*ಗ್ರಾಮ ವಾಸ್ತವ್ಯದ ನಿಜವಾದ ಉದ್ದೇಶ ಜನರು ರಾಜರು-ಜನಪ್ರತಿನಿಧಿಗಳು, ಅಧಿಕಾರಿಗಳು ಜನಸೇವಕರು ಎಂಬ ಕಾರಣಕ್ಕಾಗಿ ಆಗಬೇಕಾಗಿದೆ.
*ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಹೇಳಿರುವ ‘ಜನರನ್ನು ಹಣಕ್ಕಾಗಿ ಸತಾಯಿಸಬೇಡಿ, ’ ಎಂಬುವುದು ಮತ್ತು ಸುಳ್ಯದ ಮೀಸಲಾತಿ ರೊಟೇಷನ್ ಬಗ್ಗೆ ಅವರ ಅಭಿಪ್ರಾಯ ಕಾರ್ಯರೂಪಕ್ಕೆ ಬರಲಿ
ಸುಳ್ಯದ ಕೊಲ್ಲಮೊಗ್ರುವಿನಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯ ಬರೀ ವರದಿಗಾಗಿ ಅಲ್ಲ. ಅದರ ಮೂಲ ಉದ್ದೇಶ ಪ್ರಜಾಪ್ರಭುತ್ವದಲ್ಲಿ ಜನರು ರಾಜರುಗಳಾಗಿರಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಸೇವಕರಾಗಿ ಕೆಲಸ ಮಾಡಬೇಕು ಎಂಬುವುದನ್ನು ತೋರಿಸಲಿಕ್ಕಾಗಿಯೇ ಎಂದು ಆಗಬೇಕು. ಕೊಲ್ಲಮೊಗ್ರುವಿನಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಡೆದ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಅವರು ವಾಸ್ತವ್ಯವಿರುವ ಗ್ರಾಮಕ್ಕೆ ಹೋಗಿ ಪರಿಹಾರ ನೀಡುವ, ಬಗೆಹರಿಸುವ ಈ ಕಾರ್ಯ ಪ್ರಜಾಪ್ರಭುತ್ವದ ಮೂಲ ಆಶಯವೇ ಆಗಿದೆ. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯರವರು ಆ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ ‘ಜನರನ್ನು ಹಣಕ್ಕಾಗಿ ಸತಾಯಿಸದೆ ಅವರ ಕೆಲಸ ಮಾಡಿಕೊಡಬೇಕು’ ಎಂಬ ಮಾತು ಎಲ್ಲಾ ಕಛೇರಿಗಳಲ್ಲಿ ಎಚ್ಚರಿಕೆಯ ಗಂಟೆಯಾಗಿ ಮೊಳಗಬೇಕು. ಅದು ಮುಂದೆ ಬರುವ ಲೋಕಸಭಾ ಚುನಾವಣೆಯ ಪ್ರಮುಖ ವಿಷಯವಾಗಬೇಕು. ಅಭ್ಯರ್ಥಿಗಳು, ಪಕ್ಷಗಳು ಅದನ್ನು ಖಡಾಖಂಡಿತವಾಗಿ ಆಚರಿಸುವ ಭರವಸೆ ನೀಡುವಂತೆ ಆಗಬೇಕು.
ಕ್ಷೇತ್ರಗಳ ಮೀಸಲಾತಿ ರೊಟೇಷನ್ನಂತೆ ಬೇರೆ ಬೇರೆ ಕ್ಷೇತ್ರಗಳಿಗೆ ಹೋಗಬೇಕು. ಆ ಮೂಲಕ ಅಲ್ಲಿಯ ದಲಿತರಿಗೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ದೊರಕಬೇಕು. ಈಗ ಮೀಸಲಾತಿ ಇರುವ ಕ್ಷೇತ್ರ ಸುಳ್ಯ ಜನರಲ್ ಕ್ಷೇತ್ರವಾಗಿ ಪರಿವರ್ತನೆಗೊಂಡು ಅಲ್ಲಿಯ ಸಾಮಾನ್ಯ ಜನರಿಗೂ ಸ್ಪರ್ಧಿಸುವ ಅವಕಾಶ ದೊರಕುವಂತಾಗಬೇಕು. ಸುಳ್ಯ ಮೀಸಲಾತಿ ಕ್ಷೇತ್ರದ ಶಾಸಕಿಯಾಗಿರುವ ಭಾಗೀರಥಿ ಮುರುಳ್ಯರವರು ಕೂಡ ‘ತಾನು ಮೀಸಲಾತಿ ರೊಟೇಷನ್ ಆಗಬೇಕು ಎಂದು ಹೇಳುವವಳೇ ಆಗಿದ್ದೇನೆ. ಎಲ್ಲಾ ಕ್ಷೇತ್ರದ ದಲಿತರಿಗೂ ಶಾಸಕರಾಗುವ ಅವಕಾಶ ಸಿಗಲಿ’ ಎಂದಿದ್ದಾರೆ. ಹೀಗಿರುವಾಗ ಆ ವಿಷಯ ಕೂಡ ಸುಳ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ವಿಷಯವಾಗಬೇಕು. ಬೇರೆ ಬೇರೆ ಕ್ಷೇತ್ರದ ದಲಿತರು ತಮಗೆ ಮೀಸಲಾತಿ ಅವಕಾಶ ದೊರಕಲಿಕ್ಕಾಗಿ ಸುಳ್ಯ ಕ್ಷೇತ್ರದ ಜನರು ಮೀಸಲಾತಿ ರೊಟೇಷನ್ನಲ್ಲಿ ಬದಲಾಗಲಿಕ್ಕಾಗಿ ಸಂಘಟಿತರಾಗಿ ಕೆಲಸ ಮಾಡಬೇಕು. ಹೋರಾಟ ಮಾಡಬೇಕು. ಈಗಾಗಲೇ ಸುಳ್ಯದಲ್ಲಿ ಆ ವಿಷಯದಲ್ಲಿ ಜನಾಭಿಪ್ರಾಯ ರೂಪಿತವಾಗಿರುವುದರಿಂದ ಜನತೆ ಸಭೆಯನ್ನು ಕರೆದು ಕಾರ್ಯಪ್ರವೃತ್ತರಾಗಬೇಕಲ್ಲವೇ?