ಮಾ.7 ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶ – 20,000 ಮಂದಿ ಸೇರುವ ನಿರೀಕ್ಷೆ – ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ

0

ಪುತ್ತೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶವು ಮಾ.7ರಂದು ಕಿಲ್ಲೆಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಶಾಸಕರ ಕಚೇರಿಯಲ್ಲಿ ಮಾ.4ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯ ಸರಕಾರ ಆಯೋಜಿಸುವ ಫಲಾನುಭವಿಗಳ ಸಮಾವೇಶವು ಇಡೀ ರಾಜ್ಯದಾದ್ಯಂತ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ನಡೆಯಲಿದೆ. ದ.ಕ ಜಿಲ್ಲೆಯಲ್ಲಿ ಮಾ.5ರಿಂದ ಪ್ರಾರಂಭಗೊಂಡು ಮಾ.10ರ ತನಕ ನಡೆಯಲಿದೆ. ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಅವರೂ ಭಾಗವಹಿಸುವ ಸಾಧ್ಯತೆಗಳಿವೆ. ಸಮಾವೇಶವು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಮೂಲೆ ಮೂಲೆಗಳಿಂದ ಫಲಾನುಭವಿಗಳು ಆಗಮಿಸಲಿದ್ದು ಸಮಾವೇಶದಲ್ಲಿ ಸುಮಾರು 20,000 ಮಂದಿ ಸೇರುವ ನಿರೀಕ್ಷೆಯಿದೆ.

5 ಗ್ಯಾರಂಟಿ ಯೋಜನೆಗಳಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಕ್ತಿ ಯೋಜನೆಯ ಮೂಲಕ 81.90ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಇದರ ಒಟ್ಟು ಮೊತ್ತ ರೂ.17.88ಕೋಟಿ ಆಗಿದ್ದು ಅದನ್ನು ಸರಕಾರದಿಂದ ಸಾರಿಗೆ ನಿಗಮಕ್ಕೆ ಪಾವತಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ 59,727 ಮಂದಿ, ಗೃಹಜ್ಯೋತಿಯಲ್ಲಿ 30,000 ಮಂದಿ, ಅನ್ನಭಾಗ್ಯದಲ್ಲಿ 24,948 ಮಂದಿ, ಅಂತ್ಯೋದಯದಲ್ಲಿ 2,944 ಹಾಗೂ ಇತ್ತೀಚೆಗೆ ಆರಂಭಗೊಂಡಿರುವ ಯುವನಿಧಿಯಲ್ಲಿ 356 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಲ್ಲಿ ಶೇ.98 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ತಾಂತ್ರಿಕ ತೊಂದರೆಗಳಿಂದ ಕೆಲವು ಮಂದಿಗೆ ಬಾಕಿಯಿದೆ. ಫಲಾನುಭವಿಗಳ ಸಮಾವೇಶದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಾಗುತ್ತಿದ್ದು ಫಲಾನುಭವಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.

ಕೆಎಂಎಫ್‌ಗೆ ಕೆದಂಬಾಡಿಯಲ್ಲಿ 10.20ಎಕ್ರೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ ಕಂದಾಯ ಇಲಾಖೆಯುವರು ನಿಗದಿಪಡಿಸಿದ ದರದ ರೀತಿಯಲ್ಲಿ ಆ ಜಾಗಕ್ಕೆ ಸೆಂಟ್ಸ್‌ಗೆ ರೂ.3.52ಲಕ್ಷದಂತೆ ಒಟ್ಟು 10.20ಎಕ್ರೆಗೆ 15.9ಕೋಟಿ ದುಬಾರಿ ಮೊತ್ತವನ್ನು ನೀಡಬೇಕಾಗಿತ್ತು. ಈ ಬಗ್ಗೆ ಕ್ಯಾಬಿನೇಟ್‌ನಲ್ಲಿ ಚರ್ಚಿಸಿ ಪ್ರತಿ ಎಕರೆಗೆ ರೂ.4.75ಲಕ್ಷದಂತೆ ದರ ನಿಗದಿ ಪಡಿಸಿ ಒಟ್ಟು 10.20ಎಕ್ರೆಗೆ ರೂ.48.45 ಲಕ್ಷಕ್ಕೆ ಇಳಿಕೆ ಮಾಡಿ ದರವನ್ನು ಕ್ಯಾಬಿನೆಟ್ ಮಂಜೂರು ಮಾಡಿದೆ. ಇದಲ್ಲದೆ ಅದರ ಸಮೀಪವಿದ್ದ 4 ಎಕರೆ ಖಾಸಗಿ ಜಾಗವನ್ನು ಕೆಎಂಎಫ್‌ನವರೇ ಖರೀಸಿದ್ದಾರೆ. ಈಗ ಕೆಎಂಎಫ್‌ಗೆ ಒಟ್ಟು 14.20ಎಕ್ರೆ ಜಾಗವಾಗಿದೆ. ಮುಂದಿನ ಮಹಾಸಭೆಯಲ್ಲಿ ತೀರ್ಮಾನಕೈಗೊಂಡು ರೂ.70ಲಕ್ಷದಲ್ಲಿ ಘಟಕದ ಕಾಮಗಾರಿ ಆರಂಭವಾಗಲಿದೆ ಎಂದರು.

