ಕೊಲ್ಯದಕಟ್ಟ ದಿಶಾ ಪವರ್ ಪ್ರಾಜೆಕ್ಟ್ನವರಿಂದ ಪಂಚಾಯತ್ಗೆ ತೆರಿಗೆ ಬಾಕಿ
ಮೂಲಭೂತ ಸೌಕರ್ಯ ತಡೆಹಿಡಿಯುವ ಬಗ್ಗೆ ಸದಸ್ಯರ ತೀರ್ಮಾನ
ಕಡಬ: ಕುಟ್ರುಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ನಿರ್ಮಿಸಲಾಗಿರುವ ದಿಶಾ ಪವರ್ ಪ್ರಾಜೆಕ್ಟ್ನವರಿಂದ ಗ್ರಾಮ ಪಂಚಾಯತ್ಗೆ ಪಾವತಿಸಬೇಕಾಗಿರುವ ತೆರಿಗೆ ಮೊತ್ತವನ್ನು ಪಾವತಿಸದೆ ವಂಚನೆ ಎಸಗಿರುವ ಕುರಿತು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ತೆರಿಗೆ ಪಾವತಿಸದೆ ಇದ್ದರೆ ಪವರ್ ಪ್ರಾಜೆಕ್ಟ್ಗೆ ಮೂಲಭೂತ ಸೌಲಭ್ಯಗಳನ್ನು ತಡೆಹಿಡಿಯುವ ಬಗ್ಗೆ ಸದಸ್ಯರು ತಿರ್ಮಾನಿಸಿದ ಘಟನೆ ಕುಟ್ರುಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ. ಈ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ದಿಶಾ ಪವರ್ ಪ್ರಾಜೆಕ್ಟ್ ಕೊಲ್ಯದಕಟ್ಟ ಇವರು ಗ್ರಾಮ ಪಂಚಾಯಿತಿಗೆ ಪಾವತಿಸಬೇಕಾದ ವಾರ್ಷಿಕ ತೆರಿಗೆಯನ್ನು ಸುಮಾರು ಐದು ವರ್ಷಗಳಿಂದ ಪಾವತಿಸದೇ ಬಾಕಿ ಇರಿಸಿಕೊಂಡಿದ್ದು ಗ್ರಾಮ ಪಂಚಾಯಿತಿಯಿಂದ ಹಲವು ಬಾರಿ ನೋಟಿಸು ನೀಡಲಾಗಿರುತ್ತದೆ. ಈ ಬಗ್ಗೆ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಪವರ್ ಪ್ರಾಜೆಕ್ಟ್ ನವರಿಗೆ ತೆರಿಗೆ ಪಾವತಿಸುವಂತೆ ಸೂಚಿಸಿದ್ದಾರೆ, ಆದರೂ ಇಲ್ಲಿವರೆಗೆ ತೆರಿಗೆ ಪಾವತಿಸದೆ ಇರುವುದರಿಂದ ಮುಂದಿನ ಕಾನೂನು ಸಲಹೆ ಪಡೆದುಕೊಂಡು ವಿದ್ಯುತ್ ಉತ್ಪಾದನಾ ಘಟಕದ ಮೂಲಭೂತ ಸೌಕರ್ಯವನ್ನು ತಡೆಹಿಡಿಯುವ ಬಗ್ಗೆ ಸರ್ವನಾಮತದಿಂದ ತೀರ್ಮಾನಿಸಲಾಯಿತು. 2024-25 ನೇ ಸಾಲಿನ ಗ್ರಾಮ ಪಂಚಾಯತ್ ಆಯವ್ಯಯವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಂಡಿಸಿದರು. ಬಳಿಕ ಗ್ರಾಮ ಪಂಚಾಯತ್ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಯಶೋಧ ಕೆ.ಆರ್, ಮಹಮದ್ ಅಲಿ, ಸುಧೀರ್ ದೇವಾಡಿಗ, ಸಂತೋಷ್, ರಮೇಶ್ ಪಿ, ಲಕ್ಷ್ಮೀಶ ಬಂಗೇರ, ಕಿರಣ್ ಗೋಗಟೆ, ಮಾದವಿ, ವಿಜಯ, ಮೀನಾಕ್ಷಿ, ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿ ಉಮೇಶ ಬಿ ಸ್ವಾಗತಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ. ವಿಷಯ ಮಂಡಿಸಿ ವಂದನಾರ್ಪಣೆ ಸಲ್ಲಿಸಿದರು.