ನೆಲ್ಯಾಡಿ: ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಆಗಬೇಕಾಗಿದೆ ಕಾಯಕಲ್ಪ – ಗೋಡೆ ಬಿರುಕು, ಉದುರುತ್ತಿವೆ ಪಕ್ಕಾಸು, ಹಂಚು-ಜೀವ ಭಯದಲ್ಲೇ ಕಾರ್ಯನಿರ್ವಹಣೆ

0

ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: 50 ವರ್ಷದಷ್ಟು ಹಳೆಯ ಕಟ್ಟಡದಲ್ಲಿ ಇರುವ ನೆಲ್ಯಾಡಿ ಗ್ರಾಮ ಆಡಳಿತ ಅಧಿಕಾರಿ ಕಚೇರಿಯ ಗೋಡೆ ಬಿರುಕು ಬಿಟ್ಟಿದ್ದು ಒಂದೊಂದೇ ಪಕ್ಕಾಸು, ಹಂಚು ಕುಸಿದು ಬೀಳಲು ಆರಂಭಗೊಂಡಿದೆ. ನಾದುರಸ್ತಿಯಲ್ಲಿರುವ ಈ ಕಟ್ಟಡದೊಳಗೆ ಜೀವ ಭಯದಲ್ಲಿ ಅಧಿಕಾರಿ, ಸಿಬ್ಬಂದಿಗಳು ಕೆಲಸ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದ್ದು ಗ್ರಾಮಸ್ಥರಲ್ಲೂ ಆತಂಕ ಉಂಟಾಗಿದೆ.


ನೆಲ್ಯಾಡಿ ಕಡಬ ತಾಲೂಕಿನ ಪ್ರಮುಖ ಪಟ್ಟಣ. ನೆಲ್ಯಾಡಿಯನ್ನು ಕಡಬ ತಾಲೂಕು ಮಾಡಬೇಕೆಂಬ ಕೂಗು ಈ ಹಿಂದೆ ಪ್ರಬಲವಾಗಿ ಕೇಳಿ ಬಂದಿತ್ತು. ನೆಲ್ಯಾಡಿ ತಾಲೂಕಿಗಾಗಿ ಹೋರಾಟವೂ ನಡೆದಿತ್ತು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ನೆಲ್ಯಾಡಿ ಗ್ರಾಮ ವಿಶಾಲವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಇಕ್ಕೆಲಗಳಲ್ಲೂ ವಿಶಾಲವಾಗಿ ಹರಡಿಕೊಂಡಿರುವ ಗ್ರಾಮ. ಜನಸಂಖ್ಯೆಯಲ್ಲೂ ಗ್ರಾಮ ಮುಂದಿದೆ. ಆದ್ದರಿಂದ ಊರಿನ ಜನ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಬರುತ್ತಲೇ ಇರುತ್ತಾರೆ. ಆದರೆ ಗ್ರಾಮ ಆಡಳಿತ ಅಽಕಾರಿಯವರ ಕಚೇರಿ ಮಾತ್ರ ಆಗಲೋ ಈಗಲೋ ಬೀಳುವ ಹಂತದಲ್ಲಿದೆ. ನಾದುರಸ್ತಿಯಲ್ಲಿರುವ ಕಟ್ಟಡದೊಳಗೆ ಜೀವ ಭಯದಲ್ಲಿ ಗ್ರಾಮ ಆಡಳಿತಾಧಿಕಾರಿ, ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.


50 ವರ್ಷದ ಹಳೆಯ ಕಟ್ಟಡ:
ನೆಲ್ಯಾಡಿ ಪೇಟೆಗೆ ಹೊಂದಿಕೊಂಡೇ ಇರುವ ಗ್ರಾಮ ಪಂಚಾಯತ್ ಜಾಗದಲ್ಲಿ ನೆಲ್ಯಾಡಿ ಗ್ರಾಮ ಆಡಳಿತ ಅಧಿಕಾರಿ ಅವರ ಕಚೇರಿ ಇದೆ. ಕಚೇರಿಯ ಈ ಕಟ್ಟಡಕ್ಕೆ ಬರೋಬ್ಬರಿ 50 ವರ್ಷ ಸಮೀಪಿಸಿದೆ ಎಂದು ಅಂದಾಜಿಸಲಾಗಿದೆ. 50 ವರ್ಷದ ಹಿಂದೆ ಈ ಕಟ್ಟಡವನ್ನು ಗ್ರಾಮಸ್ಥರೇ ಸೇರಿ ನಿರ್ಮಾಣ ಮಾಡಿದ್ದರು. ಇದಕ್ಕೆ ಹೊಂದಿಕೊಂಡೇ ಗ್ರಾಮ ಪಂಚಾಯತ್‌ನ ಕಟ್ಟಡವೂ ಇದ್ದು ಅದರಲ್ಲಿ ಗ್ರಂಥಾಲಯ ಇತ್ತು. ಈಗ ಗ್ರಂಥಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗಿದ್ದು ಇಲ್ಲಿ ವಿಕಲಚೇತನರ ಪುನರ್ವಸತಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಎರಡು ವರ್ಷದ ಹಿಂದೆ ಗ್ರಾಮ ಪಂಚಾಯಿತಿಯಿಂದ ಈ ಕಟ್ಟಡದ ದುರಸ್ತಿ ಮಾಡಲಾಗಿತ್ತು. ಇದೀಗ ಕಟ್ಟಡದ ಗೋಡೆ ಬಿರುಕು ಬಿಟ್ಟಿದ್ದು ಹಂಚು ಹಾಗೂ ಪಕ್ಕಾಸು ಮುರಿದು ಬೀಳುತ್ತಿದೆ.


