ವಿಟ್ಲ: ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ರೈಲ್ವೇ ಬ್ರಿಡ್ಜ್ ನ ಸೇಫ್ ಗಾರ್ಡ್ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಫೆ.20ರಂದು ಕಬಕ ಸಮೀಪದ ಮಿತ್ತೂರು ಎಂಬಲ್ಲಿ ನಡೆದಿದೆ.
ಘನ ವಾಹನಗಳು ಸೇತುವೆಗೆ ಅಪ್ಪಳಿಸಿದಂತೆ ಮುಂಜಾಗರೂಕತೆಗಾಗಿ ಈ ಕಂಬವನ್ನು ಅಳವಡಿಸಲಾಗುತ್ತದೆ. ಈ ಸೇಫ್ ಗಾರ್ಡ್ ಗೆ ಕಂಟೈನರ್ ಲಾರಿಯೊಂದು ಢಿಕ್ಕಿ ಹೊಡೆದಿದೆ. ಇದರಿಂದ ಕಂಬ ಹೆದ್ದಾರಿಗೆ ಅಡ್ಡವಾಗಿ ಬಿದ್ದಿದೆ. ಘಟನೆಯಿಂದಾಗಿ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮಿತ್ತೂರು ರೈಲ್ವೇ ಸೇತುವೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಿಂದ ರಸ್ತೆಗೆ ಅಡ್ಡವಾಗಿ ಬಿದ್ದ ಕಂಬವನ್ನು ತೆರವುಗೊಳಿಸಿದ್ದಾರೆ. ಬಳಿಕ ವಾಹನ ಸಂಚಾರ ಆರಂಭಗೊಂಡಿತು.