ಕಾಲು ಕಳೆದುಕೊಂಡವರ ಬಾಳಿನಲ್ಲಿ ಬೆಳಕು ಚೆಲ್ಲುವುದೇ ನಮ್ಮ ಉದ್ದೇಶ-ಉಷಾ ಭಾರಧ್ವಾಜ್
ಪುತ್ತೂರು: ಕಾಲುಗಳನ್ನು ಕಳೆದುಕೊಂಡವರು ರೋಗಿಗಳಲ್ಲ, ಅವರು ಫಲಾನುಭವಿಗಳು ಎಂದು ನಾವು ಗುರುತಿಸಿಕೊಳ್ಳಬೇಕಾಗಿದೆ. ಫ್ರೀಡಂ ಟ್ರಸ್ಟ್ ಸಂಸ್ಥೆಯು ರೋಟರಿ ಪುತ್ತೂರು ಸಂಸ್ಥೆಯೊಂದಿಗೆ ಸೇರಿಕೊಂಡು ಇದು ದೇವರ ಕೆಲಸ ಎಂಬಂತೆ ಕಾಲಿಲ್ಲದವರಿಗೆ ಕೃತಕ ಕಾಲುಗಳ ಪರಿಕರಗಳನ್ನು ಪ್ರೀತಿಯಿಂದ ಹಾಗೂ ಜವಾಬ್ದಾರಿಯುತವಾಗಿ ಪೂರೈಸಿದ್ದು, ಕಾಲು ಕಳೆದುಕೊಂಡವರ ಬಾಳಿನಲ್ಲಿ ಬೆಳಕು ಚೆಲ್ಲುವುದೇ ನಮ್ಮ ಉದ್ದೇಶ ಎಂದು ಚೆನ್ನೈ ಫ್ರೀಡಂ ಟ್ರಸ್ಟ್‌ನ ಟ್ರಸ್ಟಿಯಾಗಿರುವ ಉಷಾ ಭಾರದ್ವಾಜ್ ಹೇಳಿದರು.
ಜ.30ರಂದು ರೋಟರಿ ಪುತ್ತೂರು, ರೋಟರಿ ಕ್ಲಬ್ ಕಿಲ್ಪಾಕ್ ತಮಿಳ್ನಾಡು ಇದರ ಆಶ್ರಯದಲ್ಲಿ ಚೆನ್ನೈ ಫ್ರೀಡಂ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಚೆನ್ನೈ ಮಂಬಲಂ ಇದರ ಸಹಭಾಗಿತ್ವದಲ್ಲಿ ರೋಟರಿ ಕ್ಲಬ್ ಕೆನಡ ಇದರ ಪ್ರಾಯೋಜಕತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಾರದಾ ಭಜನಾ ಮಂದಿರದ ಸಭಾಂಗಣದಲ್ಲಿ `ವಾಕ್ ಇಂಡಿಯಾ’ ಯೋಜನೆಯಡಿ ನಡೆದ ಉಚಿತ ಕೃತಕ ಕಾಲುಗಳ ಪರಿಕರಗಳ ಜೋಡಣಾ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಫಲಾನುಭವಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಕೃತಕ ಕಾಲುಗಳ ಪರಿಕರಗಳನ್ನು ಕಾಳಜಿ ಹಾಗೂ ಜವಾಬ್ದಾರಿಯಿಂದ ಉಪಯೋಗಿಸಿ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ ಮಾತನಾಡಿ, ಎಲ್ಲಾ ಸಂಸ್ಥೆಗಳ ಜೊತೆಗೂಡಿ ಮಾಡಿದ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ. ಫಲಾನುಭವಿಗಳು ಈ ನಿಟ್ಟಿನಲ್ಲಿ ಬಹಳ ಅದೃಷ್ಟವಂತರಾಗಿದ್ದು, ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವಂತಾಗಲಿ ಎಂದರು.