ಸಾವಿರಾರು ದಾಖಲೆಗಳಿವೆ:
ನಾದುರಸ್ತಿಯಲ್ಲಿರುವ ಕಟ್ಟಡದ ಬಾಗಿಲು, ಕಿಟಕಿಗಳೂ ಅಲುಗಾಡುತ್ತಿವೆ. ಗೋಡೆಯೂ ಬಿರುಕು ಬಿಟ್ಟಿದೆ. ಕಚೇರಿಯೊಳಗೆ ನೆಲ್ಯಾಡಿ ಗ್ರಾಮಕ್ಕೆ ಸಂಬಂಧಿಸಿದ ಅಮೂಲ್ಯ ದಾಖಲೆಗಳೂ ಇವೆ. ಆಗಲೋ, ಈಗಲೋ ಮುರಿದು ಬೀಳುವ ಹಂತದಲ್ಲಿರುವ ಹಳೆಯ ಕಟ್ಟಡಕ್ಕೆ ಶೀಘ್ರ ಕಾಯಕಲ್ಪ ನೀಡದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುಟ್ಟಿಯಾಗಿದೆ. ಜನರಿಗೆ ಅತೀ ಅವಶ್ಯಕವಾಗಿರುವ ಗ್ರಾಮ ಆಡಳಿತ ಅಧಿಕಾರಿ ಕಚೇರಿಯನ್ನು ಬೇರೆ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಕ್ಕೆ ಇಲ್ಲವೇ ಕಟ್ಟಡದ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬಿದ್ದ ಪಕ್ಕಾಸು, ಸಿಬ್ಬಂದಿ ಪಾರು
ನಾದುರಸ್ತಿಯಲ್ಲಿದ್ದ ಕಟ್ಟಡದ ಮೇಲ್ಛಾವಣಿಯ ಪಕ್ಕಾಸು ತುಂಡೊಂದು ಮಂಗಳವಾರ ಬೆಳಿಗ್ಗೆ ಮುರಿದು ಬಿದ್ದಿದ್ದು ಈ ವೇಳೆ ಕಚೇರಿಯೊಳಗೆ ಕೆಲಸ ನಿರ್ವಹಿಸುತ್ತಿದ್ದ ಗ್ರಾಮ ಸಹಾಯಕ ಚರಣ್ ಅವರು ಅಪಾಯದಿಂದ ಪಾರಾಗಿದ್ದಾರೆ. ಆ ಬಳಿಕ ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಬೀಗ ಹಾಕಲಾಗಿದ್ದು ಗ್ರಾಮ ಆಡಳಿತ ಅಧಿಕಾರಿ ಲಾವಣ್ಯ ಅವರು ಪಕ್ಕದ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕಟ್ಟಡ ಅಪಾಯ ಸ್ಥಿತಿ ಇರುವ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಪಂಚಾಯತ್‌ನಿಂದ ಬೇರೆ ಕಟ್ಟಡದಲ್ಲಿ ಕಚೇರಿಗೆ ಅವಕಾಶ ಮಾಡಿಕೊಡುವ ಭರವಸೆ ಸಿಕ್ಕಿದೆ ಎಂದು ಗ್ರಾಮ ಆಡಳಿತ ಅಽಕಾರಿ ಲಾವಣ್ಯ ಅವರು ’ಸುದ್ದಿ’ಗೆ ತಿಳಿಸಿದ್ದಾರೆ.

ಗ್ರಾ.ಪಂ.ನಿಂದ ಕೊಠಡಿ ವ್ಯವಸ್ಥೆ
ಗ್ರಾಮ ಆಡಳಿತ ಅಧಿಕಾರಿ ಕಚೇರಿ ಗೋಡೆ ಬಿರುಕು ಬಿಟ್ಟಿದ್ದು ಬೀಳುವ ಹಂತದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಗ್ರಾಮ ಪಂಚಾಯತ್‌ನ ಹಳೆಯ ಕಟ್ಟಡದ ಕಚೇರಿಯಲ್ಲಿ ಈಗ ಸಾಮಾನ್ಯ ಸಭೆ ಮಾಡುತ್ತಿದ್ದೇವೆ. ಇದೀಗ ಈ ಕೊಠಡಿಗೆ ಪೈಂಟಿಂಗ್ ಮಾಡಲಾಗುತ್ತಿದ್ದು ಇಲ್ಲಿ ಗ್ರಾಮ ಆಡಳಿತ ಅಽಕಾರಿ ಕಚೇರಿಗೆ ವ್ಯವಸ್ಥೆ ಮಾಡುತ್ತೇವೆ. ಇನ್ನೆರಡು ದಿನದಲ್ಲಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುತ್ತೇವೆ.
-ಸಲಾಂ ಬಿಲಾಲ್ ಅಧ್ಯಕ್ಷರು, ಗ್ರಾ.ಪಂ.ನೆಲ್ಯಾಡಿ

LEAVE A REPLY

Please enter your comment!
Please enter your name here