ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರದ ಏರಿಯಾ ಡಿವೈಡ್ ಮಾಡಿ – ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ-ಗ್ರಾಮಸ್ಥರ ಆಗ್ರಹ, ಸರಕಾರಕ್ಕೆ ಬರೆಯಲು ನಿರ್ಣಯ – ಪುಣಚ ಗ್ರಾಮಸಭೆ

0

ಪುತ್ತೂರು: ಪುಣಚ ಗ್ರಾಮವು ಅತೀ ಹೆಚ್ಚು ಜನಸಂಖ್ಯೆ ಮತ್ತು ವಿಸ್ತೀರ್ಣವನ್ನು ಹೊಂದಿದ್ದು ಈ ಗ್ರಾಮದಲ್ಲಿರುವ ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರವು ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದು, ಈ ಆಸ್ಪತ್ರೆಯು ಇಂದಿಗೂ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲೇ ಬರುತ್ತಿದ್ದು ಇದರಿಂದ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಈ ಕೂಡಲೇ ಆರೋಗ್ಯ ಕೇಂದ್ರದ ಏರಿಯಾ ಡಿವೈಡ್ ಮಾಡಿಕೊಟ್ಟು ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಿಂದ ಹೊರಗೆ ತರಬೇಕು, ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಪುಣಚ ಗ್ರಾಮ ಪಂಚಾಯತ್‌ನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು. ಅದರಂತೆ ನಿರ್ಣಯವನ್ನು ದಾಖಲಿಸಿಕೊಳ್ಳಲಾಯಿತು. ಗ್ರಾಮಸಭೆಯು ಗ್ರಾಪಂ ಅಧ್ಯಕ್ಷೆ ಬೇಬಿ ಯಾನೆ ಯಶೋಧಾರವರ ಅಧ್ಯಕ್ಷತೆಯಲ್ಲಿ ಸೆ.11ರಂದು ಪುಣಚ ಪಂಚಾಯತ್‌ನ ಸುವರ್ಣ ಸೌಧ ಸಭಾಂಗಣದಲ್ಲಿ ನಡೆಯಿತು. ಬಂಟ್ವಾಳ ತಾಲೂಕು ವೈದ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈಯವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.


ವಿಷಯ ಪ್ರಸ್ತಾಪಿಸಿದ ಮಹಾಲಿಂಗ ನಾಯ್ಕರವರು, ಪುಣಚ ಗ್ರಾಮದಲ್ಲಿ ಎಸ್‌ಸಿ,ಎಸ್‌ಟಿ ಸಮುದಾಯಕ್ಕೆ ಸೇರಿದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗಾಗಲೇ ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಒಳ್ಳೆಯ ಸೇವೆ ಸಿಗುತ್ತಿದೆ. ಆದರೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು. ಇದಕ್ಕೆ ವಿಶ್ವನಾಥ ರೈ ಕೋಡಂದೂರು, ವೆಂಕಟ್ರಮಣ ಪುಣಚ ಧ್ವನಿಗೂಡಿಸಿದರು. ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ| ಅಶೋಕ್ ಕುಮಾರ್ ರೈಯವರು, ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರವು 2013 ರಲ್ಲಿ ಉದ್ಘಾಟನೆಗೊಂಡಿದ್ದು 13 ವರ್ಷಗಳು ಕಳೆದಿವೆ. ಆದರೆ ಆರೋಗ್ಯ ಕೇಂದ್ರವು ಈಗಲೂ ಅಡ್ಯನಡ್ಕ ಪ್ರಾಥಮಿಕ ಕೇಂದ್ರದ ವ್ಯಾಪ್ತಿಯಲ್ಲೇ ಇದೆ. ಆದ್ದರಿಂದ ಏರಿಯಾ ಡಿವೈಡ್ ಮಾಡದೆ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸುವುದು ಕಷ್ಟಸಾಧ್ಯ. ಈಗಾಗಲೇ ನಾನು 7 ಬಾರಿ ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು. ಈ ಬಗ್ಗೆ ಚರ್ಚೆ ನಡೆದು ಆಸ್ಪತ್ರೆಯ ಏರಿಯಾ ಡಿವೈಡ್ ಮಾಡುವಂತೆ ಕೋರಿ ಸರಕಾರಕ್ಕೆ ಪತ್ರ ಬರೆಯುವುದು ಎಂದು ನಿರ್ಣಯಿಸಲಾಯಿತು. ವಾರದ ಎಲ್ಲಾ ದಿನವೂ ಆಸ್ಪತ್ರೆಯಲ್ಲಿ ವೈದ್ಯರು ಸೇವೆಗೆ ಲಭ್ಯವಿರುವಂತೆ ಆಗಬೇಕು ಎಂದು ವೆಂಕಟ್ರಮಣ ಪುಣಚ ತಿಳಿಸಿದರು. ಇದಕ್ಕೆ ವೈದ್ಯಾಧಿಕಾರಿ ಉತ್ತರಿಸಿ ಈಗಾಗಲೇ ವೈದ್ಯರ ನಾಲ್ಕು ಹುದ್ದೆ ಖಾಲಿ ಇದೆ ಎಂದು ತಿಳಿಸಿದರು. ಈ ಬಗ್ಗೆಯೂ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.


