ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಧಾನ ಬೆಳೆ ಅಡಿಕೆಯಾಗಿದ್ದು, ಆದರೆ ಇದೀಗ ಹೊರ ದೇಶದ ಅಡಿಕೆ ಆಮದಿನಿಂದಾಗಿ ಇಲ್ಲಿನ ಅಡಿಕೆ ಉತ್ಪತ್ತಿಯಿಂದ ಬದುಕು ಸಾಗಿಸುತ್ತಿದ್ದ ಕೃಷಿಕರ ಬದುಕು ದುಸ್ಥರವಾಗಿದೆ. ಹೊರದೇಶದ ಅಡಿಕೆ ಆಮದಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ರೈತರು ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಒಕ್ಕೂಟದ ಮುಖ್ಯಸ್ಥ ರೂಪೇಶ್ ರೈ ಅಲಿಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಹೊರ ದೇಶದಿಂದ ಅಡಿಕೆ ಭಾರತಕ್ಕೆ ಬರುವುದರಿಂದ ಅಡಿಕೆ ದರ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇವತ್ತು ಹೊರ ದೇಶದ ಅಡಿಕೆ ತೆರಿಗೆ ಪಾವತಿ ಮಾಡಿ ಬರುವ ಜೊತೆಗೆ ಕಳ್ಳದಾರಿಯಲ್ಲೂ ಬರುತ್ತಿದೆ. ಇಲ್ಲಿ ಮಿಲಿಟರಿ ಭದ್ರತೆಯಿದ್ದರೂ ಕಳ್ಳಸಾಗಾಣಿಕೆ ಆಗುತ್ತಿರುವುದು ವಿಪರ್ಯಾಸ ಎಂದರು. ಇದನ್ನು ನಿಲ್ಲಿಸಬೇಕು. ಸಂಸದರು ಈ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಹೊರ ದೇಶದ ಅಡಿಕೆ ಆಮದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನ ರೈತ ಸಂಘ ಒಕ್ಕೂಟದಿಂದ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖ್ಯಸ್ಥರಾದ ವಿನೋದ್ ಭಟ್ ಪಾದೆಕಲ್ಲು, ಇಬ್ರಾಹಿಂದ ಖಲೀಲ್, ಭಾಸ್ಕರ ರೈ ಉಪಸ್ಥಿತರಿದ್ದರು.