ಪುತ್ತೂರು: ಇತಿಹಾಸ ಪ್ರಸಿದ್ದ ಓಲೆಮುಂಡೋವು ದರ್ಗಾ ಶರೀಫ್ ಉರೂಸ್ ಸಮಾರಂಭ ಮಾ.3ರಂದು ಸಂಪನ್ನಗೊಂಡಿತು. ಉರೂಸ್ ಪ್ರಯುಕ್ತ ಫೆ.22ರಂದು ಪ್ರಾರಂಭಗೊಂಡ ಧಾರ್ಮಿಕ ಮತ ಪ್ರಭಾಷಣ ಮಾ.2ರಂದು ಸಮಾಪ್ತಿಗೊಂಡಿತು.
ಸಮಾರೋಪ ಸಮಾರಂಭ:
ಬೆಳಿಗ್ಗೆ ಖತಮುಲ್ ಖುರ್ಆನ್ ಸಮರ್ಪಣೆ ನಡೆಯಿತು. ಬಳಿಕ ಉದಯಾಸ್ತಮಾನ ಉರೂಸ್ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ದುವಾ ನೆರವೇರಿಸಿದ ಅಸ್ಸಯ್ಯದ್ ಸಯ್ಯದಲವಿ ತಂಙಳ್ ಓಲೆಮುಂಡೋವು ಮಾತನಾಡಿ, ಇಲ್ಲಿನ ಮಖಾಂಗೆ ಆಗಮಿಸಿ ಪ್ರಾರ್ಥನೆ ನಡೆಸುವವರು ಭಾಗ್ಯವಂತರು, ಈ ದರ್ಗಾದಲ್ಲಿ ಬಂದು ಪ್ರಾರ್ಥಿಸಿ, ಹರಕೆ ಹೊತ್ತು ತಮ್ಮ ಕಾರ್ಯಸಿದ್ದಿಗಳನ್ನು ಪೂರೈಸಿದ ಅದೆಷ್ಟೋ ಉದಾಹರಣೆಗಳಿವೆ ಎಂದರು. ಉರೂಸ್ ಕಾರ್ಯಕ್ರಮಕ್ಕೆ ಹಲವಾರು ಮಂದಿ ತನು ಮನ ಧನಗಳಿಂದ ಸಹಕರಿಸಿದ್ದು ಅವರೆಲ್ಲರಿಗೆ ಅಲ್ಲಾಹು ತಕ್ಕುದಾದ ಪ್ರತಿಫಲ ನೀಡಲಿದ್ದಾನೆ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ನಮ್ಮ ಜೀವನ ಶೈಲಿ ಇತರರಿಗೆ ಇಷ್ಟವಾಗಬೇಕು – ಝೈನುಲ್ ಆಬಿದೀನ್ ತಂಙಳ್:
ಉದ್ಘಾಟಿಸಿದ ಅಸ್ಸಯ್ಯದ್ ಝೈನುಲ್ ಆಬಿದೀನ್ ತಂಳ್ ದುಗ್ಗಲಡ್ಕ ಮಾತನಾಡಿ, ಇಸ್ಲಾಂ ನಮಗೆ ಕಲ್ಪಿಸಿದ ರೀತಿಯಲ್ಲಿ ನಾವು ಜೀವನ ನಡೆಸಿದಾಗ ನಾವು ಎಲ್ಲರಿಂದಲೂ ಪ್ರೀತಿ ಗಳಿಸಲು ಸಾಧ್ಯವಾಗುತ್ತದೆ, ನಮ್ಮ ಜೀವನ ಶೈಲಿ ಇತರರಿಗೆ ಇಷ್ಟವಾಗುವ ರೀತಿಯಲ್ಲಿರಬೇಕೇ ವಿನಃ ಯಾರೂ ದ್ವೇಷಿಸುವ ಜೀವನ ನಮ್ಮದಾಗಬಾರದು ಎಂದು ಹೇಳಿದರು. ಅಲ್ಲಾಹನ ಔಲಿಯಾಗಳು, ಪೂರ್ವಿಕ ಪಂಡಿತರು ಅಲ್ಲಾಹನ ಹಾದಿಯಲ್ಲಿ ತಮ್ಮ ಜೀವನ ಮುಡಿಪಾಗಿಟ್ಟ ಕಾರಣಕ್ಕೆ ಅವರ ಮಹಾತ್ಮರಾಗಿ ಅಲ್ಲಾಹನ ಇಷ್ಟದಾಸರಾಗಲು ಸಾಧ್ಯವಾಗಿದೆ, ಕೆಡುಕು ಇಲ್ಲದ ಜೀವನ ನಡೆಸಲು ಪ್ರತಿಯೊಬ್ಬರೂ ಪ್ರಯತ್ನಿಸಿ ಎಂದು ಅವರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಹಾಗೂ ಕೆಯ್ಯೂರು ಗ್ರಾ.ಪಂ ಮಾಜಿ ಸದಸ್ಯ ಎ.