ಪರಿಯಾಲ್ತಡ್ಕ ಪೇಟೆಗೆ ಸಂಜೆ ಪೊಲೀಸ್ ಬೀಟ್ ಬರಬೇಕು
ಪುಣಚ ಪರಿಯಾಲ್ತಡ್ಕ ಪೇಟೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಸಂಜೆ 5 ಗಂಟೆಯ ಮೇಲೆ ಪೇಟೆಯ ಪೊಲೀಸ್ ಗಸ್ತು ಬರಬೇಕು ಎಂದು ಶ್ರೀಧರ ಶೆಟ್ಟಿ ಬೈಲುಗುತ್ತು ತಿಳಿಸಿದರು. ಪೇಟೆಯ ಮಧ್ಯೆ ಕೆಲವೊಂದು ಟಿಪ್ಪರ್, ಲಾರಿಯವರು ಬೇಕಾಬಿಟ್ಟಿ ಚಾಲನೆ ಮಾಡುತ್ತಾ ಹೋಗುತ್ತಾರೆ ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು. ಸಂಕ್ರಾಂತಿ, ಅಮಾವಾಸ್ಯೆಗೆ ಗುಡ್ಡದಲ್ಲಿ ಕೋಳಿ ಅಂಕ ಆಗುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆಯ ಪರ್ಮಿಷನ್ ಇದೆಯಾ ಎಂದು ಪ್ರಶ್ನಿಸಿದರು. ಗ್ರಾಮದಲ್ಲಿ ಡ್ರಿಂಕ್ ಆಂಡ್ ಡ್ರೈವ್ ಕೂಡ ಆಗುತ್ತಿದೆ ಎಂದು ಸಂತೋಷ್ ಆಜೇರು ತಿಳಿಸಿದರು. ಈ ಬಗ್ಗೆ ಉತ್ತರಿಸಿದ ಪೊಲೀಸ್ ಅಧಿಕಾರಿ ಹರೀಶ್‌ರವರು, ಕೋಳಿ ಅಂಕಕ್ಕೆ ಇಲಾಖೆಯಿಂದ ಯಾವುದೇ ಪರ್ಮಿಷನ್ ಕೊಡುವುದಿಲ್ಲ ಇನ್ನು ಪರಿಯಾಲ್ತಡ್ಕ ಪೇಟೆಗೆ ಸಂಜೆ ವೇಳೆ ಪೊಲೀಸ್ ವ್ಯವಸ್ಥೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.


ಕಾಡುಕೋಣಗಳ ಹಾವಳಿ ಇದೆ
ಗ್ರಾಮದ ನಾಟೆಕಲ್ಲು ಪ್ರದೇಶಗಳಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದೆ. ಮಧ್ಯಾಹ್ನದ ಹೊತ್ತಲ್ಲೆ ಕಾಡುಕೋಣಗಳು ರಸ್ತೆಗೆ ಬರುತ್ತಿವೆ ಈ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಿರಾಜ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖಾಧಿಕಾರಿ ಕಾಡುಕೋಣಗಳು ಹಿಂಡು ಹಿಂಡಾಗಿ ಇರುವುದು ಗಮನಕ್ಕೆ ಬಂದಿದೆ. ಇವುಗಳನ್ನು ಓಡಿಸಲು ಈಗಾಗಲೇ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.


ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರಿಂದಲೇ ಸರಿಪಡಿಸಿ
ಮಲೆತ್ತಡ್ಕ ಕೊಪ್ಪಳ ರಸ್ತೆಯಲ್ಲಿ ಹಾಕಿದ ಮೋರಿ ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಸುಮಾರು 70 ಸಾವಿರ ರೂಪಾಯಿ ಬೊಲ್ಲಕ್ಕೆ ಹೋಗಿದೆ ಆದ್ದರಿಂದ ಕಳಪೆ ಕಾಮಗಾರಿ ಅಂತ ಕಂಡು ಬಂದರೆ ಆ ಕಾಮಗಾರಿಯನ್ನು ಯಾರು ವಹಿಸಿಕೊಂಡು ಮಾಡಿದ್ದಾರೋ ಆ ಗುತ್ತಿಗೆದಾರರಿಂದಲೇ ಸರಿ ಪಡಿಸುವ ಕೆಲಸ ಆಗಬೇಕು ಎಂದು ವೆಂಕಟ್ರಮಣ ಪುಣಚ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಾಧ್ಯಕ್ಷ ಮಹೇಶ್ ಶೆಟ್ಟಿಯವರು ಈ ಮೋರಿ ಹಾಕಿ ಸುಮಾರು 4 ವರ್ಷ ಕಳೆದಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.


ಶಾಸಕರ ಅನುದಾನ ಗ್ರಾಮಕ್ಕೆ ಕಡಿಮೆಯಾಗಿದೆ ಯಾಕೆ?
ಶಾಸಕರ ಅನುದಾನ ಪುಣಚ ಗ್ರಾಮಕ್ಕೆ ಬಹಳ ಕಡಿಮೆಯಾಗಿರುವಂತೆ ಕಾಣುತ್ತಿದೆ. ಪಂಚಾಯತ್‌ನಿಂದ ಶಾಸಕರಿಗೆ ಯಾಕೆ ಅನುದಾನದ ಬೇಡಿಕೆ ಇಟ್ಟಿಲ್ಲ, ಸಂಸದ, ಶಾಸಕರಿಂದ ಅನುದಾನ ಕೇಳಲು ನಮ್ಮಿಂದ ಯಾಕೆ ಆಗುತ್ತಿಲ್ಲ ಎಂದು ಮಹಾಲಿಂಗ ನಾಯ್ಕ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸದಸ್ಯ ಅಶೋಕ್ ಕುಮಾರ್‌ರವರು ಈಗಾಗಲೇ ಸಾಮಾನ್ಯ ಸಭೆಯಲ್ಲಿ ಕೆಲವೊಂದು ನಿರ್ಣಯ ಮಾಡಿ ಅನುದಾನಕ್ಕೆ ಶಾಸಕರಿಗೆ, ಸಂಸದರಿಗೆ ಕಳಿಸಿದ್ದೇವೆ. ಒಂದು ಕಡೆ ಕಾಮಗಾರಿ ನಡದರೆ ಶಾಸಕರು ನಮ್ಮ ಗಮನಕ್ಕೆ ತರುತ್ತಿಲ್ಲ ಎಂದು ಹೇಳಿದರು. ಗ್ರಾಮದಲ್ಲಿರುವ ಮೊಬೈಲ್ ಟವರ್‌ಗಳ ಬಾಡಿಗೆ ಪಂಚಾಯತ್‌ಗೆ ಯಾಕೆ ಬರುತ್ತಿಲ್ಲ ಎಂದು ವೆಂಕಟ್ರಮಣ ಪ್ರಶ್ನಿಸಿದರು. ಇದಕ್ಕೆ ಪಿಡಿಒ ರವಿಯವರು ಉತ್ತರಿಸಿ ಈಗಾಗಲೇ ಟೆಲಿಕಾಂ ಇಲಾಖೆಯವರು ಬಾಡಿಗೆ ವಿಚಾರದಲ್ಲಿ ಕೋರ್ಟ್‌ನಲ್ಲಿ ದಾವೆ ದೂಡಿರುವುದರಿಂದ ಬಾಡಿಗೆ ಬರುತ್ತಿಲ್ಲ ಎಂದು ತಿಳಿಸಿದರು. ಕಮ್ಮಾಜೆ, ಗೌರಿಮೂಲೆ, ಪೊಯ್ಯಮೂಲೆ ರಸ್ತೆಗಳಿಗೆ ದುರಸ್ತಿ ಅನುದಾನ ಬಂದಿಲ್ಲ ಯಾಕೆ ಎಂದು ಮಹಾಲಿಂಗ ನಾಯ್ಕ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತೀರ್ಥರಾಮ ನಾಯಕ್‌ರವರು ಈ ರಸ್ತೆಗಳಿಗೆ ಮಾಜಿ ಶಾಸಕರುಗಳಾದ ಸಂಜೀವ ಮಠಂದೂರು ಹಾಗೇ ಶಕುಂತಳಾ ಶೆಟ್ಟಿಯವರುಗಳ ಅವಧಿಯಲ್ಲಿ ಅನುದಾನ ಬಂದಿದೆ ಎಂದು ತಿಳಿಸಿದರು.


