ಪುತ್ತೂರು: ಮಂಗಳೂರು ಲೋಕಾಯುಕ್ತ ವಿಭಾಗ ಪೊಲೀಸ್ ಅಧೀಕ್ಷಕರು, ಉಪಾಧೀಕ್ಷರು ಹಾಗೂ ನಿರೀಕ್ಷಕರು ಮಾ.13ರಂದು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿಗಳನ್ನು ವಿತರಿಸಿ, ನಿಗದಿತ ನಮೂನೆಯ ಅರ್ಜಿಯನ್ನು ಭರ್ತಿಮಾಡಿ ಅಫಿದಾವತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಇದಲ್ಲದೇ ಉಳಿದ ದಿನಗಳಲ್ಲಿ ಕಚೇರಿ ವೇಳೆಯಲ್ಲಿ ಸಾರ್ವಜನಿಕರು ದೂರು ಅರ್ಜಿಗಳನ್ನು ನೀಡಬಹುದಾಗಿದೆ. ಮಾತ್ರವಲ್ಲದೆ ಅರ್ಜಿದಾರರು ನಮೂನೆ 1 ಮತ್ತು 2ರಲ್ಲಿ ಭರ್ತಿ ಮಾಡಿದ ಅಫಿದಾವಿತ್ ಮಾಡಿಸಿ ನೇರವಾಗಿ ಅಥವಾ ಅಂಚೆ ಮೂಲಕ ಮಾನ್ಯ ನಿಬಂಧಕರು, ಕರ್ನಾಟಕ ಲೋಕಾಯುಕ್ತ ಬಹುಮಹಡಿ ಕಟ್ಟಡ, ಅಂಬೇಡ್ಕರ್ ರಸ್ತೆ ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಪ್ರಕಟಣೆಯಲ್ಲಿ ತಿಳಿಸಿದೆ.