ರೋಟರಿ ವಲಯ ಸೇನಾನಿ ಝೇವಿಯರ್ ಡಿ’ಸೋಜ ಮಾತನಾಡಿ, ಕಾಲಿಲ್ಲದವರಿಗೆ ಕೃತಕ ಕಾಲುಗಳನ್ನು ನೀಡುವ ರೋಟರಿ ಸಂಸ್ಥೆಯ ಈ ಕಾರ್ಯವು ಮನಸ್ಸಿಗೆ ಸಂತೋಷ ನೀಡುವಂತಹ ಕೈಂಕರ್ಯವಾಗಿದೆ ಮಾತ್ರವಲ್ಲ ರೋಟರಿ ಸಂಸ್ಥೆಯ ಆಶಯಗಳಿಗೆ ಪೂರಕವಾದ ಕಾರ್ಯಕ್ರಮವಾಗಿದೆ. ಪುತ್ತೂರು ಹಾಗೂ ಚೆನ್ನೈಗೆ ಡಾ.ಸುಂದರ್‌ರವರು ಸೇತುಬಂಧವಾಗಿ ಕಾರ್ಯನಿರ್ವಹಿಸಿರುವುದು ಮತ್ತೂ ವಿಶೇಷವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿ, ಮಾತನಾಡಿ, ಕಾಲಿಲ್ಲದವರಿಗೆ ಕೃತಕ ಕಾಲುಗಳನ್ನು ಒದಗಿಸಿಕೊಡುವ ಈ ಕಾರ್ಯಕ್ರಮದಿಂದ ಫಲಾನುಭವಿಗಳ ದೈನಂದಿನ ಜೀವನ ಫಲಪ್ರದವಾಗಲಿ. ಮುಂದಿನ ವರ್ಷದಲ್ಲಿ ಇತರ ಅಗತ್ಯವಿರುವ ಫಲಾನುಭವಿಗಳಿಗೆ ನೆರವು ನೀಡುವ ನಿಟ್ಟಿನಲ್ಲಿ ಕ್ಲಬ್ ಮುಂದಾಗಲಿದೆ ಎಂದರು.
ಸಹಕರಿಸಿದವರಿಗೆ ಗೌರವ:
ಕಾಲು ಕಳೆದುಕೊಂಡ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಕುರಿತು ಕಾಲು ಕಳೆದುಕೊಂಡವರ ಕಾಲಿನ ಅಳತೆಯನ್ನು ಮಾಡಿ ಸಹಕರಿಸಿದ ಫ್ರೀಡಂ ಟ್ರಸ್ಟ್‌ನ ಸಿಬ್ಬಂದಿಗಳಾದ ಜಯವೇಲು, ಅಭಿಷೇಕ್, ರಾಯ್ ಮೋನು ಹಾಗೂ ಕೊಡಗಿನಿಂದ ಹನ್ನೊಂದು ಫಲಾನುಭವಿಗಳನ್ನು ಕರೆ ತಂದಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಇದರ ಸುರೇಂದ್ರ, ಸುನೀತಾರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯತು.
ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಸುಜಿತ್ ಡಿ.ರೈ, ಸಮುದಾಯ ವಿಭಾಗದ ನಿರ್ದೇಶಕ ಸೋಮಶೇಖರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಸದಸ್ಯರಾದ ಎಂ.ಜಿ ರೈ, ದತ್ತಾತ್ರೇಯ ರಾವ್, ಎಂ.ಜಿ ರಫೀಕ್, ಸುಬ್ಬಪ್ಪ ಕೈಕಂಬ, ಸುಬ್ರಹ್ಮಣ್ಯ, ಶ್ರೀಕಾಂತ್ ಕೊಳತ್ತಾಯ, ಕೋಶಾಧಿಕಾರಿ ಸಂಕಪ್ಪ ರೈ, ಚಿದಾನಂದ ಬೈಲಾಡಿ, ಪಿ.ಡಿ ಕೃಷ್ಣಕುಮಾರ್, ದಾಮೋದರ್, ಎ.ಜೆ ರೈ, ಬಾಲಕೃಷ್ಣ ಆಚಾರ್, ಶ್ರೀಧರ್ ಕಣಜಾಲು, ಡಾ.ಎಂ.ಎಸ್ ಭಟ್‌ರವರು ಉಪಸ್ಥಿತರಿದ್ದರು. ಡಾ.ಶ್ರೀಪ್ರಕಾಶ್ ಬಿ.ರವರ ಡೆಂಟಲ್ ಕ್ಲಿನಿಕ್ ಸಿಬ್ಬಂದಿ ಸಹಕರಿಸಿದರು. ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಡಾ.ಶ್ರೀಪ್ರಕಾಶ್ ಬಿ. ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
31 ಫಲಾನುಭವಿಗಳು, ರೂ.3.5 ಲಕ್ಷ ವೆಚ್ಚ..