ರಸ್ತೆ ಬದಿಯಲ್ಲೇ ಗಿಡ ನಾಟಿ…!
ರಸ್ತೆ ಬದಿಯಲ್ಲೇ 2 ಮೀಟರ್‌ಗೆ ಒಂದರಂತೆ ಗಿಡ ನಾಟಿ ಮಾಡಲಾಗಿದೆ. ಈ ಗಿಡಗಳು ಮುಂದಕ್ಕೆ ಬೆಳೆದು ದೊಡ್ಡದಾಗಿ ಮತ್ತೆ ರಸ್ತೆಗೆ ಹಾಗೂ ವಿದ್ಯುತ್ ತಂತಿಗಳಿಗೆ ಅಪಾಯ ತರುತ್ತವೆ ಮತ್ತೆ ಈ ಮರಗಳನ್ನು ತೆರವು ಮಾಡಿ ಎಂದು ಅರಣ್ಯ ಇಲಾಖೆಗೆ ಸಾರ್ವಜನಿಕರು ಪತ್ರ ಬರೆಯಬೇಕಾದ ಸ್ಥಿತಿ ಬರುತ್ತದೆ ಆದ್ದರಿಂದ ಈ ರೀತಿ ಗಿಡ ನಾಟಿ ಹಣ ಪೋಲು ಮಾಡುವುದು ಎಷ್ಟು ಸರಿ? ಎಂದು ವೆಂಕಟ್ರಮಣ ಪುಣಚ ಪ್ರಶ್ನಿಸಿದರು. ಇದಕ್ಕೆ ಅರಣ್ಯ ಇಲಾಖಾಧಿಕಾರಿ ಉತ್ತರಿಸಿ ಪರ್ಲಡ್ಕ ಬುಳೇರಿಕಟ್ಟೆ ರಸ್ತೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಗಿಡ ನಾಟಿ ಮಾಡಿದ್ದಾರೆ ಎಂದು ತಿಳಿಸಿದರು.


