ಮಹಾರಾಷ್ಟ್ರದಲ್ಲಿ ಯಕ್ಷಗಾನ, ಭರತನಾಟ್ಯ, ಸಂಗೀತದಲ್ಲಿ ಮಿಂಚುತ್ತಿರುವ ಸಾನ್ವಿ, ಮಾನ್ವಿ ಸಹೋದರಿಯರು

0

ನೆಲ್ಯಾಡಿ: ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಬೆರ್ಬಳ್ಳಿ ಶಾಂತಪ್ಪ ಶೆಟ್ಟಿ ಮತ್ತು ಯಶೋಧ ಶೆಟ್ಟಿಯವರ ಪುತ್ರಿಯಾದ ಮುಂಬೈಯಲ್ಲಿ ನೆಲೆಸಿರುವ ಸೌಮ್ಯ ಮನೋಹರ ಶೆಟ್ಟಿಯವರ ಪುತ್ರಿಯರಾದ ಸಾನ್ವಿ ಎಮ್., ಶೆಟ್ಟಿ ಹಾಗೂ ಮಾನ್ವಿ ಎಂ.ಶೆಟ್ಟಿ ಬಹುಮುಖ ಪ್ರತಿಭಾವಂತರು. ಯಕ್ಷಗಾನ, ಭರತನಾಟ್ಯ, ಸಂಗೀತದಲ್ಲಿ ಅಮೋಘ ಸಾಧನೆ ಮಾಡಿರುವ ಈ ಸಹೋದರಿಯರು ಮುಂಬೈಯಲ್ಲಿ ಕರಾವಳಿ ಕರ್ನಾಟಕ ಕಲೆಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಮನಸೂರೆಗೊಂಡಿದ್ದಾರೆ.

ಮಹಾರಾಷ್ಟ್ರ ಡೊಂಬಿವಿಲಿಯ ಡಾನ್ ಬಾಸ್ಕೋ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಾನ್ವಿ ಎಂ.ಶೆಟ್ಟಿ 9ನೇ ತರಗತಿಯಲ್ಲಿ ಹಾಗೂ ಸಾನ್ವಿ ಎಮ್.ಶೆಟ್ಟಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಹೋದರಿಯರು ಯಕ್ಷಗಾನ, ಭರತನಾಟ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆಯ ಮೂಲಕ ಮುಂಬೈ ಜನರ ಮನ ಗೆದ್ದಿದ್ದಾರೆ. ಇವರು ಯಕ್ಷಗಾನ ನಾಟ್ಯ ತರಬೇತಿಯನ್ನು ನಾಟ್ಯ ಗುರುಗಳಾದ ಸದಾನಂದ ಶೆಟ್ಟಿ ಕಟೀಲು ಇವರಿಂದ ಪಡೆದುಕೊಂಡಿದ್ದಾರೆ. ದೊಂಬಿವಿಲಿಯಲ್ಲಿರುವ ಗಂಧರ್ವ ನೃತ್ಯ ಶಾಲೆಯ ಶಿಕ್ಷಕಿ ಇಂದುಮತಿಯವರಿಂದ ಸತತ 7 ವರ್ಷಗಳಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ತಾರಾ ರಮೇಶ್‌ರವರ ಬಳಿ ಅಭ್ಯಾಸ ಮಾಡುತ್ತಿದ್ದಾರೆ. ಕಲಾಂಜಲಿ ಸ್ಕೂಲ್ ಆಫ್ ಆರ್ಟ್ಸ್ ಶಾಲೆಯಲ್ಲಿ ಸಂಗೀತ ನೃತ್ಯ ತರಬೇತಿ ಪಡೆಯುತ್ತಿದ್ದಾರೆ.

ಯೋಗಕ್ಕೂ ಸೈ:
ಯಕ್ಷಗಾನ, ಭರತನಾಟ್ಯ, ಸಂಗೀತದ ಮೂಲಕ ಮಿಂಚುತ್ತಿರುವ ಈ ಪ್ರತಿಭೆಗಳೂ ಯೋಗಕ್ಕೂ ಸೈ ಎನಿಸಿಕೊಂಡಿದ್ದಾರೆ. ಆನ್‌ಲೈನ್ ಕ್ಲಾಸ್‌ಗಳ ಮೂಲಕ ಯೋಗಭ್ಯಾಸವನ್ನು ಯೋಗ ತರಬೇತಿ ಕೇಂದ್ರ ಸುಳ್ಯ ಇದರ ತರಬೇತುದಾರರಾದ ಶರತ್ ಮರ್ಗಿಲಡ್ಕರವರಿಂದ ಪಡೆದುಕೊಂಡಿದ್ದಾರೆ.

ಯಾವುದೇ ಪಾತ್ರಕ್ಕೂ ಸೈ:
ಯಕ್ಷಗಾನದಲ್ಲಿ ಯಾವುದೇ ಪಾತ್ರವನ್ನು ನಿರ್ಭೀತಿಯಿಂದ ಲೀಲಾಜಾಲವಾಗಿ ಅಭಿನಯಿಸುವುದರ ಮೂಲಕ ಮುಂಬೈ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರ ಪಾತ್ರಗಳು ದೇವೇಂದ್ರ, ಯಮ, ಹನುಮಂತ, ನಿರುತಿ, ಜಾಂಬವತಿ ಕಲ್ಯಾಣದ ಜಾಂಬವತಿ ಮುಂತಾದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಕಲಾಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಮುಂಬೈ ಬಂಟರ ಸಂಘ, ಕನ್ನಡ ಸಂಘಗಳು ಗೌರವಿಸಿ ಪ್ರೋತ್ಸಾಹವನ್ನು ನೀಡುತ್ತಿದೆ.

ಕಲಿಕೆಯಲ್ಲೂ ಮುಂದಿರುವ ಇವರು ಶೇ.90ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡು ಉತ್ತೀರ್ಣರಾಗುತ್ತಿದ್ದಾರೆ. ಇವರ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಬೆಳಗಲಿ. ನಮ್ಮೂರಿಗೆ ಕೀರ್ತಿಯನ್ನು ತರಲಿ ಎಂಬುದೇ ಕಲಾಭಿಮಾನಿಗಳ ಅಪೇಕ್ಷೆಯಾಗಿದೆ. ಇವರು ಬಜಪೆ ಪೆರ್ಮುದೆ ಮಂಜುಟ್ಟಿ ಬಾಳಿಕೆ ಮನೆಯ ಮನೋಹರ ಶೆಟ್ಟಿ ಮತ್ತು ಇಚ್ಲಂಪಾಡಿ ಬೆರ್ಬಳ್ಳಿ ಸೌಮ್ಯ ಮನೋಹರ ಶೆಟ್ಟಿಯವರ ಪುತ್ರಿಯರು.

LEAVE A REPLY

Please enter your comment!
Please enter your name here