂ, ಅದರಲ್ಲಿ ಕನಿಷ್ಟ- ಗರಿಷ್ಟ ಅಂತ ಇದೆ. ಆದ್ದರಿಂದ ಇಲ್ಲಿ ಎಷ್ಟು ಕನಿಷ್ಟ ಸಾಧ್ಯವೋ ಅಷ್ಟು ಪಡೆಯಿರಿ ಎಂದು ಸಲಹೆ ನೀಡಿದರು.
ಗೃಹಲಕ್ಷ್ಮೀ ಬರುತ್ತಿಲ್ಲ: ಗ್ರಾಮಸ್ಥ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ನಮ್ಮ ಮನೆಯಲ್ಲಿ ಈವರೆಗೆ ಒಂದು ಕಂತು ಕೂಡಾ ಗೃಹಲಕ್ಷ್ಮೀ ಬರಲಿಲ್ಲ ಎಂದರು. ಆಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ಸುಜಾತ ಅವರು ಉತ್ತರಿಸಿ, ಜಿಎಸ್ಟಿ, ಐಟಿ ರಿಟರ್ನ್ಸ್ ಇದ್ದವರಿಗೆ ಗೃಹ ಲಕ್ಷ್ಮೀ ಹಣ ಬಂದಿಲ್ಲ. ಕೆಲವರು ಸ್ತ್ರೀ ಶಕ್ತಿ ಸೇರಿದಂತೆ ಸಂಘದಲ್ಲಿ ಗುಂಪು ಸಾಲವಿದ್ದವರದ್ದೂ ಕೂಡಾ ಜಿಎಸ್ಟಿ ತೋರಿಸುವ ಕಾರಣ ಗೃಹಲಕ್ಷ್ಮೀ ಹಣ ಬಂದಿಲ್ಲ. ಇದನ್ನು ಇಲ್ಲಿ ನಮಗೇನೂ ಮಾಡಲು ಆಗುವುದಿಲ್ಲ. ಈ ಬಗ್ಗೆ ಇಲಾಖೆಗೆ ತಿಳಿಸಿದ್ದೇವೆ. ಅದು ಸರಕಾರದ ಮಟ್ಟದಲ್ಲೇ ಸರಿಯಾಗಿ ಬರಬೇಕಿದೆ ಎಂದರು. ಅದಕ್ಕೆ ಅಬ್ದುಲ್ ರಹಿಮಾನ್ ಯುನಿಕ್ ಮಾತನಾಡಿ, ಈ ಬಗ್ಗೆ ಸರಕಾರ ಹೇಳುತ್ತದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ವಿಚಾರಿಸಿ ಅಂತ. ಆದರೆ ನಿಮ್ಮನ್ನು ಕೇಳಿದರೆ ನೀವು ಹೀಗೆ ಹೇಳ್ತೀರಿ ಎಂದರು. ಅದಕ್ಕೆ ಸುಜಾತ ಅವರು ಮಾತನಾಡಿ, ಇದು ನಮಗೇನು ಮಾಡೋಕೆ ಬರೋದಿಲ್ಲ. ನಮ್ಮಿಂದಾಗುವುದನ್ನು ಎಲ್ಲಾ ಪರಿಹರಿಸಿ ಕೊಟ್ಟಿದ್ದೇವೆ ಎಂದರು.