ಬಹುಗ್ರಾಮ ನೀರು ಯೋಜನೆಯಲ್ಲಿ 78 ಗ್ರಾಮಗಳಿಗೆ ನೀರು:
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ರೂ.1010ಕೋಟಿ ಮಂಜೂರಾಗಿದೆ. ಇದರಲ್ಲಿ ರೂ.70ಕೋಟಿ ಈಗಾಗಲೇ ಗುತ್ತಿಗೆದಾರರಿಗೆ ಪಾವತಿಯಾಗಿದೆ. ಶೇ.70ರಷ್ಟು ಸರ್ವೆ ಕಾರ್ಯಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿಗೆ ಶಿಲಾನ್ಯಾಸ ನೆರವೇರಲಿದೆ. ಈ ಯೋಜನೆಯ ಮೂಲಕ ಕೆದಿಲದಲ್ಲಿ 3ಕೋಟಿ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣವಾಗಲಿದೆ. ಜೊತೆಗೆ 6 ಸಬ್ ಟ್ಯಾಂಕ್‌ಗಳು ನಿರ್ಮಾಣವಾಗಲಿದೆ. ಪುತ್ತೂರು, ಸುಳ್ಯ ತಾಲೂಕು ಸುಬ್ರಹ್ಮಣ್ಯ ಸೇರಿದಂತೆ ಒಟ್ಟು 78 ಗ್ರಾಮಗಳಿಗೆ ಈ ಯೋಜನೆಯ ಮೂಲಕ ನೀರು ಸರಬರಾಜು ಆಗಲಿದೆ. ಕಡಬಕ್ಕೆ ಆಲಂಕಾರು ಆಣೆಕಟ್ಟು ಮೂಲಕ ನೀರು ಸರಬರಾಜಿಗೆ ರೂ.360ಕೋಟಿ ಬಿಡುಡಗೆಯಾಗಿದೆ. ಒಟ್ಟು 570ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಇದರಲ್ಲಿ ರೂ.370ಕೋಟಿಯೂ ಉಪ್ಪಿನಂಗಡಿ ಕೂಡಲ ಸಂಗಮದಲ್ಲಿ ಕಿಂಡಿ ಆಣೆಕಟ್ಟು, ಬೋಟಿಂಗ್, ಕೆಆರ್‌ಎಸ್ ಮಾದರಿಯಲ್ಲಿ ಕಾರಂಜಿ, ಲೈಟಿಂಗ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು 50:50 ಅನುಪಾತದಲ್ಲಿ ಅನುದಾನ ಬಿಡುಗಡೆಯಾಗಲಿದೆ.

ಪುತ್ತೂರು ಸರಕಾರಿ ಆಸ್ಪತ್ರೆಗೆ ಆಪರೇಷನ್ ಥಿಯೇಟರ್, ಹೆಚ್ಚುವರಿ ಕೊಠಡಿಗಳು ಸೇರಿದಂತೆ ತುರ್ತು ಕಾಮಗಾರಿಗಳಿಗೆ ರೂ.2.80ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದರ ಟೆಂಡರ್ ಆಗಿರುತ್ತದೆ. ಕೊಯಿಲ ಪಶುವೈದ್ಯಕೀಯ ಕಾಲೇಜಿಗೆ ಎಲ್ಲಾ ಸೌಲಭ್ಯಗಳ ಪೂರೈಕೆಗೆ ರೂ.140ಕೋಟಿ ಮಂಜೂರಾಗಿದೆ. ಕಾಲೇಜು ಪ್ರಾರಂಭಗೊಂಡರೆ 3,200ವಿದ್ಯಾರ್ಥಿಳು ವಿದ್ಯಾಭ್ಯಾಸ ಪಡೆಯಲಿದ್ದಾರೆ. ಈ ಕಾಲೇಜು ಕೇಂದ್ರ ಸರಕಾರದ ನ್ಯಾಷನಲ್ ವೆಟರ್ನರಿ ಕೌನ್ಸಿಲ್‌ಗೆ ಸೇರ್ಪಡೆಗೊಂಡರೆ ಇದು ಅಂತಾರಾಷ್ಟ್ರೀಯ ಕಾಲೇಜು ಆಗಲಿದ್ದು ವಿದೇಶಗಳ ವಿದ್ಯಾರ್ಥಿಗಳೂ ಇಲ್ಲಿ ವಿದ್ಯಾಭ್ಯಾಸ ಪಡೆಯಲಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು 50:50ಅನುಪಾತದಲ್ಲಿ ರೂ.9000ಕೋಟಿ ಅನುದಾನ ನೀಡಲಿದ್ದಾರೆ.