ಗ್ರಾಮೀಣ ಅಭ್ಯರ್ಥಿ, ಕನ್ನಡ ಮಾಧ್ಯಮ ಸರ್ಟೀಫಿಕೇಟ್ ಜೀವಿತಾವಧಿ ಮಾಡಿ
ಯಾವುದಾದರೂ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕಾದರೆ ಅಥವಾ ಇತರ ಸರಕಾರಿ ಕೆಲಸಗಳಿಗೆ ಅಭ್ಯರ್ಥಿಯು ಕಲಿತ ಕನ್ನಡ ಮಾಧ್ಯಮ ಸರ್ಟೀಫಿಕೇಟ್ ಹಾಗೂ ಗ್ರಾಮೀಣ ಅಭ್ಯರ್ಥಿ ಸರ್ಟೀಫಿಕೇಟ್‌ಗಳನ್ನು ಕೇಳಲಾಗುತ್ತದೆ. ಆದರೆ ಅಭ್ಯರ್ಥಿಯು ಪ್ರತಿ ವರ್ಷ ಅರ್ಜಿ ಸಲ್ಲಿಸುವಾಗಲು ಹೊಸತಾಗಿಯೇ ಸರ್ಟೀಫಿಕೇಟ್‌ಗಳನ್ನು ಸಲ್ಲಿಸಬೇಕಾಗುತ್ತದೆ. ಇದರಿಂದ ಆತನಿಗೆ ಶಾಲೆಗಳಿಗೆ ಅಲೆಯುವುದೇ ಕೆಲಸವಾಗುತ್ತದೆ ಒಂದು ಬಾರಿ ಸರ್ಟೀಫಿಕೇಟ್ ಪಡೆದುಕೊಂಡರೆ ಅದು ಶಾಶ್ವತವಲ್ಲವೆ ಆತನ ಮಾಧ್ಯಮ ಬದಲಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಸಂತೋಷ್ ಆಜೇರುರವರು ಈ ಸರ್ಟೀಫಿಕೇಟ್‌ಗಳಿಗೆ ಜೀವಿತಾವಧಿ ಮಾಡಬೇಕು ಎಂದು ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲೆಗಳಿಗೆ ಭೇಟಿ ಕೊಡುತ್ತಿಲ್ಲ ಎಂದು ವೆಂಕಟ್ರಮಣ ಪುಣಚ ಆರೋಪಿಸಿದರು.


ಹೆಣ್ಣು ನಾಯಿ ಮರಿಗಳನ್ನು ಬೀದಿಗೆ ಬಿಡಬೇಡಿ
ಬೀದಿ ನಾಯಿಗಳ ಉಪಟಳ ಜಾಸ್ತಿಯಾಗುತ್ತಿರುವ ಬಗ್ಗೆ ಸಭೆಯಿಂದ ದೂರು ಕೇಳಿಬಂತು ಇದಕ್ಕೆ ಉತ್ತರಿಸಿದ ಪಶು ವೈದ್ಯಾಧಿಕಾರಿ ಬೀದಿ ನಾಯಿಗಳು ಜಾಸ್ತಿಯಾಗಲು ಮುಖ್ಯ ಕಾರಣ ಮನುಷ್ಯರೇ ಆಗಿದ್ದಾರೆ. ಮನೆಯಲ್ಲಿ ಸಾಕಿದ ನಾಯಿಗಳು ಹೆಣ್ಣು ಮರಿ ಹಾಕಿದರೆ ಅದನ್ನು ತಂದು ಬೀದಿಗೆ ಬಿಡುತ್ತೇವೆ ಇದೇ ಮರಿಗಳು ಮುಂದೆ ಬೆಳೆದು ದೊಡ್ಡದಾಗಿ ಬೀದಿ ನಾಯಿಗಳ ಸಂತತಿ ಜಾಸ್ತಿಯಾಗಲು ಕಾರಣವಾಗುತ್ತದೆ ಆದ್ದರಿಂದ ದಯವಿಟ್ಟು ಹೆಣ್ಣು ನಾಯಿ ಮರಿಗಳನ್ನು ಬೀದಿಗೆ ತಂದು ಬಿಡಬೇಡಿ ಎಂದು ವಿನಂತಿಸಿಕೊಂಡರು.


