ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ – ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

0

ಪುತ್ತೂರು: ದ.ಕ. ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾಗಿದ್ದ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು(34 ವ) ಅವರ ಬರ್ಬರ ಹತ್ಯೆ ಖಂಡಿಸಿ ಬೆಂಗಳೂರಿನ ಟೌನ್‌ಹಾಲ್ ಮುಂದೆ ನಡೆಸಲಾಗಿದ್ದ ಪ್ರತಿಭಟನೆಯ ವೇಳೆ ಶಾಂತಿ ಭಂಗ ಮಾಡಲಾಗಿದೆ ಎಂಬ ಆರೋಪದಡಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ಯುವವಾಹಿನಿ, ಹಿಂದೂ ಸಂಘಟನೆ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಪ್ರವೀಣ್ ಅವರನ್ನು 2022ರ ಜುಲೈ 26ರಂದು ರಾತ್ರಿ 8.30ರ ವೇಳೆಗೆ ಬೆಳ್ಳಾರೆಯಲ್ಲಿರುವ ಅವರದೇ ಮಾಲಕತ್ವದ ಅಕ್ಷಯ ಚಿಕನ್ ಸೆಂಟರ್ ಮುಂಭಾಗದಲ್ಲಿ ಬರ್ಬರವಾಗಿ ಕಡಿದು ಕೊಲ್ಲಲಾದ ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದ ವೇಳೆ ಬೆಂಗಳೂರು ಟೌನ್‌ಹಾಲ್ ಮುಂಭಾಗದಲ್ಲಿಯೂ ಪ್ರತಿಭಟನೆ ನಡೆಸಲಾಗಿತ್ತು. ಬೆಂಗಳೂರು ನಗರದಲ್ಲಿ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಲ್ಲಿ ಪ್ರತಿಭಟನೆ ಮಾಡಬಾರದು ಎಂದು ಸರ್ಕಾರದ ಆದೇಶ ಇದ್ದರೂ ನಿಯಮ ಉಲ್ಲಂಘಿಸಿ ಮತ್ತು ಸರ್ಕಾರದಿಂದಾಗಲಿ ಅಥವಾ ಸಂಬಂಧಟ್ಟ ಪ್ರಾಧಿಕಾರದಿಂದಾಗಲೀ ಯಾವುದೇ ಪೂರ್ವಾನುಮತಿ ಪಡೆಯದೆ ಟೌನ್‌ಹಾಲ್ ಮುಂದೆ ಪ್ರತಿಭಟನೆ ನಡೆಸಿ ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದ್ದಾರೆ ಎಂದು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಖಾಸಗಿ ದೂರು ದಾಖಲಿಸಿದ್ದರು. ಪ್ರತಿಭಟನೆ ನಡೆಸಿದ್ದ ಶಾಸಕ ರವಿಸುಬ್ರಹ್ಮಣ್ಯ, ಮಾಜಿ ಮೇಯರ್‌ಗಳಾದ ಕಟ್ಟೆ ಸತ್ಯನಾರಾಯಣ, ಉಮೇಶ್ ಶೆಟ್ಟಿ ಮತ್ತು ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಒಟ್ಟು 11 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ 2022ರ ಜುಲೈ 28ರಂದು ಜೆ.ಸಿ. ರಸ್ತೆಯ ಟೌನ್‌ಹಾಲ್ ಮುಂಭಾಗ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.3೦ರವರೆಗೆ ಹಿಂದೂ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಹಾದಿಗಳಿಗೆ ಧಿಕ್ಕಾರ, ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಪ್ರವೀಣ್ ನೆಟ್ಟಾರ್ ಹಂತಕರನ್ನು ಸಾರ್ವಜನಿಕವಾಗಿ ಎನ್‌ಕೌಂಟರ್ ಮಾಡಬೇಕು ಎಂದು ಘೋಷಣೆ ಕೂಗಲಾಗಿದೆ ಎಂದು ಕೇಸ್‌ನಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ವಿರುದ್ಧ ಬೆಂಗಳೂರು ನಗರದ 6ನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರು ಮತ್ತು ನ್ಯಾಯಾಲಯ ಹೊರಡಿಸಿರುವ ಸಮನ್ಸ್ ರದ್ದು ಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಹಿಂದೆ ಈ ಕುರಿತಂತೆ ಮಧ್ಯಂತರ ಆದೇಶ ನೀಡಿ ಸಮನ್ಸ್‌ಗೆ ತಡೆ ನೀಡಿತ್ತು. ನಂತರ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ಚಕ್ರವರ್ತಿ ಸೂಲಿಬೆಲೆ ಪರ ನ್ಯಾಯವಾದಿಗಳಾದ ಅರುಣ್ ಶ್ಯಾಮ್ ಪುತ್ತೂರು ಮತ್ತು ಸುಯೋಗ್ ಹೇರಳೆ ಪುತ್ತೂರು ವಾದಿಸಿದ್ದರು.

LEAVE A REPLY

Please enter your comment!
Please enter your name here