ಮಾ. 23,24: ನೂತನ ಭಜನಾ ಮಂದಿರ ಲೋಕಾರ್ಪಣೆ, ಮಹಾಚಂಡಿಕಾಯಾಗ
ವಿಟ್ಲ: ಬಂಟ್ವಾಳ ತಾಲೂಕಿನ ಅಳಕೆಮಜಲು ಅಶೋಕನಗರ ಎಂಬಲ್ಲಿ ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥಸ್ವಾಮೀಜಿ ರವರ ದಿವ್ಯ ಹಸ್ತದಿಂದ 1983ನೇ ಇಸವಿಯಲ್ಲಿ ಸ್ಥಾಪನೆಯಾದ ಶ್ರೀ ಶಾರದಾಂಭ ಭಜನಾ ಮಂದಿರಕ್ಕೆ ಹೊಸರೂಪ ಬರಲಿದ್ದು, ಮಂದಿರದ ನೂತನ ಕಟ್ಟಡವು ನಿರ್ಮಾಣ ಹಂತದಲ್ಲಿದೆ. ಮಾರ್ಚ್ 23, 24 ರಂದು ಮಹಾಚಂಡಿಕಾಯಾಗದ ಜೊತೆಗೂಡಿ ನೂತನ ಮಂದಿರದ ಲೋಕಾರ್ಪಣಾ ಕಾರ್ಯಕ್ರಮಗಳು ನಡೆಯಲಿವೆ.
ಪ್ರತೀ ವರ್ಷ ಮಂದಿರದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಗ್ರಾಮ ಭಜನೆ, ವಾರ್ಷಿಕೋತ್ಸವ, ಮಹಿಳಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆ, ಪ್ರತಿ ಮಂಗಳವಾರ ವಾರದ ಭಜನೆ, ಧನು ಮಾಸದ ಸಂದರ್ಭದಲ್ಲಿ ಪ್ರತಿ ಶುಕ್ರವಾರ ಬೆಳಿಗ್ಗೆ ಧನುಪೂಜೆ, ನವರಾತ್ರಿ ಉತ್ಸವದ 9 ದಿವಸಗಳಲ್ಲಿ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಧಾರ್ಮಿಕ ಕಾರ್ಯಕ್ರಮ, ನವರಾತ್ರಿ ಪೂಜೆಯನ್ನು ಮತ್ತು ಸಮಾಜದಲ್ಲಿರುವ ಅಸಹಾಯಕರಿಗೆ ಸಹಾಯಧನ ನೀಡುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ.
ಉಚಿತ ಭಜನಾ ತರಬೇತಿ: ಹಿಂದೂ ಶ್ರದ್ದಾ ಕೇಂದ್ರವಾದ ಭಜನಾ ಮಂದಿರದ ವತಿಯಿಂದ ಭಜನೆಯನ್ನು ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ಭಜನೆಯನ್ನು ಉಳಿಸುವ ನಿಟ್ಟಿನಲ್ಲಿ ಉಚಿತವಾಗಿ ಭಜನಾ ತರಬೇತಿಯನ್ನು ನೀಡುವ ಮಹತ್ತರ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ.
ನೂತನ ಸಭಾಭವನ: ಈಗಿನ ಭಜನಾ ಮಂದಿರವು ಊರವರ ಸಹಕಾರದಿಂದ ನಿರ್ಮಾಣವಾಗಿದೆ. ಈಗಿನ ಮಂದಿರ ಸಭಾಂಗಣದ ಒಳಗೆ ಗರ್ಭಗುಡಿ ಇರುವ ಕಾರಣ ಮದುವೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲು ಸ್ಥಳಾವಕಾಶದ ತುಂಬಾ ಕೊರತೆ ಕಾಣುತ್ತಿತ್ತು. ಇದರಿಂದಾಗಿ ಸ್ಥಳೀಯರ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಮಂದಿರದ ಸಭಾಂಗಣ, ಭೋಜನಾ ಶಾಲೆ ಮತ್ತು ಸುಸಜ್ಜಿತವಾದ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಮಾಡುವುದೆಂದೂ ತೀರ್ಮಾನಿಸಿಕೊಂಡು ಕಾರ್ಯತತ್ಪರರಾಗಿ ವರುಷಗಳ ಹಿಂದೆ ನೂತನ ಸಭಾಭವನ ನಿರ್ಮಿಸಿ ಲೋಕಾರ್ಪಣೆಗೊಳಿಸಲಾಗಿದೆ.
