ಫೆ-.17-26: ಅರಿಕೆಗುಡ್ಡೆ ಬ್ರಹ್ಮಕಲಶೋತ್ಸವ

0

ಸಂಪೂರ್ಣ ಶಿಲಾಮಯಗೊಂಡಿರುವ ಕ್ಷೇತ್ರ : 22ರಂದು ದೇವರ ಪ್ರತಿಷ್ಠೆ, 25ರಂದು ಬ್ರಹ್ಮಕಲಶಾಭಿಷೇಕ

ಬೆಳ್ತಂಗಡಿ: ಸಂಪೂರ್ಣ ಶಿಲಾಮಯಗೊಂಡಿರುವ ತಾಲೂಕಿನ ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಫೆಬ್ರವರಿ 17ರಿಂದ 26ರವರೆಗೆ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ.


ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಭಕ್ತರನ್ನು ಸ್ವಾಗತಿಸಲು ಕ್ಷೇತ್ರ ಸಜ್ಜಾಗಿದೆ. ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಽಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆಯವರ ಗೌರವ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಫೆ.17ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಾಲಯ ಉದ್ಘಾಟನೆ, ಸಂಜೆ 5 ಗಂಟೆಗೆ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಸಂಜೆ 6 ಗಂಟೆಗೆ ಉಗ್ರಾಣ ಉದ್ಘಾಟನೆ ನೆರವೇರಲಿದೆ. 18ರಂದು ಬೆಳಗ್ಗೆ 8ರಿಂದ ಪುಣ್ಯಾಹ, ಅಥರ್ವಶೀರ್ಷ ಹೋಮ, ಅಂಕುರ ಪೂಜೆ, ಕ್ಷಾಲನಾದಿ ಬಿಂಬಶುದ್ಧಿ, ಶಾಂತಿ ಪ್ರಾಯಶ್ಚಿತ ಹೋಮಗಳು, ಹೋಮ, ಕಲಶಾಭಿಷೇಕ, 7 ಗಂಟೆಗೆ ವನದುರ್ಗಾ ಭೋಜನಾಲಯ ಉದ್ಘಾಟನೆ, 9.30ಕ್ಕೆ ಹೊರೆಕಾಣಿಕೆ ಮೆರವಣಿಗೆ ಉದ್ಘಾಟನೆ ನಡೆಯಲಿದೆ. ಅಂದಿನಿಂದ 26ರವರೆಗೂ ಕ್ಷೇತ್ರದಲ್ಲಿ ನಿರಂತರವಾಗಿ ಅನ್ನ ಸಂತರ್ಪಣೆ ನೆರವೇರಲಿದೆ.


18ರಂದು ಸಂಜೆ 4ರಿಂದ ಭಜನಾ ಕಾರ್ಯಕ್ರಮ, ಸಂಜೆ 6.30ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30ರಿಂದ ಸಾಂಸ್ಕೃತಿಕ ವೈವಿಧ್ಯ. 19ರಂದು ಸಂಜೆ 4ರಿಂದ ಭಜನೆ, ಸಂಜೆ 6.30ರಿಂದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧಿಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಭಾಗವಹಿಸುವರು. ಸಂಜೆ 7.30ರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. 20ರಂದು ಸಂಜೆ 4ರಿಂದ ಭಜನೆ, ಸಂಜೆ 6.30ರಿಂದ ಶ್ರೀಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ರಾತ್ರಿ 7.30ರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ ನಡೆಯಲಿದೆ.


21ರಂದು ಬೆಳಗ್ಗೆ 7ರಿಂದ ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವ ಹೋಮ, ತತ್ವ ಕಲಶ ಪೂಜೆ, ಕಲಶಾಭಿಷೇಕ, ಜೀವಕಲಶ ಶಯ್ಯಾನಯನ, ಅಂಕುರ ಪೂಜೆ, ಪ್ರಸನ್ನ ಪೂಜೆ, ಕಂಭೇಶಕರ್ಕರಿ ಕಲಶಪೂಜೆ, ನಿದ್ರಾ ಕಲಶಪೂಜೆ, ವಿದ್ಯೇಶಕಲಶ ಪೂಜೆ, ಸಾಯಂಕಾಲ 5ರಿಂದ ಶಯ್ಯಾಧಿವಾಸ ಧ್ಯಾನಾಧಿವಾಸ ಶಕ್ತಿದಂಡಕ ಮಂಡಲ ಪೂಜೆ, ಶಿರಸ್ತತ್ವ ಹೋಮ, ಅಽವಾಸ ಹೋಮ, ನವಶಕ್ತಿ ಹೋಮ, ಪೀಠಶಕ್ತಿ ಹೋಮ, ಪ್ರಸನ್ನ ಪೂಜೆ ನಡೆಯಲಿದೆ.


22ರಂದು ಬೆಳಗ್ಗೆ 11.30ಕ್ಕೆ ಪುಷ್ಯ ನಕ್ಷತ್ರ ವೃಷಭ ಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ, ಅಷ್ಟಬಂಧ ಪ್ರತಿಷ್ಠೆ, ಪರಿವಾರಗಳ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಸಂಜೆ 4ರಿಂದ ದಿಕ್ಪಾಲಕ ಹೋಮ, ದಿಕ್ಪಾಲ ಪ್ರತಿಷ್ಠೆ, ಮಾತೃ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಮಹಾಬಲಿ ಪೀಠಾಧಿವಾಸ ನೆರವೇರಲಿದೆ. ಸಂಜೆ 6.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 7.30ರಿಂದ ತುಳುನಾಡ ವೈಭವ ಪ್ರದರ್ಶನ ನಡೆಯಲಿದೆ.


23ರಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಂಜೆ 6.30ರಿಂದ ಧಾರ್ಮಿಕ ಸಭೆ, 24ರಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. 24ರಂದು ಸಂಜೆ 4ರಿಂದ ಬ್ರಹ್ಮಕಲಶ ಪೂಜೆ, ದ್ರವ್ಯಕಲಶ ಪೂಜೆ, ಅಧಿವಾಸ ಹೋಮಗಳು, ಕಲಶಾಧಿವಾಸ, ಸಂಜೆ 7.30ರಿಂದ ವಿದ್ಯಾಭೂಷಣ ಅವರಿಂದ ಭಕ್ತಿಗಾನಸುಧೆ ನಡೆಯಲಿದೆ. 25ರಂದು ಬೆಳಗ್ಗೆ 8.30ರ ಮೀನಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ ನೆರವೇರಲಿದೆ.

ತೆಂಗಿನಗರಿಯ ಚಪ್ಪರ
ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ತೆಂಗಿನಗರಿ ಬಳಸಿಕೊಂಡು ಸುಂದರವಾದ ಚಪ್ಪರ ನಿರ್ಮಾಣ ಮಾಡಲಾಗಿದೆ. ದೇವಾಲಯದ ಹೊರಾಂಗಣ, ಸಭಾಭವನಕ್ಕೆ ಚಪ್ಪರ ಹಾಕಿದ್ದು, ಪರಿಸರ ಸೊಬಗಿನಲ್ಲಿ ದೇವಾಲಯ ಕಂಗೊಳಿಸುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಶಾಮಿಯಾನ, ಶೀಟ್ ಹಾಕಲಾಗುತ್ತದೆ. ಆದರೆ ಇಲ್ಲಿ ತೆಂಗಿನಗರಿಗಳ ಚಪ್ಪರ ಹಾಕಿದ್ದು, ತುಳುನಾಡಿನ ಆಚಾರ-ವಿಚಾರಕ್ಕೆ ಪ್ರಾಶಸ್ತ್ಯ ನೀಡಿದಂತಾಗಿದೆ.

ಕೋಟಿ ದಾಟಿದ ಶ್ರಮದಾನದ ವೆಚ್ಚ!
ಅರಿಕೆಗುಡ್ಡೆ ದೇವಸ್ಥಾನದಲ್ಲಿ ನಡೆದಿರುವ ಗ್ರಾಮಸ್ಥರ ಶ್ರಮದಾನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ದೇವಾಲಯದ ಸುತ್ತಮುತ್ತ ಸುಮಾರು 200 ಕುಟುಂಬಗಳಿರಬಹುದು. ಆದರೆ, ಅವರು ಪಟ್ಟ ಶ್ರಮ ಇತರೆಲ್ಲರಿಗೂ ಮಾದರಿ. ಒಂದು ವರ್ಷದಿಂದ ರಾತ್ರಿ ಹಗಲೆನ್ನದೆ ಗ್ರಾಮಸ್ಥರು ಪೂರ್ಣ ಪ್ರಮಾಣದಲ್ಲಿ ಶ್ರಮದಾನ ಮಾಡಿದ್ದಾರೆ. ಸುತ್ತು ಗೋಪುರ, ಪಂಚಾಂಗ, ಗೋಡೆ, ಗುಡಿಗಳು, ರಸ್ತೆ, ಬೃಹತ್ ಚಪ್ಪರ, ಅಲಂಕಾರ ಸಹಿತ ಎಲ್ಲವೂ ಶ್ರಮದಾನದ ಬಲದಿಂದಲೇ ನಡೆದಿದೆ. ಈಗ ಸುತ್ತಲಿನ ಗ್ರಾಮಸ್ಥರೂ ಕೈಜೋಡಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ, ಶ್ರಮದಾನದ ಮೂಲಕ ಒಂದು ಕೋಟಿ ರೂ.ಗೂ ಅಽಕ ವೆಚ್ಚದ ಕೆಲಸಗಳು ನಡೆದಿವೆ ಎಂಬುದು ಅಚ್ಚರಿ.

ಒಂದೂವರೆ ಕೋಟಿ ರೂ. ವೆಚ್ಚ
ಗರ್ಭಗುಡಿ, ತೀರ್ಥಮಂಟಪಗಳ ಜತೆಗೆ ಸುತ್ತುಪೌಳಿ, ದೀಪಸ್ತಂಭ, ಮಹಾಬಲಿಪೀಠ, ನಾಗನಕಟ್ಟೆ, ಪರಿವಾರ ದೈವಗಳಾದ ಪಂಜುರ್ಲಿ, ಗುಳಿಗ, ಚಾಮುಂಡಿ, ಭೈರವಿ, ಕಲ್ಲುರ್ಟಿ, ನಾಗಕನ್ನಿಕೆಯ ಆರಾಧನೆ ಕಟ್ಟೆಗಳು ಮತ್ತು ಗುಡಿಗಳನ್ನು ನಿರ್ಮಿಸಲಾಗಿದೆ. ಸುತ್ತುಪೌಳಿಯಲ್ಲಿ 14 ಶಿಲಾಕಂಬಗಳನ್ನು ಇರಿಸಲಾಗಿದೆ. 14 ಅಡಿಯ ತೀರ್ಥಬಾವಿ ನಿರ್ಮಿಸಲಾಗಿದೆ. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ದೇವಾಲಯದ ಕಾಮಗಾರಿ ನಡೆದಿದೆ. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 10 ಲಕ್ಷ ರೂ. ನೆರವು ನೀಡಲಾಗಿದೆ. ಶಾಸಕ ಹರೀಶ್ ಪೂಂಜ 50 ಲಕ್ಷ ರೂ. ಅನುದಾನ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ 5 ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ.

LEAVE A REPLY

Please enter your comment!
Please enter your name here