ಕೆ ಜಯರಾಮ ರೈ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉರೂಸ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲ್, ಕೆಯ್ಯೂರು ಗ್ರಾ.ಪಂ ಸದಸ್ಯ ಹಾಜಿ ಅಬ್ದುಲ್ ಖಾದರ್ ಮೇರ್ಲ, ಪ್ರಮುಖರಾದ ಯಾಕೂಬ್ ಮುಲಾರ್, ಅಬೂಬಕ್ಕರ್ ದಾರಿಮಿ, ಇಬ್ರಾಹಿಂ ಹಾಜಿ, ಅಬ್ದುಲ್ಲತೀಫ್ ಇರ್ಫಾನಿ, ಪಿ.ಕೆ ಮಹಮ್ಮದ್ ಕೂಡುರಸ್ತೆ, ಝೈನುದ್ದೀನ್ ಹಾಜಿ ಜೆ.ಎಸ್, ಅಬ್ದುಲ್ ರಝಾಕ್, ಅಬ್ಬಾಸ್ ದಾರಿಮಿ ಕೆಲಿಂಜ, ಮಾಹಿನ್ ಹಾಜಿ ಬಾಳಾಯ, ಉಮ್ಮರ್ ಮುಸ್ಲಿಯಾರ್, ಇಬ್ರಾಹಿಂ ಕೊಂಬಮೂಲೆ ಉಪಸ್ಥಿತರಿದ್ದರು. ಜಮಾಅತ್ ಕಮಿಟಿ ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಉರೂಸ್ ಕಮಿಟಿ ಕಾರ್ಯದರ್ಶಿ ಹಂಝ ಎಲಿಯ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅಬ್ಬಾಸ್ ಮದನಿ ಸ್ವಾಗತಿಸಿದರು. ಕೆ.ಎಂ ಹನೀ- ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.
ಮತ ಪ್ರವಚನ ಸಮಾರೋಪ-ನೌಶಾದ್ ಬಾಖವಿ ಪ್ರಭಾಷಣ:
ಮಾ.2ರಂದು ರಾತ್ರಿ ಮತ ಪ್ರವಚನ ಸಮಾರೋಪ ನಡೆಯಿತು. ಅಸ್ಸಯ್ಯದ್ ಸಯ್ಯದಲವಿ ತಂಳ್ ಓಲೆಮುಂಡೋವು ಅಧ್ಯಕ್ಷತೆ ವಹಿಸಿ ದುವಾ ನೆರವೇರಿಸಿದರು. ಮುಖ್ಯ ಪ್ರಭಾಷಣ ನಡೆಸಿದ ಅಂತರ್ರಾಷ್ಟ್ರೀಯ ಖ್ಯಾತಿಯ ಪ್ರಭಾಷಣಗಾರ ಎ.ಎಂ ನೌಶಾದ್ ಬಾಖವಿಯವರು ದಾನ ಮಾಡುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು, ನಮ್ಮನ್ನು ವಿಪತ್ತುಗಳಿಂದ ರಕ್ಷಿಸುವ ಪವರ್ ದಾನಕ್ಕಿದೆ ಎಂದು ಹೇಳಿದರು. ಇಸ್ಲಾಂ ಆಜ್ಞಾಪಿಸಿದ ರೀತಿಯಲ್ಲಿ ಜೀವನ ನಡೆಸಿದರೆ ಮಾತ್ರ ಇಹಪರಗಳಲ್ಲಿ ರಕ್ಷೆ ಹೊಂದಲು ಸಾಧ್ಯ ಎಂದ ಅವರು ಪರಿಶುದ್ದ ಜೀವನ ನಡೆಸಲು ಪ್ರಯತ್ನಿಸಿ ಎಂದು ಹೇಳಿದರು. ವೇದಿಕೆಯಲ್ಲಿ ಉರೂಸ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಎರಬೈಲ್, ವಿಧ್ವಾಂಸ ಮಹಮೂದುಲ್ ಫಾಝಿ ಓಲೆಮುಂಡೋವು, ಓಲೆಮುಂಡೋವು ಮಸೀದಿಯ ಸಹ ಖತೀಬ್ ಹಸನ್ ಬಾಖವಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪ್ರಮುಖರಾದ ಯೂಸುಫ್ ಹಾಜಿ ಕೈಕಾರ, ಇಬ್ರಾಹಿಂ ಮುಲಾರ್, ಅಬೂಬಕ್ಕರ್ ಸಾರೆಪುಣಿ, ಶರೀಫ್ ಅಜ್ಜಿಕ್ಕಲ್ ಉಪಸ್ಥಿತರಿದ್ದರು. ಅಬ್ಬಾಸ್ ದಾರಿಮಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಮುಖ್ಯ ಅತಿಥಿಯಾಗಿದ್ದ ನಾಫಿಸ್ ಗ್ರೂಪ್ ದುಬೈ ಇದರ ಆಡಳಿತ ನಿರ್ದೇಶಕರಾದ ಹಾಜಿ ಅಬೂ ಸ್ವಾಲಿಹ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಅಸ್ಸಯ್ಯದ್ ಸಯ್ಯದಲವಿ ತಂಳ್ ಓಲೆಮುಂಡೋವು ಹಾಗೂ ಎ.ಎಂ ನೌಶಾದ್ ಬಾಖವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕ ಅಶೋಕ್ ರೈ ಭೇಟಿ:
ಸಂಜೆ ವೇಳೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಓಲೆಮುಂಡೋವು ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಎ.ಕೆ ಜಯರಾಮ ರೈ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಲತೀಫ್ ಟಿ.ಎ ಹಾಗೂ ಜಮಾಅತ್ ಕಮಿಟಿಯವರು, ಉರೂಸ್ ಕಮಿಟಿಯವರು ಮತ್ತಿತರರು ಉಪಸ್ಥಿತರಿದ್ದರು.
ನಿರೀಕ್ಷೆಗೂ ಮೀರಿದ ಜನಸ್ತೋಮ:
ಉದಯಾಸ್ತಮಾನ ಉರೂಸ್ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಜಿಲ್ಲೆಯ ನಾನಾ ಭಾಗಗಳಿಂದ ಮತ್ತು ಇತರ ಕಡೆಗಳಿಂದ ಸುಮಾರು 20 ಸಾವಿರಕ್ಕೂ ಅಽಕ ಮಂದಿ ಆಗಮಿಸಿ ಝಿಯಾರತ್ ನೆರವೇರಿಸಿದರು. ಬೆಳಗ್ಗಿನಿಂದ ಸಂಜೆ ವರೆಗೂ ಭಾರೀ ಸಂಖ್ಯೆಯಲ್ಲಿ ಜನರು ಬರುತ್ತಿದ್ದ ದೃಶ್ಯ ಕಂಡು ಬಂತು. ಉರೂಸ್ ಕಮಿಟಿಯವರು, ಜಮಾಅತ್ ಕಮಿಟಿಯವರು, ಆಸುಪಾಸಿನ ಜಮಾಅತ್ನವರು, ಸ್ವಯಂ ಸೇವಕರು, ಊರವರು, ವಿವಿಧ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅನ್ನದಾನದ ವೇಳೆ ಸಾಕಷ್ಟು ಜನರು ಆಗಮಿಸಿದ್ದರೂ ಕೂಡಾ ಸ್ವಯಂ ಸೇವಕರು ಎಲ್ಲವನ್ನೂ ಉತ್ತಮ ರೀತಿಯಲ್ಲಿ ನಿಭಾಯಿಸುವ ಮೂಲಕ ಅನ್ನದಾನ ಹಾಗೂ ಒಟ್ಟು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಮೂರು ವರ್ಷಕ್ಕೊಮ್ಮೆ ಓಲೆಮುಂಡೋವು ಉರೂಸ್ ನಡೆಯುತ್ತಿದ್ದು, ಆ ಎಲ್ಲಾ ಸಂದರ್ಭಗಳಲ್ಲೂ ಇಲ್ಲಿಗೆ ಬೃಹತ್ ಜನಸ್ತೋಮವೇ ಹರಿದು ಬರುತ್ತಿದೆ.