ಮುಂದಿನ ಬಜೆಟ್‌ನಲ್ಲಿ 100 ಪರ್ಸೆಂಟ್ ಮೆಡಿಕಲ್ ಕಾಲೇಜು:
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭಿಸುವಂತೆ ಮುಖ್ಯಮಂತ್ರಿಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸಿದ್ದೇನೆ. ವಿಧಾನ ಸಭೆಯ ಪ್ರತಿ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೇನೆ. ಈ ಬಾರಿಯ ಬಜೆಟ್‌ನಲ್ಲಿ ರೂ.56,000ಕೋಟಿ ಗ್ಯಾರಂಟಿ ಯೋಜನೆಗಳಿಗೆ ನೀಡಲಾಗಿದೆ. ಹೀಗಾಗಿ ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಿನ ಬಜೆಟ್‌ನಲ್ಲಿ ಶೇ.100ರಷ್ಟು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮೆಡಿಕಲ್ ಕಾಲೇಜು ಸ್ಥಾಪಿಸಲು ನಿರಂತರವಾಗಿ ಒತ್ತಡ ಹಾಕುತ್ತಿದ್ದು ಮುಖ್ಯಮಂತ್ರಿಗಳು ನನ್ನ ಮುಖ ನೋಡಿದ ಕೂಡಲೇ ಮೆಡಿಕಲ್ ಕಾಲೇಜು ಕೇಳುವವರು ಬಂದರು ಎನ್ನುತ್ತಿದ್ದಾರೆ ಎಂದರು.

ಚೆಲ್ಯಡ್ಕ ಸೇತುವೆಗೆ ರೂ.3ಕೋಟಿ ಮಂಜೂರು:
ಹಲವು ವರ್ಷಗಳ ಬೇಡಿಕೆಯಾದ ಚೆಲ್ಯಡ್ಕದ ಮುಳುಗು ಸೇತುವೆಗೆ ಹೊಸ ಸೇತುವೆ ನಿರ್ಮಾಣಕ್ಕೆ ರೂ.3ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಅಪಘಾತ ವಲಯವಾದ ಸಂಟ್ಯಾರ್‌ನ ಬಳಕ್ಕದಲ್ಲಿ ರಸ್ತೆ ದುರಸ್ಥಿಯಾಗುತ್ತಿದೆ. ನಗರ ಸಭೆ ವ್ಯಾಪ್ತಿಯಲ್ಲಿ ಕಡಿಯುವ ನೀರುವ ಪೂರೈಕೆಯ ಜಲಸಿರಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಮಾರ್ಚ್ ಅಂತ್ಯಕ್ಕೆ ಗಡುವು ನೀಡಲಾಗಿದೆ. ಕಾಮಗಾರಿ ಪೂರ್ಣಗೊಂಡು ಮುಂದಿನ 5 ವರ್ಷಗಳಲ್ಲಿ ನಿರ್ವಹಣೆಯನ್ನು ಗುತ್ತಿಗೆದಾರರೇ ಮಾಡಲಿದ್ದಾರೆ. ಈಗಿರುವ ನೀರಿನ ಸಂಗ್ರಹಣೆಯಂತೆ ನಗರ ಪ್ರದೇಶಕ್ಕೆ ನೀರಿನ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಈಗಿರುವ ಆಣೆಕಟ್ಟನ್ನು ಎತ್ತರ ಮಡಲು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯಾಗಿ ಕಠಾರದಲ್ಲಿ 9 ಮೀಟರ್ ಎತ್ತರದ ಆಣೆಕಟ್ಟು ನಿರ್ಮಿಸಲಾಗುತ್ತಿದ್ದು ಸುಮಾರು 9 ಕಿ.ಮೀ ನೀರು ಸಂಗ್ರಹವಾಗಲಿದೆ. ಇದರಿಂದ ಅತರ್ಜಲ ವೃದ್ಧಿಯಾಗಲಿದೆ. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಹಲವು ದೂರುಗಳು ಬರುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಈಗಲೇ ಅಗತ್ಯ ಕ್ರಮಕೈಗೊಳ್ಳಲು ಎಲ್ಲಾ ಪಿಡಿಓಗಳಿಗೆ ಸೂಚನೆ ನೀಡಲಾಗಿದೆ. ಇಲ್ಲದಿದ್ದರೆ ಮುಂದೆ ಪಿಡಿಓಗಳೇ ಹೊಣೆಗಾರರಾಗಲಿದ್ದಾರೆ ಎಂದರು.

ಗುತ್ತಿಗೆದಾರ ಕಪ್ಪು ಪಟ್ಟಿಗೆ:
ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ, ನರಿಮೊಗರು ಪ್ರದೇಶಗಳಲ್ಲಿ ರಸ್ತೆ ಕಾಮಗಾರಿ ಕುಂಠಿತಗೊಂಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಕಾಮಗಾರಿಗೆ ಮಾ.4 ಅಂತಿಮ ಗಡುವು ನೀಡಲಾಗಿದೆ. ಇನ್ನು ಕಾಮಗಾರಿ ಪ್ರಾರಂಭಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here