ವಿಷಯ ಏನೆಂದು ಹೇಳಿ?: ಗ್ರಾಮಸ್ಥ ಜತೀಂದ್ರ ಶೆಟ್ಟಿ ಅಲಿಮಾರ್ ಅವರು ಮಾತನಾಡಿ, ನಾನು ಹಿಂದೆ ಮಾಡಿದ ಹೋರಾಟಗಳ ಬಗ್ಗೆ ಹೇಳುತ್ತಾ, ಆಗ ಸ್ಪಂದಿಸಿದ್ದ ಅಧಿಕಾರಿಗಳನ್ನು ಹೊಗಳಿದರಲ್ಲದೆ, ಈಗ ನಮ್ಮ ಕಾರ್ಯಾಂಗ ವ್ಯವಸ್ಥೆಯಿಂದ ಏನು ನಡೆಯುತ್ತಿಲ್ಲ. ಇಲ್ಲಿ ಅರ್ಜಿಗಳೇ ಕಾಣೆಯಾಗುತ್ತಿವೆ. ನಾನೊಂದು ಅರ್ಜಿ ಕೊಟ್ಟಿದ್ದೇನೆ. ಅದಕ್ಕೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಜಿ.ಪಂ. ಸಿಇಒಗೆ ಲೆಟರ್ ಹಾಕಿದರೆ ಅವರು ತಾ.ಪಂ. ಇಒಗೆ ಬರೆಯುತ್ತಾರೆ. ಇಒ ಅವರು ಪಿಡಿಒಗೆ ಬರೆಯುತ್ತಾರೆ. ಆದರೆ ಯಾವುದೇ ಕ್ರಮವಾಗಿಲ್ಲ. ಸರಕಾರಿ ಅಧಿಕಾರಿಗಳಿಗೆ ನ್ಯಾಯಾಲಯದಲ್ಲಿ ಸರಕಾರಿ ವಕೀಲರನ್ನು ವಾದ ಮಾಡಲು ಕೊಡುತ್ತಾರೆ. ಅವರು ಇಲ್ಲಿ ವಕೀಲರಿಗೆ ಹಣ ಕೊಡಬೇಕಂತಿಲ್ಲ. ಈ ಬಗ್ಗೆ ನಾನು ಲೋಕಾಯುಕ್ತ ಕ್ತ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೇನೆ ಎನ್ನುತ್ತಿರುವಾಗ ಮಧ್ಯ ಪ್ರವೇಶಿಸಿದ ಕಲಂದರ್ ಶಾಫಿ, ಸರ್ ನೀವು ಮಾತನಾಡುವ ವಿಷಯ ಏನೇಂದು ಹೇಳಿ ಎಂದರು. ಅದಕ್ಕೆ ಗ್ರಾಮಸ್ಥರಾದ ಮಲ್ಲೇಶ್, ಇಸಾಕ್ ಧ್ವನಿಗೂಡಿಸಿದರು. ಆಗ ತಾನು ಹೇಳುತ್ತಿದ್ದ ವಿಷಯವನ್ನು ಅರ್ಧದಲ್ಲೇ ನಿಲ್ಲಿಸಿದ ಜತೀಂದ್ರ ಶೆಟ್ಟಿಯವರು, ನಾನು ಪರಿಶಿಷ್ಟ ಜಾತಿಯವರ ಮನೆ ಬಳಿ ರಸ್ತೆಯೊಂದನ್ನು ಸರಿ ಮಾಡಿ ಎಂದು ಅರ್ಜಿ ಕೊಟ್ಟಿದ್ದೇನೆ ಎಂದರು. ಆಗ ಅದು ಹೇಳಿ. ರಸ್ತೆಗಳ ಅಭಿವೃದ್ಧಿ ಆಗಲೇ ಬೇಕು. ಇದಕ್ಕೆ ನಮ್ಮದೂ ಬೆಂಬಲವಿದೆ. ಆ ಬಗ್ಗೆ ನಿರ್ಣಯವನ್ನೂ ಮಾಡೋಣ ಎಂದು ಹಲವರು ಸಹಮತ ವ್ಯಕ್ತಪಡಿಸಿದರು.
ತೆರಿಗೆ ಹಣ ಖರ್ಚಿಗೆ ಮಿತಿ ಇರಲಿ: ವರದಿಯಲ್ಲಿದ್ದ ಖರ್ಚಿನ ಬಗ್ಗೆ ಅಬ್ದುರ್ರಹ್ಮಾನ್ ಯುನಿಕ್ ವಿವರ ಕೇಳಿದಾಗ, ಪಿಡಿಒ ಮಾಹಿತಿ ನೀಡಿದರು. ಆಗ ಸಾಮಾನ್ಯ ಸಭೆ, ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ, ಅಧಿಕಾರ ಸ್ವೀಕಾರ ಮತ್ತಿತರ ಕಾರ್ಯಕ್ರಮಗಳಿಗೆ ಊಟ- ತಿಂಡಿಯ ಖರ್ಚು ಅಧಿಕ ಕಂಡು ಬಂದಾಗ ಮಾತನಾಡಿದ ಅಬ್ದುರ್ರಹ್ಮಾನ್ ಯುನಿಕ್, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಬೇಡ. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡಬೇಡಿ. ಖರ್ಚಿಗೆ ಮಿತಿ ಇರಲಿ ಎಂದರು. ಅದಕ್ಕೆ ರೂಪೇಶ್ ರೈ, ಅನಿ ಮಿನೇಜಸ್ ಸೇರಿದಂತೆ ಇನ್ನಿತರರು ಧ್ವನಿಗೂಡಿಸಿದರು.
