ಪುತ್ತೂರು: ಅಪೂರ್ವ ಸಂದರ್ಭವಿದು. ಜಗತ್ತು ಭಾರತವನ್ನು ತಿರುಗಿ ನೋಡುತ್ತಿದೆ. ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಆಗುವ ಮೂಲಕ ಹಳ್ಳಿ ಹಳ್ಳಿಯಲ್ಲಿ ಧರ್ಮ ಜಾಗೃತಿಯಾಗಿದೆ. ಧಾರ್ಮಿಕ ಕ್ಷೇತ್ರಗಳ ಪುನರುತ್ತಾನವಾಗಿದೆ. ಜಾತ್ರೋತ್ಸವಕ್ಕೆ ಬ್ರಹ್ಮರಥ ಮೆರುಗು ನೀಡಲಿದೆ. ದೇವರನ್ನು ರಥದಲ್ಲಿ ನೋಡುವುದೇ ಪುಳಕಿತ ಸನ್ನಿವೇಶ. ಬ್ರಹ್ಮಕಲಶೋತ್ಸವ ಅತ್ಯಂತ ವಿಜ್ರಂಭಣಿಯಿಂದ ನಡೆಯಲಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರುರವರು ಹೇಳಿದರು.
ಅವರು ಫೆ.26ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನಕ್ಕೆ ತೆರಳಲಿದ್ದ ಬ್ರಹ್ಮರಥದ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಬೆಂಗಳೂರಿನ ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿರುವ ಸೌಂದರ್ಯ ಮಂಜಪ್ಪ ಪಿ., ಅವರು ತೆಂಗಿನಕಾಯಿ ಒಡೆದು ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿ ಕೊಡಿಪಾಡಿಯ ಜನರ ಬಹುದಿನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ದೇವರನ್ನು ಪೂರ್ಣ ವ್ಯವಸ್ಥೆಯಲ್ಲಿ ವಿಜ್ರಂಭಣೆಯಿಂದ ಜಾತ್ರೋತ್ಸವ ನೋಡುವ ಆಸೆ ನೆರವೇರಿದೆ. ದೇವರ ಪೂರ್ಣ ಅನುಗ್ರಹ ಎಲ್ಲರಿಗೂ ಸಿಗಲಿ ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ರವರು ಮಾತನಾಡಿ ಜಾತ್ರೋತ್ಸವ ಸಂದರ್ಭದಲ್ಲಿ ದೇವರು ರಥಾರೂಢನಾದಾಗ ಪ್ರಸನ್ನನಾಗುತ್ತಾನೆ. ಆಗ ಕೇಳಿದ ಭಕ್ತರ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತಾನೆ ಎನ್ನುವ ನಂಬಿಕೆ ನಮ್ಮದು. ಬಹಳ ಸಂತಸ, ಸಂಭ್ರಮದ ಕ್ಷಣ ಇದಾಗಿದೆ. ನನಗೂ ಕೊಡಿಪಾಡಿ ಕ್ಷೇತ್ರಕ್ಕೂ ವಿಶೇಷ ಬಾಂಧವ್ಯವಿದೆ. ಪ್ರಥಮ ಬ್ರಹ್ಮರಥೋತ್ಸವ ಅತ್ಯಂತ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ನಾಕ್, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ., ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಪ್ರಮುಖರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸಹಜ್ ರೈ ಬಳಜ್ಜ, ಜಿನ್ನಪ್ಪ ಗೌಡ ಕಲ್ಲೇಗ, ಪಿ.ಡಬ್ಲ್ಯೂ.ಡಿ. ಗುತ್ತಿಗೆದಾರರಾದ ಸಂದೀಪ್ ನಾಯ್ಕ್, ಆರ್.ಸಿ. ನಾರಾಯಣ, ಸಂತೋಷ್ ಕುಮಾರ್ ರೈ ನಳೀಲು, ಡಾ. ಕೃಷ್ಣ ಪ್ರಸನ್ನ, ಎ. ವಿ. ನಾರಾಯಣ, ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಕೆ.ಜನಾರ್ದನ ಎರ್ಕಡಿತ್ತಾಯ ಹಾಗೂ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಧೀರಜ್ ಗೌಡ ಹಿರ್ಕುಡೆಲು ಹಾಗೂ ಪದಾಧಿಕಾರಿಗಳು, ಉತ್ಸವ ಸಮಿತಿ ಅಧ್ಯಕ್ಷರಾದ ಸುಧೀರ್ ಪ್ರಸಾದ್ ಆನಾಜೆ ಮತ್ತು ಪದಾಽಕಾರಿಗಳು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತಾಽಗಳು ಉಪಸ್ಥಿತರಿದ್ದರು.
ಬ್ರಹ್ಮರಥದ ಬೃಹತ್ ಶೋಭಾಯಾತ್ರೆ: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನಕ್ಕೆ ಸಮರ್ಪಣೆಗೊಳ್ಳಲಿರುವ ನೂತನ ಬ್ರಹ್ಮರಥವನ್ನು ಭವ್ಯ ಸ್ವಾಗತದೊಂದಿಗೆ ಫೆ.25ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ತರಲಾಗಿದ್ದು, ಫೆ.26ರಂದು ಬೃಹತ್ ಶೋಭಾಯಾತ್ರೆಯ ಮೂಲಕ ಕೊಡಿಪಾಡಿ ದೇವಾಲಯಕ್ಕೆ ಕೊಂಡೊಯ್ದು ಅಲ್ಲಿ ಭೂಸ್ಪರ್ಶ ಮಾಡಲಾಯಿತು.
