ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿ ಕಚೇರಿಯಿದ್ದ ಹಳೆಯ ಕಟ್ಟಡದ, ಪ್ರಸ್ತುತ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತಿದ್ದ ಕೊಠಡಿಯಲ್ಲಿ ನೆಲ್ಯಾಡಿ ಗ್ರಾಮ ಆಡಳಿತಾಧಿಕಾರಿ ಅವರ ಕಚೇರಿ ಕಾರ್ಯಾರಂಭಗೊಂಡಿದೆ.
ನೆಲ್ಯಾಡಿ ಗ್ರಾಮ ಆಡಳಿತ ಅಧಿಕಾರಿ ಕಚೇರಿ ಸುಮಾರು 50 ವರ್ಷಗಳ ಹಳೆಯ ಕಟ್ಟಡದಲ್ಲಿತ್ತು. ಈ ಕಟ್ಟಡದ ಗೋಡೆ ಬಿರುಕು ಬಿಟ್ಟು, ಪಕ್ಕಾಸು, ಹಂಚುಗಳು ಮುರಿದು ಬೀಳುತ್ತಿರುವ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಸ್ಥಳಾಂತರ ಮಾಡಿ ಸಿಬ್ಬಂದಿಗಳು ಅಲ್ಲಿಯೇ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಇದಾದ ಎರಡೇ ದಿನದಲ್ಲಿ ರಾತ್ರಿ ವೇಳೆ ಹಳೆಯ ಕಟ್ಟಡ ಕುಸಿತಗೊಂಡಿತು. ಇದೀಗ ಗ್ರಾಮ ಆಡಳಿತಾಧಿಕಾರಿ ಅವರಿಗೆ ಗ್ರಾಮ ಪಂಚಾಯಿತಿಯ ಹಳೆಯ ಕಟ್ಟಡದಲ್ಲಿ ಪ್ರಸ್ತುತ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡೆಯುತ್ತಿದ್ದ ಕೊಠಡಿಯಲ್ಲಿ ಕಚೇರಿಗೆ ಪಂಚಾಯಿತಿಯಿಂದ ವ್ಯವಸ್ಥೆ ಮಾಡಲಾಗಿದ್ದು ದಾಖಲೆಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿದ್ದು ಕಚೇರಿ ಕಾರ್ಯಾರಂಭ ಮಾಡಿದೆ.
ಗ್ರಾಮ ಆಡಳಿತ ಅಧಿಕಾರಿ ಕಚೇರಿಗೆ ಗ್ರಾಮ ಪಂಚಾಯಿತಿ ಹಳೆಯ ಕಟ್ಟಡದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ಕೊಠಡಿಯಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ಗ್ರಾಮಸ್ಥರು ಇಲ್ಲಿ ಸಂಪರ್ಕಿಸಬಹುದಾಗಿದೆ.
-ಸಲಾಂ ಬಿಲಾಲ್ ಅಧ್ಯಕ್ಷರು
ಗ್ರಾಮ ಪಂಚಾಯತ್, ನೆಲ್ಯಾಡಿ