ಧರ್ಮಗುರು ಕೃತ್ಯಕ್ಕೆ ಎಲ್ಲೆಡೆ ಆಕ್ರೋಶ-ಸೇವೆಯಿಂದ ವಜಾ..
ಮನೆಲ ಚರ್ಚ್ ಪಾದ್ರಿಯ ಪ್ರಕರಣವು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಎಚ್ಚೆತ್ತ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾರವರ ಮಾರ್ಗದರ್ಶನದ ಮೇರೆಗೆ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ.ಜೆ.ಬಿ ಸಲ್ದಾನ್ಹಾ ಹಾಗೂ ರೋಯ್ ಕ್ಯಾಸ್ಟಲಿನೋರವರು ಕೂಡಲೇ ಅನ್ವಯಿಸುವಂತೆ ಪ್ರಕರಣದ ಆರೋಪಿ ಮನೆಲ ಚರ್ಚ್ ಧರ್ಮಗುರು ಫಾ|ನೆಲ್ಸನ್ ಒಲಿವೆರಾರವರನ್ನು ಮನೆಲ ಚರ್ಚ್ ಧಾರ್ಮಿಕ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

ನಮಗೆ ನ್ಯಾಯ ಇಲ್ಲವೇ?…
ನಾನು ಕಳೆದ ಸೆಪ್ಟೆಂಬರ್ 2 ರಂದು ಶನಿವಾರ ಸಂಜೆ ಚರ್ಚ್ ಗೆ ವಾರ್ಷಿಕ ಸದಸ್ಯತನ ರೂ.1000/- ನೀಡಲು ಹೋಗಿದ್ದೆ. ಆದರೆ ಪಾದ್ರಿ ನನಗೆ ಈಗ ಟೈಮಿಲ್ಲ ಎಂದು ಹೇಳಿ ಸಂಜೆಯ ಪೂಜೆಗೆ ತೆರಳಿದ್ದರು. ಆಯ್ತು ಅಂತ ಹೇಳಿ ಪೂಜೆ ಆದ ಬಳಿಕ ಮತ್ತೊಮ್ಮೆ ಹೋದೆ. ಆಗ ಪಾದ್ರಿ, ನಿಮ್ಮ ಸದಸ್ಯತನದಿಂದ ಚರ್ಚ್ ನಡೆಸಲು ಸಾಧ್ಯವಿಲ್ಲ, ನಿಮ್ಮದು ಚರ್ಚ್ಗೆ ಸಂಬಂಧಪಟ್ಟ ಶ್ರಮದಾನದ ಉಳಿಕೆ ಬಾಕಿಯಿದೆ ಎಂದು ಹೇಳಿ ನನ್ನತ್ರ ದರ್ಪತನದಿಂದ, ಏರುಧ್ವನಿಯಲ್ಲಿ ಮಾತನಾಡಿದರು. ನಾನು ಸುಮ್ಮನಿದ್ದು ಅಲ್ಲಿಂದ ವಾಪಸ್ಸಾದೆ. ಬಳಿಕ ಧರ್ಮಗುರು ಮನೆ ಶುದ್ಧಿಗೆಂದು ಬಂದವರು ಹಿಂದಿನ ವಿಷಯಗಳನ್ನು ಕೆದಕಿ ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯ ಶಬ್ಧಗಳಿಂದ ಬೈಯತೊಡಗಿದರು ಮಾತ್ರವಲ್ಲ ನಾವು ವೃದ್ಧರೆಂದು ತಿಳಿದು ನಮ್ಮನ್ನು ಎಳೆದಾಡಿ, ಹೊಡೆದರು. ಪಾದ್ರಿಗಳು ಈ ರೀತಿ ಮಾಡುವುದು ಸರಿಯಾ?, ನಮಗೆ ನ್ಯಾಯ ಇಲ್ಲವೇ?.
–ಫಿಲೋಮಿನಾ ಕುವೆಲ್ಲೋ, ಗ್ರೆಗೋರಿ ಮೊಂತೇರೊರವರ ಪತ್ನಿ
ಫಾ|ನೆಲ್ಸನ್ ಒಲಿವೆರಾ,ಚಾಲಕನ ವಿರುದ್ಧ ಪ್ರಕರಣ
ಘಟನೆಗೆ ಸಂಬಂಧಿಸಿ ಗ್ರೆಗೋರಿ ಮೊಂತೆರೋ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಫೆ.29ರಂದು ಬೆಳಿಗ್ಗೆ ತಾನು ಮತ್ತು ಪತ್ನಿ ಫಿಲೋಮಿನಾ ಕೋವೇಲ ಪುಣಚ ಗ್ರಾಮದ ಎರ್ಮೆತ್ತಡ್ಕದ ತಮ್ಮ ಮನೆಯಲ್ಲಿರುವಾಗ ಮಣಿಲಾ ಚರ್ಚ್ನ ಫಾ|ನೆಲ್ಸನ್ ಒಲಿವೆರಾರವರು ಕೆ.ಎ.21-ಎಂ.2653ನೇ ಒಮ್ನಿ ಕಾರಲ್ಲಿ ಚಾಲಕ ಅಲ್ಫೋನ್ಸ್ ಮೊಂತೆರೋರೊಂದಿಗೆ ನಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ, ಈ ಹಿಂದೆ ತಾವು ಚರ್ಚ್ಗೆ ಕಾಣಿಕೆ ನೀಡದೆ ಇರುವ ವಿಚಾರದಲ್ಲಿ ಆಪಾದಿತ ನೆಲ್ಸನ್ ಒಲಿವೆರಾರವರು ನನ್ನ ಕೈಯನ್ನು ಹಿಡಿದು, ತಾನು ಧರಿಸಿದ್ದ ಬನಿಯನ್ ಹಿಡಿದೆಳೆದು ಹರಿದು, ಬಲ ಕೈಯಿಂದ ಹೊಡೆದು ರಕ್ತ ಗಾಯ ಮಾಡಿರುತ್ತಾರೆ.ಆ ಸಮಯ ಬಿಡಿಸಲು ಬಂದ ಪತ್ನಿಯ ಕೈಯನ್ನು ಹಿಡಿದೆಳೆದು ಮಾನಭಂಗಕ್ಕೆ ಪ್ರಯತ್ನಿಸಿ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.