ಪುತ್ತೂರು: ಆನ್ಲೈನ್ ಮತ್ತು ಚೈನ್ ಮಾರ್ಕೆಟ್ ಸಿಸ್ಟಮ್ ಅನ್ನು ಎದುರಿಸಲು ಮತ್ತು ಗ್ರಾಹಕರಿಗೆ ಆನ್ಲೈನ್ ದರದಲ್ಲೇ ಮಾರಾಟ ಮತ್ತು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಪುತ್ತೂರು ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವೀಸ್ ಸಂಸ್ಥೆಗಳ ಹೊಸ ಸಂಘಟನೆ ಪುತ್ತೂರು ಐಟಿ ಡೀಲರ್ಸ್ ಅಸೋಸಿಯೇಶನ್ ಫೆ.10ರಂದು ದರ್ಬೆ ಸಂತ ಪಿಲೋಮಿನಾ ಕಾಲೇಜಿನ ಎದುರಿನ ಸಚ್ಚಿದಾನಂದ ಸಭಾಭವನದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷ ಅನೂಪ್ ಕೆ.ಜೆ. ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಅಸೋಸಿಯೇಶನ್ಗೆ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು, ಪುತ್ತೂರು, ಬಂಟ್ವಾಳ, ಸುಳ್ಯ, ಕಡಬ ಹಾಗೂ ವಿಟ್ಲ ತಾಲೂಕುಗಳಲ್ಲಿರುವ ಐಟಿ ಕ್ಷೇತ್ರದವರು ಕೈ ಜೋಡಿಸುತ್ತಿದ್ದಾರೆ. ಈಗಾಗಲೇ ಅಸೋಸಿಯೇಶನ್ ನಲ್ಲಿ 75 ಮಂದಿ ಸದಸ್ಯರಿದ್ದು, ಪುತ್ತೂರಿನಲ್ಲಿ 33 ಮಂದಿ ಇದ್ದಾರೆ. ಮುಂದೆ ಪರವಾನಿಗೆ ಹಾಗೂ ಜಿಎಸ್ ಟಿ ರಿಜಿಸ್ಟರ್ಡ್ ಹೊಂದಿರುವ ಸದಸ್ಯರನ್ನು ಮತ್ತಷ್ಟು ಸಂಖ್ಯೆಯಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದ ಅವರು ಆನ್ ಲೈನ್ ಮಾರ್ಕೆಟ್ನ್ನು ಎದುರಿಸುವ ನಿಟ್ಟಿನಲ್ಲಿ ಎಲ್ಲರು ಅದೇ ಸಂಘಟಕರಾಗಿ ಅದೇ ದರದಲ್ಲಿ ಮಾರಾಟ ವ್ಯವಹಾರ ನಡೆಸಲಿದ್ದೇವೆ. ಮುಂದಿನ ದಿನಗಳಲ್ಲಿ ಆನ್ಲೈನ್ ಮಾರಾಟ ಸೇವೆಯ ಯೋಜನೆ ಹಾಕಿಕೊಳ್ಳಲಾಗಿದ್ದು, ಜೊತೆಗೆ ಅಸೋಸಿಯೇಶನ್ ಸಾಮಾಜಿಕ ಸೇವೆಯನ್ನು ಕೈಗೊಳ್ಳಲಿದೆ ಎಂದವರು ಹೇಳಿದರು. ಫೆ.10ರಂದು ಸಂಜೆ ಗಂಟೆ 7ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜೇಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣಮೋಹನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ನ ಕಾರ್ಯದರ್ಶಿ ಕಿಶೋರ್ ಕುಮಾರ್, ಖಜಾಂಜಿ ಶಿವಪ್ರಕಾಸ್, ಉಪಾಧ್ಯಕ್ಷ ಸುದರ್ಶನ್ ಉಪಸ್ಥಿತರಿದ್ದರು.