ಚರಳಿಗೆ ಇಷ್ಟೊಂದು ಖರ್ಚಾ?: ಗ್ರಾ.ಪಂ.ನ ವಿವಿಧ ಕಡೆ ಚರಳು ಹಾಕಿದ ಖರ್ಚು ಹಾಗೂ ಚರಂಡಿ ದುರಸ್ತಿಯ ಖರ್ಚು ಒಟ್ಟು 51,820 ಆಗಿರುವುದನ್ನು ಕಂಡ ಗ್ರಾಮಸ್ಥ ಝಕಾರಿಯ ಕೊಡಿಪ್ಪಾಡಿ, ಚರಳು ಒಂದು ಕಡೆ ಮಾತ್ರ ಹಾಕಲಾಗಿದೆ ಎಂದರು. ಆಗ ಪಿಡಿಒ ಅವರು ಬೇರೆ ಕಡೆಗಳಲ್ಲಿ ಕೂಡಾ ಚರಳು ಹಾಕಿರುವ ಬಗ್ಗೆ ಮಾಹಿತಿ ನೀಡಿದಾಗ, ಅನಿ ಮಿನೇಜಸ್ ಮಾತನಾಡಿ, ನಮ್ಮ ಗ್ರಾ.ಪಂ. ವ್ಯಾಪ್ತಿಯಿಂದ ಮರಳು ತೆಗಿಯುವವರು ಹೇಳುತ್ತಾರೆ. ನಾವು ಚರಳನ್ನು ಉಚಿತವಾಗಿ ನೀಡಿದ್ದು ಅಂತ. ಹಾಗಿರುವಾಗ ಇಷ್ಟೊಂದು ಖರ್ಚು ಯಾಕೆ ಎಂದು ಪ್ರಶ್ನಿಸಿದರು. ಆಗ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ.ಯವರು ಅದು ಜೆಸಿಬಿ, ವಾಹನ ಬಾಡಿಗೆ ಸೇರಿದಂತೆ ಸಾಗಾಟ, ಹಾಕಿರುವ ಖರ್ಚುಗಳು ಎಂದು ಅನಿ ಮಿನೇಜಸ್ ಅವರಲ್ಲಿ ತಿಳಿಸಿದರು. ಈ ನಡುವೆ ಬೇರೆ ವಿಚಾರಗಳು ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾಪಿಸಿದ್ದರಿಂದ ಚರಳಿನ ವಿಷಯದ ಚರ್ಚೆಗೆ ಅಲ್ಲಿಗೆ ತೆರೆ ಬಿತ್ತು.
ದಾರಿ ದೀಪವಿಲ್ಲ: ದಾರಿ ದೀಪವಿಲ್ಲದಿರುವ ಬಗ್ಗೆ ಹಾಗೂ ಈಗ ಗುತ್ತಿಗೆ ತೆಗೆದುಕೊಂಡವರು ಅದರ ನಿರ್ವಹಣೆ ಮಾಡದಿರುವ ಬಗ್ಗೆ ಸಾಕಷ್ಟು ಸಭೆಯಲ್ಲಿ ಚರ್ಚೆ ನಡೆಯಿತು.
ವೇದಿಕೆಯಲ್ಲಿ ಸದಸ್ಯರಾದ ಶ್ರೀಮತಿ ತುಳಸಿ, ಶ್ರೀಮತಿ ರತ್ನಾವತಿ, ರಮೇಶ್ ನಾಯ್ಕ, ಶ್ರೀಮತಿ ಸ್ವಪ್ನ, ಶ್ರೀಮತಿ ವೇದಾವತಿ, ಶ್ರೀಮತಿ ಗೀತಾ, ಹರೀಶ್ ಕೆ., ವಿಜಯಕುಮಾರ್ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಮೀನುಗಾರಿಕಾ ಇಲಾಖೆಯ ಸಹಾಯಕಿ ನಿರ್ದೇಶಕಿ ಶ್ರೀಮತಿ ಮಂಜುಳಾ ಶೆಣೈ ಸಭೆಯನ್ನು ಮುನ್ನಡೆಸಿದರು. ಗ್ರಾಮಸ್ಥರಾದ ಗಣೇಶ್, ಅಶೋಕ, ಸದಾನಂದ, ನವಾಝ್, ಗಣೇಶ್ ನಾಯಕ್, ಝೊಹಾರ, ಝೀನತ್, ಐಸಮ್ಮ, ಅಬ್ದುಲ್ ಮಜೀದ್, ಅಬ್ದುಲ್ ಖಾದರ್, ಇಸ್ಮಾಯೀಲ್ ಎಂ., ಶಬೀರ್ ಅಹಮ್ಮದ್, ಚಂದ್ರಶೇಖರ್ ಭಟ್ ಮತ್ತಿತರರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.