ವಿಟ್ಲ ಪೊಲೀಸರು ಫಾ|ನೆಲ್ಸನ್ ಒಲಿವೆರಾ ಮತ್ತು ಒಮ್ನಿ ಚಾಲಕ ಅಲ್ಫೋನ್ಸ್ ಮೊಂತೆರೋ ಅವರ ವಿರುದ್ಧ ಕಲಂ 448,323,504,509,354,506,34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು: ಮನೆಲ ಕ್ರಿಸ್ತ ರಾಯ ಚರ್ಚ್ ಪ್ರಧಾನ ಧರ್ಮಗುರುವೋರ್ವರು ತಮ್ಮದೇ ಚರ್ಚ್ ವ್ಯಾಪ್ತಿಯ ಹಿರಿಯ ವೃದ್ಧ ದಂಪತಿಯ ಕಾಲರ್ ಹಿಡಿದು ಎಳೆದಾಡಿದ, ಹೊಡೆದ ಅಮಾನವೀಯ ಘಟನೆ ವೀಡಿಯೋ ದೃಶ್ಯ ವೈರಲ್ ಆಗಿದೆ.
ಪುಣಚ ಗ್ರಾಮದ ಪರಿಯಾಲ್ತಡ್ಕ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79ವ.) ದಂಪತಿ ಮನೆಗೆ ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾರವರು ವಾಳೆ ಗುರಿಕಾರ ಆಲ್ಫೋನ್ಸ್ ಮೊಂತೇರೊರವರೊಂದಿಗೆ ಓಮ್ನಿ ಕಾರಿನಲ್ಲಿ ಮನೆ ಶುದ್ಧ ಭೇಟಿ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಧರ್ಮಗುರು ಫಾ.ನೆಲ್ಸನ್ ರವರು ವೃದ್ಧ ದಂಪತಿಗೆ ಚರ್ಚ್ ಗೆ ವರ್ಷದ ಸದಸ್ಯತನ ಮಾತ್ರ ನೀಡುವುದಲ್ಲದೆ ನೀವು ಚರ್ಚ್ ಶ್ರಮದಾನದ ಅಂಗವಾಗಿ ಕಳೆದ ಕೆಲವು ವರ್ಷಗಳಿಂದ ಯಾವುದೇ ವಂತಿಗೆ ನೀಡಿ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮಾತ್ರವಲ್ಲ ಕಾಲರ್ ಹಿಡಿದು ಮಾರುದ್ಧ ದೂರ ಎಳೆದುಕೊಂಡು ಹೋಗಿ ಹೊಡೆಯುತ್ತಿರುವುದು ವೈರಲ್ ಆಗಿರುವ ವೀಡಿಯೋ ದೃಶ್ಯದಲ್ಲಿದೆ.
ಪಾದ್ರಿ ನೆಲ್ಸನ್ರವರ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಗೆ ಪಾದ್ರಿಗಳ ದಂಡು ಬಂದಿದೆ.
ಆರೋಪಿ ಪಾದ್ರಿ ವಿರುದ್ಧ ಎಫ್.ಐ.ಆರ್ ದಾಖಲು ಮಾಡಬೇಕು ಎಂದು ಸ್ಥಳೀಯರಿಂದ ಆಗ್ರಹ ವ್ಯಕ್ತವಾಗಿದೆ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಯಾವ ಚರ್ಚ್ ನಲ್ಲೂ ಇಂತಹ ಪ್ರಕರಣಗಳು ಆಗಬಾರದು, ಜೊತೆಗೆ ಇಂತಹ ಪಾದ್ರಿಗಳನ್ನು ಯಾವ ಚರ್ಚ್ ಗೂ ಸೇವೆಗೆ ನೇಮಿಸಬಾರದು ಎಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಸ್ತ್ರೀ ಸಂಘಟನೆ ಹಾಗೂ ವಲಯದ ಸ್ತ್ರೀ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಆಗ್ರಹಪಡಿಸಿದ್ದಾರೆ.
ವದಂತಿಗಳಿಗೆ ಕಿವಿಗೊಡಬೇಡಿ-ಎಸ್ಪಿ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಿಯಾಲ್ತಡ್ಕ ಎಂಬಲ್ಲಿ, ಧಾರ್ಮಿಕ ವ್ಯಕ್ತಿಯೊಬ್ಬರು ಹಲ್ಲೆ ನಡೆಸುತ್ತಿರುವ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಸದ್ರಿ ವಿಡಿಯೋದಲ್ಲಿ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಹಾಗೂ ಹಲ್ಲೆಗೊಳಗಾದವರು ಒಂದೇ ಕೋಮಿಗೆ ಸೇರಿದವರಾಗಿದ್ದು, ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಅ.ಕ್ರ 32/2024 ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಹಾಗು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿನಂತಿಸಿದ್ದಾರೆ.