ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ದಾಳಿಯಂತಹ ಘಟನೆ ನಡೆದಿಲ್ಲ – ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಹನೀಫ್ ಸಿಟಿ ಸ್ಪಷ್ಟನೆ

0

ಪುತ್ತೂರು: ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ಮೇಲೆ ಯಾರಿಂದಲೂ ದಾಳಿ ನಡೆದಿಲ್ಲ. ಮಸೀದಿಯ ಸಭಾಂಗಣದಲ್ಲಿ ನಡೆದ ಸಭೆಯ ಸಂದರ್ಭ ಉಂಟಾದ ಘಟನೆಯಲ್ಲಿ ಯಾವುದೇ ಪಕ್ಷ ಅಥವಾ ಸಂಘಟನೆಯ ಪಾತ್ರವಿಲ್ಲ. ಘಟನೆ ನಡೆದಿರುವುದು ಜಮಾಅತರು ಮತ್ತು ಉಸ್ಮಾನ್ ಜೌಹರಿ ಸಹೋದರರ ಮಧ್ಯೆ ಎಂದು ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ಹನೀಫ್ ಸಿಟಿ ಸ್ಪಷ್ಟನೆ ನೀಡಿದ್ದಾರೆ.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಮ್ಮ ಜುಮಾ ಮಸೀದಿಯ ಆವರಣದ ಒಳಗೆ ಯಾವುದೇ ಸಂಘ ಸಂಸ್ಥೆಗಳು ಮತ್ತು ಪಕ್ಷಗಳ ಚಟುವಟಿಕೆಗಳಿಗೆ ಅವಕಾಶವಿಲ್ಲ. ಉಸ್ಮಾನ್ ಜೌಹರಿ ನಮ್ಮ ಜಮಾಅತ್ ಸದಸ್ಯರಾಗಿದ್ದು, ಅವರ ಸಹೋದರರು ಬೇರೆ ಬೇರೆ ಊರುಗಳಲ್ಲಿ ವಾಸವಿರುವುದರಿಂದ ಅವರನ್ನು ಮಸಿದಿಯ ನಿಯಮಾನುಸಾರ ನಮಗೆ ಭೌಗೋಳಿಕವಾದ ವ್ಯಾಪ್ತಿಗೆ ಸಂಬಂಧಿಸಿ ನಮ್ಮ ಜಮಾಅತ್ ಸದಸ್ಯತ್ವ ಕೊಡಲಾಗಿಲ್ಲ. ಈ ಮಧ್ಯೆ ಉಸ್ಮಾನ್ ಜೌಹರಿಯವರು ತಪ್ಪು ಸಂದೇಶ ನೀಡಿ ಜಮಾತಿಗರ ಸಭೆ ಕರೆಯುವಂತೆ ಖಾಝಿಯವರಿಗೆ ಒತ್ತಡ ಹಾಕಿದ್ದರಿಂದ ಖುದ್ದು ಖಾಝಿಯವರೇ ರದ್ದುಪಡಿಸಿದ್ದ ಮಂಗಳವಾರದ ಸಭೆಯನ್ನು ಬುಧವಾರಕ್ಕೆ ನಿಗದಿಪಡಿಸಿದ್ದರು. ಹಾಗೆ ಬುಧವಾರ ನಡೆದ ಸಭೆಯಲ್ಲಿ ಉಸ್ಮಾನ್ ಜೌಹರಿ ಸಹೋದರರು ಗದ್ದಲ ಏರ್ಪಡಿಸಿದ್ದರು. ಈ ಕುರಿತು ಜೌಹರಿ ಮತ್ತು 7 ಮಂದಿಯ ವಿರುದ್ಧ ದೂರು ನೀಡಿದ್ದೇವೆ. ಈ ಮಧ್ಯೆ ಖಾಝಿಯವರ ಮೇಲೆ ದಾಳಿ ಮಾಡಲಾಗಿದೆಯೆಂಬ ಸುಳ್ಳು ಮಾಹಿತಿಯನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸಂಘಟನೆಯ ಮತ್ತು ಪಕ್ಷದ ವಿರುದ್ಧ ಹಬ್ಬಿಸುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಖಾಝಿಯವರ ಮೇಲೆ ದಾಳಿ ನಡೆದಿಲ್ಲ. ಘಟನೆಯು ಜಮಾಅತರು ಮತ್ತು ಉಸ್ಮಾನ್ ಜೌಹರಿ ಸಹೋದರರ ಮಧ್ಯೆ ಘಟನೆ ನಡೆದಿರುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನೆಲ್ಯಾಡಿ ಬದ್ರಿಯಾ ಜುಮಾ ಮಸ್ಜಿದ್‌ನ ಉಪಾಧ್ಯಕ್ಷ ಎನ್.ಎಸ್.ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಬೈಲು, ಕೋಶಾಧಿಕಾರಿ ಉಮ್ಮರ್, ಕಾರ್ಯದರ್ಶಿ ಸಿದ್ದಿಕ್ ನೆಲ್ಯಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here