ಪುತ್ತೂರು:ಕಾಸರಗೋಡು ಜೈಲಲ್ಲಿರುವ ಆರೋಪಿಯೋರ್ವನನ್ನು ತಿಂಗಳ ಹಿಂದೆ ಇರ್ದೆಯಲ್ಲಿ ಗ್ಯಾರೇಜೊಂದರಲ್ಲಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಾಡಿ ವಾರಂಟ್‌ನಲ್ಲಿ ಕರೆತಂದು ಪೊಲೀಸರು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯನ್ನು ಐದು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಇರ್ದೆ ಜಂಕ್ಷನ್‌ನಲ್ಲಿರುವ ಪ್ರಸಾದ್ ಎಂಬವರ ಗ್ಯಾರೇಜಿನಿಂದ ಕಳೆದ ಜನವರಿ 18ರಂದು ರಾತ್ರಿ ಟ್ರಾಲಿ ಜಾಕ್, ಸಣ್ಣ ಜಾಕ್, ಕಬ್ಬಿಣದ ಸ್ಟ್ಯಾಂಡ್, ಹಳೆಯ 5 ಬ್ಯಾಟರಿ, ಹೊಸ ಬ್ಯಾಟರಿ-1, ಟೂಲ್ ಸೆಟ್, ಆಯಿಲ್ 3 ಲೀ.ನ 5 ಕ್ಯಾನ್, ಒಮಿನಿ ಶಾಕ್ ಅಬ್ಸರ‍್ಬರ್ 2, ಲಿವರ್ ಮತ್ತು ಸ್ಲ್ಯಡಿಂಗ್ ಹ್ಯಾಮರ್, ಗೇರ್ ಬಾಕ್ಸ್ ಸ್ಕ್ರಾಪ್ ಸೇರಿದಂತೆ ಅಂದಾಜು 69.8 ಸಾವಿರ ರೂ.ಮೌಲ್ಯದ ಸೊತ್ತು ಕಳವಾಗಿತ್ತು.ಈ ಕುರಿತು ಅವರು ನೀಡಿರುವ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಕಾಸರಗೋಡಿನಲ್ಲಿ:
ಈ ಮಧ್ಯೆ ಇರ್ದೆಯಲ್ಲಿ ಕಳ್ಳತನ ನಡೆದ ದಿನವೇ ರಾತ್ರಿ ಕೇರಳದ ಬದಿಯಡ್ಕದಲ್ಲಿಯೂ ಗ್ಯಾರೇಜೊಂದರಲ್ಲಿ ಕಳ್ಳತನ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಪೊಲೀಸರು ಕಾಸರಗೋಡು ನೆಕ್ರಾಜೆಯ ನೆಲ್ಲಿಕಟ್ಟೆ ಮೂಸ ಎಂಬವರ ಮಗ ಫಾರೂಕ್ (42ವ.)ಎಂಬಾತನನ್ನು ಬಂಧಿಸಿದ್ದರು.ಆರೋಪಿ ಫಾರೂಕ್ ಇರ್ದೆ ಗ್ಯಾರೇಜ್ ಕಳವು ಪ್ರಕರಣದಲ್ಲಿಯೂ ಭಾಗಿಯಾಗಿದ್ದ ವಿಚಾರ ಅಲ್ಲಿನ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.ಈ ನಿಟ್ಟಿನಲ್ಲಿ ಆತನನ್ನು ಬಾಡಿ ವಾರಂಟ್ ಮೇಲೆ ಕಾಸರಗೋಡು ಜೈಲಿನಿಂದ ಕರೆ ತಂದಿರುವ ಪೊಲೀಸರು ಫೆ.12ರಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪ್ರಕರಣದ ವಿಚಾರಣೆಗಾಗಿ ಆರೋಪಿಯನ್ನು ತಮ್ಮ ಕಸ್ಟಡಿಗೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪಿಯನ್ನು ಐದು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿ ಆದೇಶಿಸಿದೆ.ಬದಿಯಡ್ಕ ಗ್ಯಾರೇಜ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಅಲ್ಲಿನ ಪೊಲೀಸರಿಂದ ಬಂಧಿತನಾಗಿದ್ದ ಮುಳ್ಳೇರಿಯಾ ಮುಳಿಯಾರು ಮಾಂಬಳ್ಳಿ ಮೊಹಮ್ಮದ್ ಶಫೀಕ್ ಎಂಬಾತನ ವಿಚಾರಣೆ ನಡೆಸಿದ ವೇಳೆ ಆರೋಪಿ ಫಾರೂಕ್ ಕುರಿತ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದ.