ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ 8ನೇ ವರ್ಷದ ‘ನರ್ತನಾವರ್ತನ’

0

ಡಾ. ಹರಿಕೃಷ್ಣ ಪಾಣಾಜೆಯವರಿಗೆ ಕಲಾಶ್ರಯ ಪ್ರಶಸ್ತಿ ಪ್ರದಾನ-ದೆಹಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಮೂವರಿಗೆ ಗೌರವಾರ್ಪಣೆ

ಪುತ್ತೂರು: ಕಲೆಗಾಗಿ ಜೀವನ ಮುಡಿಪಾಗಿಟ್ಟವರು ನಮ್ಮಲ್ಲೂ ಇದ್ದಾರೆ. ಈ ನಿಟ್ಟಿನಲ್ಲಿ ಹಿತ್ತಲ ಗಿಡ ಮದ್ದಲ್ಲ ಎಂಬ ಮಾತನ್ನು ಬದಿಗಿಟ್ಟು ಹಿತ್ತಲ ಗಿಡವೇ ಮದ್ದು ಎಂಬ ಸತ್ಯವನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.


ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಸಾಂಸ್ಕೃತಿಕ ಸಚಿವಾಲಯದ ಸಹಕಾರದೊಂದಿಗೆ ಮಾ.3ರಂದು ಸಂಜೆ ಬಪ್ಪಳಿಗೆ ಜೈನ ಭವನದಲ್ಲಿ ನಡೆದ 8ನೇ ವರ್ಷದ ’ನರ್ತನಾವರ್ತನಾ-2024’ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯವಾಗಿ ಸಭಾ ವೇದಿಕೆಯಲ್ಲಿ ಬರುವ ಅತಿಥಿಗಳಿಗೆ ಬದಲಾಗಿ ಇವತ್ತು ಬಂದಿರುವ ಅತಿಥಿಗಳು ಕಲಾಪ್ರಿಯರಾಗಿರುವುದರಿಂದ ಇದೊಂದು ಪೂರ್ಣ ಮಟ್ಟದ ಕಲಾ ಸಭೆಯಾಗಿದೆ. ನನ್ನ ಆತ್ಮೀಯ ಶಿಷ್ಯರಲ್ಲಿ ಒಬ್ಬರಾದ ದೀಪಕ್ ಕುಮಾರ್‌ರವರು ಕಲೆಯ ಜೊತೆಗೆ ಸದ್ಗುಣ ಸಂಪನ್ನ ಶೀಲತೆ, ಅಧ್ಯಯನ ಶೀಲತೆ ಹೊಂದಿದ್ದು, ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಅವರ ಕುಟುಂಬವೇ ಕಲೆಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಹಿತ್ತಲ ಗಿಡ ಮದ್ದಲ್ಲ ಎಂಬ ಮಾತನ್ನು ಬದಿಗಿಟ್ಟು, ಹಿತ್ತಲ ಗಿಡವೇ ಮದ್ದು. ನಮ್ಮಲ್ಲೂ ಕಲಾವಿದರಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡಬೇಕೆಂದ ಅವರು ಸಂಪೂರ್ಣ ರಾಮಾಯಣವನ್ನು ಕೇವಲ ಒಂದು ಗಂಟೆಯಲ್ಲಿ ಪೂರ್ಣವಾಗಿ ಶಾಸಬದ್ದವಾಗಿ, ಲಯಬದ್ಧವಾಗಿ ಮಾಡಿ ತೋರಿಸಿರುವ ದೀಪಕ್ ದಂಪತಿಯ ಸಾಧನೆಯನ್ನು ಎಲ್ಲರು ತಿಳಿಯಬೇಕೆಂದರು.

ಕಲಾವಿದ ದೇವರಿಗೆ ಸಮಾನ:
ಕಲಾಶ್ರಯ ಪ್ರಶಸ್ತಿ ಪುರಸ್ಕೃತ ಎಸ್‌ಡಿಪಿ ರೆಮಿಡಿಸ್ ಆಂಡ್ ರಿಸರ್ಚ್ ಸೆಂಟರ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಡಾ. ಹರಿಕೃಷ್ಣ ಪಾಣಾಜೆ ಅವರು ಮಾತನಾಡಿ, ಕಲೆ ಎಲ್ಲರಿಗೂ ಒಳಿಯುವುದಿಲ್ಲ. ದೈವತ್ವ ಇದ್ದವರಿಗೆ ಮಾತ್ರ ಒಲಿಯುವುದು. ಹಾಗಾಗಿ ಕಲಾವಿದ ದೇವರಿಗೆ ಸಮಾನ. ಕಲೆಯು ಸರಿಯಾಗಿ ಬೆಳಗಬೇಕಾದರೆ ಉತ್ತಮ ಕಲಾವಿದರು, ಪ್ರೇಕ್ಷಕರು, ಪೋಷಕರು ಬೇಕು. ಈ ಎಲ್ಲಾ ವಿಚಾರಗಳು ದೀಪಕ್ ಕುಮಾರ್ ಅವರಲ್ಲಿದೆ. ಪ್ರತಿ ತಿಂಗಳು, ವಾರದಲ್ಲಿ ಒಳ್ಳೆಯ ಕಲಾವಿದರನ್ನು ಕರೆಸಿ ಅವರಿಂದ ತಮ್ಮ ಶಿಷ್ಯಂದಿರಿಗೆ ಉತ್ತಮ ಕಲಾ ಕಾರ್ಯಕ್ರಮ ನೀಡುತ್ತಿದ್ದಾರೆ. ಹಾಗಾಗಿ ದೀಪಕ್ ಕುಮಾರ್ ಅವರು ಉತ್ತಮ ಕಲಾಶ್ರಯರಾಗಿದ್ದಾರೆ ಎಂದ ಅವರು ಇವತ್ತು ಗುರುಗಳಿರುವ ವೇದಿಕೆಯಲ್ಲಿ ನನ್ನನ್ನು ಗುರುತಿಸಿರುವುದು ಸಂತೋಷ ಆಗಿದೆ ಎಂದರು.

ಭಾರತೀಯ ಪರಂಪರೆಯ ಕಲೆಯಲ್ಲಿ ಏನಾದರೊಂದು ವಿಶೇಷತೆ ಇದೆ:
ಅಭ್ಯಾಗತರಾಗಿ ಭಾಗವಹಿಸಿದ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಎಂ.ಡಿ. ಡಾ. ಸುಧಾ ಎಸ್ ರಾವ್ ಅವರು ಮಾತನಾಡಿ, ಭರತನಾಟ್ಯದಲ್ಲಿ ಯೋಗಾಸನ ಭಂಗಿಗಳು, ಮುದ್ರೆಗಳು ಆರೋಗ್ಯದ ದೃಷ್ಟಿಯಿಂದ ಉತ್ತಮ. ಭಾರತೀಯ ಪರಂಪರೆಯಲ್ಲಿ ಆರೋಗ್ಯ ಮತ್ತು ಆಧ್ಯಾತ್ಮದ ವಿಶೇಷತೆ ಅಡಗಿದೆ. ಇದನ್ನು ಗುರುತಿಸುವ ರೀತಿಯನ್ನು ನಾವು ಕಂಡುಕೊಳ್ಳಬೇಕು ಎಂದರು.

ಡಾ. ಹರಿಕೃಷ್ಣ ಪಾಣಾಜೆ ಅವರಿಗೆ ಕಲಾಶ್ರಯ ಪ್ರಶಸ್ತಿ:
ಪುತ್ತೂರಿನಲ್ಲಿ ಕಲೆಯ ಆರಾಧರು ಮತ್ತು ಪೋಷಕರಾಗಿರುವ ಎಸ್‌ಡಿಪಿ ರೆಮಿಡಿಸ್ ಆಂಡ್ ರಿಸರ್ಚ್ ಸೆಂಟರ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಡಾ. ಹರಿಕೃಷ್ಣ ಪಾಣಾಜೆ ಅವರಿಗೆ ’ಕಲಾಶ್ರಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನಟರಾಜನ ವಿಗ್ರಹ, ಶಲ್ಯ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ದೆಹಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಮೂವರಿಗೆ ಗೌರವ:
ದೆಹಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಗಳಾದ ಪ್ರಣಮ್ಯ, ಶಮಾ ಚಂದುಕೂಡ್ಲು, ವಿದುಷಿ ಸ್ವಾತಿ ಅವರನ್ನು ಸಂಸ್ಥೆಯಿಂದ ಗೌರವಿಸಲಾಯಿತು. ಈ ಸ್ಪರ್ಧಾ ಕಾರ್ಯಕ್ರಮದ ಮೂಲಕ ಆಯ್ಕೆಗೊಂಡ ವಿದುಷಿ ಸೌಜನ್ಯ, ಅಪೂರ್ವ ಗೌರಿ ದೇವಸ್ಯ, ಅಕ್ಷತಾ ಕೆ. ನಿಧಿ ಎನ್, ವಿಭಾಶ್ರೀ ಅವರನ್ನು ಗೌರವಿಸಲಾಯಿತು.

ಭರತನಾಟ್ಯ ಪ್ರಸ್ತುತಿ:
ಅಂತರ್ರಾಷ್ಟ್ರೀಯ ಖ್ಯಾತಿಯ ಮತ್ತು ಕಲಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಬೆಂಗಳೂರು ಮೂಲದ ಪಿ.ಪ್ರವೀಣ್ ಕುಮಾರ್ ಅವರಿಂದ ಭರತನಾಟ್ಯ ಪ್ರಸ್ತುತಿ ಸಖ ಪ್ರದರ್ಶನಗೊಂಡಿತು. ಇವರಿಗೆ ನಟುವಾಂಗದಲ್ಲಿ ಬೆಂಗಳೂರಿನ ಕೆ.ಎನ್.ನವ್ಯಶ್ರೀ, ಹಾಡುಗಾರಿಕೆಯಲ್ಲಿ ಆರ್ ರಘುರಾಮ್, ಮೃದಂಗದಲ್ಲಿ ಭವಾನಿಶಂಕರ್, ಕೊಳಲಿನಲ್ಲಿ ರಘುಸಿಂಹ ಅವರ ಸಹಕರಿಸಿದರು.

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೃತ್ಯಗುರು ವಿದುಷಿ ಪ್ರೀತಿಕಲಾ ದೀಪಕ್ ಕುಮಾರ್ ಪ್ರಾರ್ಥಿಸಿದರು. ತೇಜಸ್ವಿ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಶಶಿಪ್ರಭಾ, ನೃತ್ಯಗುರು ವಿದ್ವಾನ್ ಗಿರೀಶ್ ಕುಮಾರ್ ಉಪಸ್ಥಿತರಿದ್ದರು. ಆಪ್ತಚಂದ್ರ ಮುಳಿಯ, ಸುಪ್ರಜಾ ರಾವ್, ಸೃಷ್ಟಿ ಕಲಾವಿದರ ಪರಿಚಯ ಮಾಡಿದರು.

LEAVE A REPLY

Please enter your comment!
Please enter your name here