ಜನರೇಟರ್ ತರಿಸಿದ್ದು ಯಾರು…?!
ಆರೋಗ್ಯ ಇಲಾಖೆಯ ಮಾಹಿತಿ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ವೆಂಕಟ್ರಮಣ ಪುಣಚರವರು ಎದ್ದುನಿಂತು ಒಂದು ಕಾಲದಲ್ಲಿ ವಿಟ್ಲ ಆರೋಗ್ಯ ಕೇಂದ್ರದಲ್ಲಿ ಜನರೇಟರ್ ವ್ಯವಸ್ಥೆ ರಾತ್ರಿ ವೇಳೆ ಕ್ಯಾಂಡಲ್ ಹಿಡಿದು ವೈದ್ಯಕೀಯ ಸೇವೆ ಕೊಡಬೇಕಾದ ಸಂದರ್ಭದ ಇತ್ತು ಈ ಸಮಯದಲ್ಲಿ ನಿರಂತರ ಹೋರಾಟದಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿಯ ಜನರೇಟರ್ ವ್ಯವಸ್ಥೆ ಮಾಡಿಕೊಟ್ಟಿರುವುದಾಗಿ ತಿಳಿಸಿದರು. ಇದರಿಂದ ಅಸಮಾಧಾನಗೊಂಡ ತಾಲೂಕು ವೈದ್ಯಾಧಿಕಾರಿ ಡಾ|ಅಶೋಕ್ ಕುಮಾರ್ ರೈಯವರು ವಿಟ್ಲ ಆಸ್ಪತ್ರೆಗೆ ಸುಮಾರು ಏಳೂವರೆ ಲಕ್ಷ ರೂಪಾಯಿಯ ಜನರೇಟರ್ ತರಿಸಿದ್ದು ನಾನು ನೀವ್ಯಾಕೆ ಸುಳ್ಳು ಮಾಹಿತಿ ಕೊಡುತ್ತೀರಿ ಎಂದು ಪ್ರಶ್ನಿಸಿದರು. ಈ ಬಗ್ಗೆ ಕೆಲಹೊತ್ತು ನಾನು, ನಾನು ಎಂದು ಚರ್ಚೆ ನಡೆಯಿತು. ನಾನು ಜನರೇಟರ್ ತರಿಸಿದ್ದಕ್ಕೆ ದಾಖಲೆ ತೋರಿಸುತ್ತೇನೆ ಎಂದು ವೆಂಕಟ್ರಮಣ ಪುಣಚ ತಿಳಿಸಿದರು ಇದಕ್ಕೆ ವೈದ್ಯಾಧಿಕಾರಿಯವರು ಕೂಡ ನಮ್ಮಲ್ಲೂ ದಾಖಲೆ ಇದೆ ಎಂದು ತಿಳಿಸಿದರು.


ಸಂಜೆ ತನಕ ನಡೆದ ಗ್ರಾಮಸಭೆ
ಬೆಳಿಗ್ಗೆ 11 ಗಂಟೆ ಸುಮಾರಿಗೆ ಆರಂಭವಾದ ಗ್ರಾಮಸಭೆ ಸಂಜೆ 3.45 ಗಂಟೆಯ ತನಕ ನಡೆಯಿತು. ಮಧ್ಯಾಹ್ನ ಊಟವನ್ನು ಮಾಡದೆ ಒಂದಷ್ಟು ಮಂದಿ ಚರ್ಚೆಯಲ್ಲೇ ತೊಡಗಿರುವುದು ಕಂಡು ಬಂತು. ವೆಂಕಟ್ರಮಣ ಪುಣಚ, ಸಂತೋಷ್ ಆಜೇರು, ಅಲ್ಬಟ್ ಡಿ’ಸೋಜಾ, ಮಹಾಲಿಂಗ ನಾಯ್ಕ್, ಈಶ್ವರ ನಾಯ್ಕ್, ಸಿರಿಲ್ ಸೆರಾವೊ, ಲಕ್ಷ್ಮಣ್ ಮಡಿವಾಳ್, ವಸಂತ ನಾಯ್ಕ್, ಕಿರಣ್, ಪುರುಷೋತ್ತಮ, ಉಮೇಶ್ ನಾಯ್ಕ್, ಸಿರಾಜ್ ಸೇರಿದಂತೆ ಹಲವು ಮಂದಿ ಗ್ರಾಮದ ಅಭಿವೃದ್ಧಿಯ ಬಗ್ಗೆ ವಿವಿಧ ರೀತಿಯ ಸಲಹೆ ಸೂಚನೆಗಳನ್ನು ನೀಡುತ್ತಾ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.


