ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಮರಕ್ಕ ಶ್ರೀ ವ್ಯಾಘ್ರಚಾಮುಂಡಿ ಮತ್ತು ವಾಸುಕೀ ನಾಗಬ್ರಹ್ಮ, ರಕ್ತೇಶ್ವರಿ, ರಾಜಗುಳಿಗ ಸಾನಿಧ್ಯದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ನೇಮೋತ್ಸವವು ಫೆ.24ರಂದು ನಡೆಯಲಿದೆ.
ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹವನ, ಕಲಶಪೂಜೆ, ಶ್ರೀ ವಾಸುಕಿ ನಾಗಬ್ರಹ್ಮ ದೇವರಿಗೆ ಪವಮಾನ ಅಭಿಷೇಕ, ನಾಗತಂಬಿಲ ಸೇವೆ, ವ್ಯಾಘ್ರ ಚಾಮುಂಡಿ, ರಕ್ತೇಶ್ವರಿ, ರಾಜಗುಳಿಗ ದೈವಗಳಿಗೆ ಕಲಶಾಭಿಷೇಕ, ತಂಬಿಲ ಸೇವೆ ಶ್ರೀ ಸತ್ಯನಾರಾಯಣ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ದೈವಗಳ ಭಂಡಾರ ತೆಗೆದು, ಪಲ್ಲಕ್ಕಿ ಮೆರವಣಿಗೆಯೊಂದಿಗೆ ಬೂಡಿಯಾರು ಹೊಸಮನೆ ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ದೇವಿಯ ಭೇಟಿ ನಂತರ ತೂಟೆ ಬೆಳಕಿನಲ್ಲಿ ದೈವಗಳ ಭಂಡಾರವು ದೈವಸ್ಥಾನಕ್ಕೆ ಹಿಂತಿರುಗಲಿದೆ. ರಾತ್ರಿ ದುರ್ಗಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆದ ಬಳಿಕ ವ್ಯಾಘ್ರಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.