ಫೆ.16ರಿಂದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

0

ಪುತ್ತೂರು: ಹುತ್ತಕ್ಕೆ ಪೂಜೆ ಸಲ್ಲುವ ಪುತ್ತೂರು ಭಾಗದ ಏಕೈಕ ದೇವಸ್ಥಾನ ಎಂಬ ಕೀರ್ತಿಗೆ ಪಾತ್ರವಾಗಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಫೆ.16ರಿಂದ 24ರವರೆಗೆ ನಾನಾ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ನಳೀಲು ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳ್ತಿಗೆ, ಪಾಲ್ತಾಡು, ಕೆಯ್ಯೂರು, ಪೆರುವಾಜೆ ಗ್ರಾಮಗಳು ಮತ್ತು ಪುತ್ತೂರು, ಸುಳ್ಯ, ಕಡಬ ತಾಲೂಕುಗಳ ಪ್ರಮುಖ ಪಟ್ಟಣ, ಗ್ರಾಮಾಂತರ ಪ್ರದೇಶ ಸೇರಿದಂತೆ 8 ಸಾವಿರ ಆಮಂತ್ರಣ ಪತ್ರಿಕೆ ವಿತರಿಸಲಾಗಿದೆ. ಪ್ರತೀ ಆಮಂತ್ರಣ ಪತ್ರದೊಂದಿಗೆ ದೇವಳದ ಪ್ರಸಾದವನ್ನೂ ನೀಡಲಾಗಿದೆ ಎಂದರು.

ಪಾಕಶಾಲೆ ಉದ್ಘಾಟನೆ
ಫೆ.16ರಂದು ಬೆಳಗ್ಗೆ 9 ಗಂಟೆಗೆ ಪಾಕಶಾಲೆ ಉದ್ಘಾಟನೆ ನಡೆಯಲಿದೆ. ಅದೇ ದಿನ ಜಾತ್ರಾ ಮಹೋತ್ಸವದ ಗೊನೆ ಮುಹೂರ್ತ ಮತ್ತು ಉಗ್ರಾಣ ಮುಹೂರ್ತ ನಡೆಯಲಿದೆ ಎಂದು ವಿವರಿಸಿದರು.

ಹೊರೆಕಾಣಿಕೆ ಮೆರವಣಿಗೆ
ಫೆ.17ರಂದು ಬೆಳಗ್ಗೆ 10 ಗಂಟೆಗೆ ಮಣಿಕ್ಕರ ವಿಷ್ಣುಮೂರ್ತಿ ದೇವಳದಿಂದ ನಳೀಲು ಕ್ಷೇತ್ರಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಅಪರಾಹ್ನ 3 ಗಂಟೆಗೆ ಪಾಲ್ತಾಡಿಯ ಚಾಕೊಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಿಂದ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 18ರಂದು ಮುಕ್ಕೂರು ಕಡೆಯಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, 20ರಂದು ಬಾಯಂಬಾಡಿ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ ಎಂದು ಸಂತೋಷ್ ರೈ ಹೇಳಿದರು.

ಮಹಾಗಣಪತಿ ಪುನಃಪ್ರತಿಷ್ಠೆ
ಫೆ.18ರಂದು ಪೂರ್ವಾಹ್ನ ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ, ಶ್ರೀ ರಕ್ತೇಶ್ವರಿ ದೈವದ ಪುನಃ ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದೆ. 19 ಮತ್ತು 20ರಂದು ಬೆಳಗ್ಗೆ ದೀಪಾರಾಧನೆ, 21ರಂದು ಪೂರ್ವಾಹ್ನ ಶ್ರೀ ವ್ಯಾಘ್ರಚಾಮುಂಡಿ ಹಾಗೂ ರುದ್ರ ಚಾಮುಂಡಿ ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ನಡೆಯಲಿದೆ.