ಮೈಂದನಡ್ಕದಲ್ಲಿ ಅಂಗನವಾಡಿ ಕಟ್ಟಡ ರಚನೆ ಆಗಿದೆಯಾ ಎಂದು ಕಲಂದರ್ ಶಾಫಿ ಪ್ರಶ್ನಿಸಿದಾಗ, ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವೀಚಾರಕಿ ಸುಜಾತ ಅವರು, ಅಲ್ಲಿ ಕಟ್ಟಡ ರಚನೆಯಾಗಿಲ್ಲ. ಈಗ ತಾತ್ಕಾಲಿಕವಾಗಿ ಅಲ್ಲೊಂದು ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ ಎಂದು ಉತ್ತರಿಸಿದರು. ಮರುಪ್ರಶ್ನಿಸಿದ ಕಲಂದರ್ ಶಾಫಿ, ಹಾಗಾದರೆ ಅದು ಯಾರ ಕಟ್ಟಡ ಎಂದರು. ಅದಕ್ಕೆ ಸುಜಾತ ಅವರು ಉತ್ತರಿಸಿ, ಅದು ನಮ್ಮೂರು- ನಮ್ಮವರು ಸಂಸ್ಥೆಯದ್ದು ಎಂದರು. ಸರಕಾರಿ ಜಾಗದಲ್ಲಿ ಸಂಸ್ಥೆಯೊಂದು ಕಟ್ಟಡ ಕಟ್ಟಿದರೆ, ನಾಳೆ ಇನ್ನೊಬ್ಬರು ಬಂದು ಕಟ್ಟುತ್ತಾರೆ ಎಂದು ರೂಪೇಶ್ ರೈ ಹೇಳಿದರು. ಈ ಬಗ್ಗೆ ಚರ್ಚೆಯಾಗುತ್ತಿರುವಾಗ ಸದಸ್ಯ ಪ್ರಶಾಂತ್ ಎನ್. ಮಾತನಾಡಿ, ಅಲ್ಲಿ ಸ್ತ್ರೀ ಶಕ್ತಿ ಸೇರಿದಂತೆ ಸಂಘಗಳ ಸಭೆ ನಡೆಸಲು ಸ್ಥಳೀಯರೆಲ್ಲಾ ಹಣ ಹಾಕಿ ಆ ಕಟ್ಟಡ ಕಟ್ಟಿದ್ದಾರೆ. ಈಗ ಅಂಗನವಾಡಿಗೆ ಬೇರೆ ಜಾಗವಿಲ್ಲದಿರುವುದರಿಂದ ಅಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಅಂಗನವಾಡಿಗೆ ಈಗಾಗಲೇ ಜಾಗ ಕೇಳಲಾಗಿದೆ. ಅದು ಸಿಕ್ಕಿದ ಕೂಡಲೇ ಇಲಾಖೆಯು ಅಲ್ಲಿ ಸ್ವಂತ ಕಟ್ಟಡ ನಿರ್ಮಿಸಲಿದೆ ಎಂದರು. ಆಗ ಅಸ್ಕರ್ ಅಲಿ ಮಾತನಾಡಿ, ಸಂಸ್ಥೆಗೆ ಕಟ್ಟಡ ಕೊಡಲು ಬರುವುದಿಲ್ಲ ಎಂದರು. ಇದಕ್ಕೆ ಹಲವರು ಧ್ವನಿಗೂಡಿಸಿದರಲ್ಲದೆ, ಅದೇ ಕಟ್ಟಡವನ್ನು ಅಂಗನವಾಡಿಗೆ ನೀಡಿ. ಸರಕಾರಿ ಜಾಗದಲ್ಲಿ ಯಾವುದೇ ಖಾಸಗಿ ಕಟ್ಟಡಗಳು ಬೇಡ. ಈ ಬಗ್ಗೆ ಸರ್ವೇ ನಡೆಸಿ, ಆ ಕಟ್ಟಡವನ್ನು ಅಂಗನವಾಡಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಒಪ್ಪಿಸುವಂತೆ ಗ್ರಾಮ ಆಡಳಿತಾಧಿಕಾರಿಗೆ ಸೂಚಿಸಿದರಲ್ಲದೆ, ಈ ಬಗ್ಗೆ ನಿರ್ಣಯ ಮಾಡಲು ಕೋರಿದರು.
ಪೋಟೋ: ೨೬ಯುಪಿಪಿನೆಕ್ಕಿಲಾಡಿ