ಉಚಿತ ಕೃತಕ ಕಾಲು ಜೋಡಣಾ ಶಿಬಿರದಲ್ಲಿ ಓರ್ವ ಫಲಾನುಭವಿಯ ಕೃತಕ ಕಾಲಿಗೆ ಸುಮಾರು ರೂ.10 ಸಾವಿರ ವೆಚ್ಚವಾಗಲಿದೆ. ಪುತ್ತೂರು ಹಾಗೂ ಕೊಡಗಿನ 31 ಮಂದಿ ಕಾಲಿಲ್ಲದ ಫಲಾನುಭವಿಗಳಿಗೆ ಅವರ ಕಾಲಿನ ಅಳತೆಗನುಗುಣವಾಗಿ ಸುಮಾರು 3.5 ಲಕ್ಷ ರೂ.ವೆಚ್ಚದಲ್ಲಿ ಚೆನ್ನೈಯಿಂದ ನಿರ್ಮಾಣ ಮಾಡಿಸಿದ ಕೃತಕ ಕಾಲಿನ ಪರಿಕರಗಳನ್ನು ಉಚಿತವಾಗಿ ಹಸ್ತಾಂತರಿಸಲಾಯಿತು. ನಿರ್ಮಿಸಿದ ಕೃತಕ ಕಾಲುಗಳಲ್ಲಿ ಬಿಗಿತ, ಸಡಿಲಿಕೆ ಹೀಗೆ ಯಾವುದಾದರೂ ತೊಂದರೆ ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟವರಿಗೆ ಫೋನಾಯಿಸಿದ್ದಲ್ಲಿ ಅವರಿಗೆ ಬದಲಿ ವ್ಯವಸ್ಥೆಯನ್ನು ಮಾಡಿ ಕೊಡಲಾಗುತ್ತದೆ. ಕೃತಕ ಕಾಲುಗಳು ಯಾವುದೇ ರೆಡಿಮೇಡ್ ಅಲ್ಲ, ಬದಲಾಗಿ ಫಲಾನುಭವಿಗಳ ಕಾಲಿನ ಅಳತೆಯನ್ನು ತೆಗೆದುಕೊಂಡು ಮಾಡಿದುದಾಗಿದೆ. ಇದನ್ನು ಮತ್ತೊಬ್ಬ ವ್ಯಕ್ತಿಗೆ ಧರಿಸಲು ಸಾಧ್ಯವಾಗುವುದಿಲ್ಲ.
-ಡಾ.ಶ್ರೀಪ್ರಕಾಶ್ ಬಿ,
ಪ್ರಾಜೆಕ್ಟ್ ಕೋ-ಆರ್ಡಿನೇಟರ್
ರೂ.1.26 ಲಕ್ಷ ದೇಣಿಗೆ..
ದೇಶದ ವಿವಿಧೆಡೆ ಕಾರ್ಯಾಚರಿಸುತ್ತಿರುವ ಚೆನ್ನೈ ಫ್ರೀಡಂ ಟ್ರಸ್ಟ್‌ರವರ ಈ ಸಾಮಾಜಿಕ ಕಳಕಳಿಗೆ ರೋಟರಿ ಕ್ಲಬ್ ಪುತ್ತೂರು ಇದರ ಸದಸ್ಯರು ರೂ.1.26 ಲಕ್ಷ ಮೊತ್ತವನ್ನು ಸಂಗ್ರಹ ಮಾಡಿದ್ದು, ಸಂಗ್ರಹಿಸಿದ ಮೊತ್ತದ ಚೆಕ್‌ನ್ನು ರೋಟರಿ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ಚೆನ್ನೈ ಫ್ರೀಡಂ ಟ್ರಸ್ಟ್‌ನ ಟ್ರಸ್ಟಿಯಾದ ಉಷಾ ಭಾರದ್ವಾಜ್‌ರವರಿಗೆ ಹಸ್ತಾಂತರಿಸಿದರು.