22ರಂದು ಬ್ರಹ್ಮಕಲಶ
ಫೆ.22ರಂದು ಬೆಳಗ್ಗೆ 7.48 ರಿಂದ 8.32ರವರೆಗೆ ನಡೆಯುವ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಫೆ.23ರಂದು ಶ್ರೀದೇವರ ವಾರ್ಷಿಕ ಜಾತ್ರಾ ಮಹೋತ್ಸವ, 33ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಶ್ರೀದೇವರ ಬಲಿ ಉತ್ಸವ, 24ರಂದು ದೈವಗಳ ನೇಮೋತ್ಸವ ಸಂಪನ್ನಗೊಳ್ಳಲಿದೆ.
ಉತ್ಸವ ಸಂದರ್ಭದಲ್ಲಿ ನಿರಂತರ ಅನ್ನದಾನ, ಉಪಾಹಾರ ಇರಲಿದೆ. ವಾಹನ ಪಾರ್ಕಿಂಗ್‌ಗೆ 2.5 ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಬರಲು 3 ಕಡೆಯಿಂದ ರಸ್ತೆ ವ್ಯವಸ್ಥೆ ಇದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಲಯ ಸಮಿತಿಯ ಸಂಚಾಲಕ ಸುರೇಶ್ ರೈ ಕೊಲ್ಯ, ಪ್ರಚಾರ ಸಮಿತಿಯ ಸಹ ಸಂಚಾಲಕ ಪ್ರವೀಣ್ ಚೆನ್ನಾವರ ಉಪಸ್ಥಿತರಿದ್ದರು.

ಐತಿಹಾಸಿಕ ಹಿನ್ನೆಲೆ
ಹಲವು ಶತಮಾನಗಳಿಂದ ಹುತ್ತ ರೂಪದಲ್ಲೇ ಇಲ್ಲಿ ದೇವರ ಸಾನಿಧ್ಯವಿದ್ದು, ಆರಂಭದಲ್ಲಿ ಮುಳಿಹುಲ್ಲಿನ ದೇವಾಲಯ ನಿರ್ಮಿಸಲಾಗಿತ್ತು. 1956ರಲ್ಲಿ ಜೀರ್ಣೋದ್ಧಾರಗೊಂಡಿತ್ತು. 2004ರಲ್ಲಿ ಕೊನೆಯ ಬಾರಿ ಬ್ರಹ್ಮಕಲಶೋತ್ಸವ ನಡೆದಿದೆ. ಬಳಿಕದ 20 ವರ್ಷದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆದಿದೆ. ಕಳೆದ 2 ವರ್ಷದಲ್ಲಿ 1.90 ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದೆ. ಇದೀಗ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಶಾಸಕ ಅಶೋಕ್ ರೈ ಅವರ ಮೂಲಕ ದೇವಳ ಸಂಪರ್ಕ ರಸ್ತೆಯನ್ನು 20 ಲಕ್ಷ ರೂ. ಸರಕಾರಿ ಅನುದಾನದ ಮೂಲಕ ಅಭಿವೃದ್ಧಿಪಡಿಸಲಾಗಿದೆ. 10 ಲಕ್ಷ ಅನುದಾನವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಇರಿಸಿದ್ದಾರೆ. ಮಹಾದ್ವಾರ ದಾನಿಗಳ ಮೂಲಕ ನಿರ್ಮಾಣಗೊಂಡಿದೆ ಎಂದು ಸಂತೋಷ್ ಕುಮಾರ್ ರೈ ಹೇಳಿದರು.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ
ಫೆ.18ರಂದು ಸಂಜೆ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ ಆಶೀರ್ವಚನದೊಂದಿಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಫೆ.19ರಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಫೆ.20ರಂದು ಸಭೆಯಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಫೆ.21ರ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನೃತ್ಯ ರೂಪಕ, ತುಳುನಾಟಕ, ಯಕ್ಷಗಾನ ಸೇರಿದಂತೆ ಪ್ರತೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂತೋಷ್ ರೈ ವಿವರಿಸಿದರು.

LEAVE A REPLY

Please enter your comment!
Please enter your name here