ಫೆ.26ರಂದು ಬೆಳಗ್ಗೆ 8.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಥಕ್ಕೆ ಕ್ಷೇತ್ರದ ಅರ್ಚಕರಾದ ವಸಂತ ಕೆದಿಲಾಯರವರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ಶೋಭಾಯಾತ್ರೆಯು ಮಂಜಲ್ಪಡ್ಪು ಮೂಲಕ ಆಗಮಿಸಿ 12.20ರ ಶುಭ ಮುಹೂರ್ತದಲ್ಲಿ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ರಥ ಬೀದಿಯಲ್ಲಿ ಭೂಸ್ಪರ್ಶ ನಡೆಯಿತು.
ಮೆರಗು ನೀಡಿದ ಚೆಂಡೆ, ಕುಣಿತಭಜನೆ: ಮಂಜಲ್ಪಡ್ಪುವಿನಲ್ಲಿರುವ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ದ್ವಾರದ ಬಳಿಯಿಂದ ಕಲಶ ಹಿಡಿದ ಮುತೈದೆಯರು, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ, ಬ್ಯಾಂಡ್ ಮೆರಗು ನೀಡಿತು. ಅಲ್ಲಲ್ಲಿ ಸಿಡಿಮದ್ದು ಪ್ರದರ್ಶನ ವೂ ನೊಡುಗರ ಕಣ್ಮನ ಸೆಳೆಯಿತು.
ಅಲ್ಲಲ್ಲಿ ತಂಪು ಪಾನೀಯ, ಸಿಹಿತಿಂಡಿ ವಿತರಣೆ: ಬೃಹತ್ ಶೋಭಾಯಾತ್ರೆಯು ಸಾಗುತ್ತಿದ್ದಂತೆ ಹಲವು ಭಕ್ತಾಧಿಗಳಿಂದ ಮಂಜಲ್ಪಡ್ಪುವಿನಿಂದ ಹಿಡಿದು ಕೊಡಿಪಾಡಿ ಕ್ಷೇತ್ರದ ವರೆಗೆ ವಿವಿಧ ಕಡೆಗಳಲ್ಲಿ ಬೆಲ್ಲ ನೀರು, ತಂಪು ಪಾನೀಯ, ಕಲ್ಲಂಗಡಿ ಹಣ್ಣು, ಸಿತಿಂಡಿಗಳ ವಿತರಣೆ ನಡೆಯಿತು.
ಬ್ರಹ್ಮರಥ ಭೂಸ್ಪರ್ಶದ ವೇಳೆಯೂ ಗರುಡಾಗಮನ
ಗ್ರಾಮದೆಲ್ಲೆಡೆ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬ್ರಹ್ಮರಥದ ಬೃಹತ್ ಶೋಭಾಯಾತ್ರೆಯು ಕ್ಷೇತ್ರದ ಸಮೀಪ ತಲುಪುತ್ತಿದ್ದಂತೆ ಕ್ಷೇತ್ರದ ವತಿಯಿಂದ ಬ್ರಹ್ಮರಥವನ್ನು ಸ್ವಾಗತಿಸಿ ಕರೆತರಲಾಯಿತು. ಬಳಿಕ ಬ್ರಹ್ಮರಥದ ಭೂಸ್ಪರ್ಶ ನಡೆಯಿತು. ಅದಾದ ಕೆಲವೇ ಕ್ಷಣದಲ್ಲಿ ದೇವಾಲಯದ ಗೋಪುರದ ಮೇಲ್ಭಾಗ ಆಕಾಶದಲ್ಲಿ ಗರುಡ ಕಂಡುಬಂತು. ದೇವಾಲಯದ ಗೋಪುರದ ಮೇಲ್ಭಾಗದ ಪಕ್ಕದಲ್ಲಿ ಮೂರು ಸುತ್ತು ಹಾರಾಟ ನಡೆಸಿದ ಗರುಡ ಆ ಬಳಿಕ ಕಣ್ಮರೆಯಾಯಿತು. ಕೆಲದಿನಗಳ ಹಿಂದೆ ಕ್ಷೇತ್ರದಲ್ಲಿ ಧ್ವಜಸ್ಥಂಭ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದ್ದಾಗಲೂ ದೇವಾಲಯದ ಮೇಲ್ಭಾಗ ಆಕಾಶದಲ್ಲಿ ಗರುಡನ ಹಾರಾಟ ಕಂಡುಬಂದಿತ್ತು. ಕೆಲ ಸಮಯದ ಹಿಂದೆ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸಿದ ವೇಳೆ ತೆಂಕಣ ಕಾಡಿನಲ್ಲಿ ಕ್ಷೇತ್ರದ ಧ್ವಜಾರೋಹಣ ಸಮಯಕ್ಕಾಗಿ ಗರುಡವೊಂದು ಕಾದುಕುಳಿತಿರುವುದಾಗಿ ಕಂಡು ಬಂದಿತ್ತು. ಇದೀಗ ಬ್ರಹ್ಮ ರಥದ ಭೂಸ್ಪರ್ಶದ ವೇಳೆ ಮತ್ತೊಮ್ಮೆ ಗರುಡಾಗಮನ ಆಗಿರುವುದು ಭಕ್ತರಲ್ಲಿ ಭಯಭಕ್ತಿ ಹುಟ್ಟಿಸಿದಲ್ಲದೇ ಕ್ಷೇತ್ರದ ಕಾರಣಿಕತೆಯ ನಂಬಿಕೆಗೆ ಇನ್ನಷ್ಟು ಪುಷ್ಟಿ ನೀಡಿದೆ.