ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲದಿಂದ ನಿಡ್ಪಳ್ಳಿ ವಿಜಯನಗರ ಹೋಗುವ ರಸ್ತೆಯ ಕಕ್ಕೂರು ಎಂಬಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಕಕ್ಕೂರು ಎಂಬಲ್ಲಿ ಅಂದಾಜು ಸುಮಾರು 150 ಮೀಟರ್ ನಷ್ಟು ಉದ್ದ ರಸ್ತೆ ಕಾಂಕ್ರೀಟ್ ಹಾಕಲು ಮಾತ್ರ ಬಾಕಿಯಿದ್ದು, ಈ ರಸ್ತೆಯಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ದಿನಂಪ್ರತಿ ಸಂಚರಿಸುತ್ತಿದ್ದು ಮಳೆಗಾಲದಲ್ಲಿ ಕೆಸರು ತುಂಬಿ ಸಂಚಾರಕ್ಕೆ ಬಹಳ ಸಮಸ್ಯೆಯಾಗಿದೆ.
ರಸ್ತೆಯ ಎರಡು ಬದಿ ನೀರು ಹರಿಯಲು ಚರಂಡಿಯೂ ಇಲ್ಲದೆ., ಇಲ್ಲಿ ರಸ್ತೆ ಬಹಳ ಕೆಟ್ಟು ಹೋಗಿದ್ದು ಜನರು ಸಂಚರಿಸಲು ಹರ ಸಾಹಸ ಪಡುವಂತಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ತಕ್ಷಣ ಸ್ಪಂದಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.
ಈ ರಸ್ತೆಯ ಆರಂಭ ಮತ್ತು ಅಂತ್ಯದಲ್ಲಿ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಲಾಗಿದೆ. ಆದರೆ ಮಧ್ಯ ಭಾಗದಲ್ಲಿ ಮಾತ್ರ ಸ್ವಲ್ಪ ಬಾಕಿಯಾಗಿದ್ದು, ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಇದರಿಂದ ಶಾಲಾ ಮಕ್ಕಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಬಹಳ ಸಮಸ್ಯೆಯಾಗಿದೆ. ಸಂಬಂಧಪಟ್ಟವರು, ಗ್ರಾಮ ಪಂಚಾಯತ್ ಸ್ಪಂದಿಸಲಿ.
ಚಂದ್ರಶೇಖರ ಕಕ್ಕೂರು, ಪ್ರಯಾಣಿಕ