ಪುತ್ತೂರು: ಮನೆಲ ಚರ್ಚ್ ಪ್ರಧಾನ ಧರ್ಮಗುರುಗಳು ತಮ್ಮದೇ ಚರ್ಚ್ ವ್ಯಾಪ್ತಿಯ ಹಿರಿಯ ದಂಪತಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಫೆ.29 ರಂದು ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79ವ.) ದಂಪತಿಗಳ ಮನೆಗೆ ಚರ್ಚ್ ನ ಧರ್ಮಗುರು ಫಾ.ನೆಲ್ಸನ್ ಓಲಿವೆರಾ ಮನೆ ಶುದ್ಧಗೊಳಿಸುವ ನಿಮಿತ್ತ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಧರ್ಮಗುರುಗಳು ವೃದ್ಧ ದಂಪತಿಗಳು ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಇರುವ ಬಗ್ಗೆ ಮತ್ತು ಚರ್ಚ್ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸದೇ ಇರುವ ಬಗ್ಗೆ ಅವಾಚ್ಯ ಶಬ್ದಗಳಿಂದ ವೃದ್ಧ ದಂಪತಿಗಳನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಕಾಲರ್ ಹಿಡಿದು ಮಾರುದ್ದ ಎಳೆದೊಯ್ದು ವೃದ್ಧ ದಂಪತಿಗಳಿಗೆ ಹಲ್ಲೆ ನಡೆಸುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ತನ್ನ ತಂದೆ-ತಾಯಿ ಸಮಾನರಾದ ಹಿರಿಯ ದಂಪತಿ ವಿರುದ್ಧ ಫಾ.ನೆಲ್ಸನ್ ತೋರಿದ ಅತಿರೇಕದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಮನೆಲ ಚರ್ಚ್ ವ್ಯಾಪ್ತಿಯ ನಿವಾಸಿಗಳು ಕೂಡ ಪಾದ್ರಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳಿಲ್ಲದಿರುವ ಹಿರಿಯ ದಂಪತಿಗಳ ನೋವಿಗೆ, ಸಮಸ್ಯೆಗೆ ಸ್ಪಂದಿಸುವವರು ಯಾರು ಇಲ್ಲ ಎನ್ನುವ ಪ್ರಶ್ನೆಯ ನಡುವೆ ಸಮುದಾಯದ ಹಲವರು ವಿಟ್ಲ ಠಾಣೆಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ತಲಪಾಡಿ, ಸಂಪಿಗೆ ಚರ್ಚ್ ಗಳಲ್ಲೂ ಫಾ.ನೆಲ್ಸನ್ ಇದೇ ರೀತಿ ದುರ್ವರ್ತನೆ ತೋರಿರುವ ಬಗ್ಗೆ ಸಮುದಾಯದಲ್ಲಿ ಚರ್ಚೆ ನಡೆಯುತ್ತಿದೆ. ಉನ್ನತ ಸ್ಥಾನದಲ್ಲಿರುವ ಪಾ. ನೆಲ್ಸನ್ ತೋರಿರುವ ಅತಿರೇಕದ ವರ್ತನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಿರಿಯ ದಂಪತಿಗಳ ಕುಟುಂಬಸ್ಥರು ಮತ್ತು ಸ್ಥಳೀಯರು ಠಾಣಾಧಿಕಾರಿಯನ್ನು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಹಾಗೂ ವಲಯದ ಮಹಿಳಾ ಸಂಘಟನೆ ಪದಾಧಿಕಾರಿಗಳು, ಸದಸ್ಯರು ಭೇಟಿ ನೀಡಿದ್ದು, ನೊಂದ ದಂಪತಿಗೆ ಸಾಂತ್ವನ ಹೇಳಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