ಗ್ರಂಥಾಲಯ ಮೇಲ್ವಿಚಾರಕಿ ಜಯಲಕ್ಷ್ಮೀ ನಾಡಗೀತೆ ಹಾಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಸ್ವಾಗತಿಸಿ, ನಿರ್ಣಯಗಳನ್ನು ದಾಖಲಿಸಿಕೊಂಡು ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೃಜನ್, ಗ್ರಾಪಂ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಸದಸ್ಯರುಗಳಾದ ಲಲಿತಾ, ಗಿರಿಜಾ, ಪ್ರತಿಭಾ ಜಗನ್ನಾಥ ಗೌಡ, ಗಂಗಮ್ಮ, ರವಿ, ಹರೀಶ್ ಪೂಜಾರಿ, ಸರೋಜಿನಿ, ಸುಜಾತ, ಉದಯ ದಂಬೆ, ರೇಖಾ, ತೀರ್ಥಾರಾಮ, ಅಶೋಕ್ ಕುಮಾರ್, ಆನಂದ ನಾಯ್ಕ, ವಾಣಿಶ್ರೀ, ರಾಜೇಶ್ ನಾಯ್ಕ, ಶಾರದಾರವರುಗಳು ಉಪಸ್ಥಿತರಿದ್ದರು. ದ್ವಿತೀಯ ದರ್ಜೆ ಲೆಕ್ಕಸಹಾಯಕಿ ಪಾರ್ವತಿಯವರು ವರದಿ ಮಂಡಿಸಿದರು. ಸಿಬ್ಬಂದಿಗಳಾದ ಕ್ಲರ್ಕ್ ಮಮತಾ ಕಜೆಮಾರ್, ಬಿಲ್ ಕಲೆಕ್ಟರ್ ಸತ್ಯಪ್ರಕಾಶ್, ಸ್ವಚ್ಛತಾಗಾರ ಉಸ್ಮಾನ್, ರೇಷ್ಮಾ, ಶಿವಪ್ರಸಾದ್, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಸಹಕರಿಸಿದ್ದರು.



ಅಪ್ರಾಪ್ತರು ವಾಹನ ಚಾಲನೆ ಮಾಡದರೆ ರೂ.25 ಸಾವಿರ ದಂಡ….!
18 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಬೈಕ್, ಸ್ಕೂಟರ್ ಚಾಲನೆ ಮಾಡಲು ಕೊಡಬೇಡಿ. ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಂಡು ಬಂದರೆ 25 ಸಾವಿರ ರೂಪಾಯಿಗಳ ತನಕ ದಂಡ ವಿಧಿಸಲಾಗುತ್ತದೆ. ಮಕ್ಕಳಿಗೆ ವಾಹನ ಕೊಟ್ಟ ಪೋಷಕರ ಮೇಲೆ ಪ್ರಕರಣ ದಾಖಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಹರೀಶ್ ಮಾಹಿತಿ ನೀಡಿದರು. ಪುಣಚ, ಪರಿಯಾಲ್ತಡ್ಕ ಪೇಟೆಯಲ್ಲಿ ಸಂಜೆ ವೇಳೆ ಅಪ್ರಾಪ್ತರು ಸ್ಕೂಟರ್ ಓಡಿಸುತ್ತಿದ್ದಾರೆ ಎಂಬ ದೂರು ಸಭೆಯಿಂದ ಕೇಳಿ ಬಂತು.