ಸಭಾಭವನದ ವ್ಯವಸ್ಥೆ:
1000 ಆಸನ ಸಾಮರ್ಥ್ಯ, ವಿಶಾಲವಾದ ಪಾಕಶಾಲೆ ಊಟಕ್ಕೆ ಪ್ರತ್ಯೇಕ ಕೊಠಡಿ, ವಿಶಾಲವಾದ ಪಾರ್ಕಿಂಗ್, ಗಾಳಿ ಬೆಳಕಿನ ವ್ಯವಸ್ಥೆ, ಪಾತ್ರೆ ಹಾಗೂ ಆಸನದ ವ್ಯವಸ್ಥೆ ಸೇರಿದಂತೆ ಈಗಿನ ಕಾಲಘಟ್ಟಕ್ಕೆ ತಕ್ಕುದಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಪ್ರಸ್ತುತ ಸಭಾಭವನವು ಸ್ಥಳೀಯ ಮದುವೆ, ಇನ್ನಿತರ ಸಮಾರಂಭಗಳಿಗೆ ಬಾಡಿಗೆ ಸಭಾಂಗಣವಾಗಿಯೂ ಸಾರ್ವಜನಿಕವಾಗಿ ಉಪಯೋಗವಾಗುತ್ತಿದೆ.
ಭಜನಾ ಮಂದಿರದ ನೂತನ ಕೊಠಡಿ
ಶ್ರೀ ಶಾರದಾಂಬಾ ಭಜನಾ ಮಂದಿರವು 47 ವರುಷಗಳ ಹಿಂದೆ ಮುಳಿಹುಲ್ಲಿನ ಮಾಡು ಹಾಕಿದ್ದ ಮಂದಿರದಲ್ಲಿ ಆರಂಭವಾಯಿತು. ಕಾಲಕ್ರಮೇಣ ಮಂದಿರದ ಬಳಿ ಸಭಾಭವನ ನಿರ್ಮಿಸಲಾಯಿತು. ಸ್ಥಳಾನುಕೂಲತೆಗಾಗಿ ಸಭಾಂಗಣದ ಒಳಗೆಯೇ ಭಜನಾಮಂದಿರವನ್ನೂ ತರಲಾಯಿತು. ಮಂದಿರದಲ್ಲಿ ದೇವರ ಪೂಜೆ, ಆರಾಧನೆ ನಡೆಯುವ ಹಿನ್ನೆಲೆಯಲ್ಲಿ ಅದರ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸಭಾಂಗಣದ ಪಕ್ಕದಲ್ಲಿ ಭಜನಾ ಮಂದಿರಕ್ಕಾಗಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ನೂತನ ಕಟ್ಟಡವು ಮಾ. ೨೩, ೨೪ರಂದು ಲೋಕಾರ್ಪಣೆಗೊಳ್ಳಲಿದೆ. ಊರ ಪರವೂರ ಭಕ್ತಾದಿಗಳ ಸಹಕಾರದಲ್ಲಿ ಸುಮಾರು 1500 ಚದರ ಅಡಿ ವಿಸ್ತೀರ್ಣದಲ್ಲಿ ಸುಂದರ ಭಜನಾ ಮಂದಿರದ ಕೊಠಡಿ ನಿರ್ಮಾಣವಾಗಿದ್ದು, ನೂತನ ಕೊಠಡಿಯಲ್ಲಿ ಭಜನೆ ಸೇರಿದಂತೆ ದೇವರ ಆರಾಧನೆಗಳು ನಡೆಯಲಿವೆ.