ಪೊಲೀಸರಿಗಾಗಿ ಹೆಲ್ಮೆಟ್ ಹಾಕಬೇಡಿ…?
ಹೆಚ್ಚಿನವರು ಪೊಲೀಸರನ್ನು ಕಂಡ ಕೂಡಲೇ ಹೆಲ್ಮೆಟ್ ಹಾಕ್ತಾರೆ ದಯವಿಟ್ಟು ಪೊಲೀಸರಿಗಾಗಿ ಹೆಲ್ಮೆಟ್ ಹಾಕಬೇಡಿ, ತಮ್ಮ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ, ತಲೆಯ ರಕ್ಷಣೆ ಅತೀ ಅಗತ್ಯ ಆದ್ದರಿಂದ ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಧರಿಸಿ ಎಂದು ಪೊಲೀಸ್ ಅಧಿಕಾರಿ ಹರೀಶ್ ಸಲಹೆ ನೀಡಿದರು. ಹೆಲ್ಮೆಟ್ ಹಾಕಿದ್ದರೂ ರಸ್ತೆ ಗುಂಡಿಗೆ ಬಿದ್ದು ಜನ ಸಾಯ್ತಾರೆ ಇದಕ್ಕೆ ಯಾರು ಹೊಣೆ ಎಂದು ಶ್ರೀಧರ ಶೆಟ್ಟಿ ಪ್ರಶ್ನಿಸಿದರು. ಈ ರೀತಿಯ ಸಾವು ಸಂಭವಿಸಿದರೆ ರಸ್ತೆ ಹೆದ್ದಾರಿ ಪ್ರಾಧಿಕಾರವನ್ನೇ ಸೇರಿಸಿ ಕೇಸು ಹಾಕುವ ಕಾನೂನು ಇದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಭಿಕ್ಷುಕರ ಕರ ಈ ಹೆಸರನ್ನು ಬದಲಾಯಿಸಿ….?
ಪ್ರತಿಯೊಂದು ಗ್ರಾಮಸಭೆಯ ವರದಿಯಲ್ಲೂ ಭಿಕ್ಷುಕರ ಎಂದು ನಮೂದಿಸಿ ಸರಕಾರಕ್ಕೆ ಇಂತಿಷ್ಟು ಹಣ ಪಾವತಿಸಬೇಕಾಗುತ್ತದೆ. ನಮ್ಮ ಗ್ರಾಮದಲ್ಲಿ ಭಿಕ್ಷುಕರು ಇದ್ದಾರೆಯೇ? ಇದು ಯಾವ ರೀತಿಯ ಕರ ಎಂದು ಅರ್ಥವಾಗುತ್ತಿಲ್ಲ. ಆದ್ದರಿಂದ ಇದರ ಹೆಸರನ್ನು ಬದಲಾಯಿಸಬೇಕು ಈ ಬಗ್ಗೆ ಪಂಚಾಯತ್‌ರಾಜ್ ಇಲಾಖೆ ಗಮನಿಸಬೇಕು ಎಂದು ವಿಶ್ವನಾಥ ರೈ ಕೋಡಂದೂರು ತಿಳಿಸಿದರು. ವಿಶ್ವನಾಥ ರೈಯವರು ತುಳು ಭಾಷೆಯ ಅಪ್ಪಟ ಅಭಿಮಾನಿಯಾಗಿದ್ದು ತುಳು ಭಾಷೆ ಎಂಟನೆ ಪರಿಚ್ಛೇಧಕ್ಕೆ ಸೇರಬೇಕು ಎಂಬ ನಿಟ್ಟಿನಲ್ಲಿ ಈ ಹಿಂದಿನ ಗ್ರಾಮಸಭೆಯಲ್ಲಿ ಆಗ್ರಹಿಸಿದ್ದರು ಇದಲ್ಲದೆ ಪ್ರತಿ ಗ್ರಾಮಸಭೆಯಲ್ಲೂ ತುಳುವಿನಲ್ಲೇ ಮಾತನಾಡುವ ಮೂಲಕ ಗಮನ ಸೆಳೆದಿದ್ದರು.

‘ 5 ವರ್ಷಗಳ ಅವಧಿಯಲ್ಲಿ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ. ಗ್ರಾಮದ ಅಭಿವೃದ್ದಿಯಲ್ಲಿ ಗ್ರಾಮಸ್ಥರ ಸಹಕಾರ ಬಹಳ ಅಗತ್ಯ. ತಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಮುಂದೆಯೂ ಸಹಕಾರವನ್ನು ಬಯಸುತ್ತೇವೆ.’
ಬೇಬಿ ಯಾನೆ ಯಾಶೋಧಾ,
ಅಧ್ಯಕ್ಷರು ಪುಣಚ ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here