80 ವರ್ಷ ಮೇಲ್ಪಟವರಿಗೆ ಸಂಘದಿಂದ ಗೌರವ
ಪುತ್ತೂರು: ಪುತ್ತೂರಿನಲ್ಲಿ ವೃದ್ಧಾಶ್ರಮ ಆರಂಭಕ್ಕೆ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯ ಬಾಡಿಗೆ ನೆಲೆಯಲ್ಲಾದರೂ ಆಶ್ರಮ ಆರಂಭಿಸುವ ಕುರಿತು ಹಿರಿಯ ನಾಗರಿಕರ ಹಿತರಕ್ಷಣಾ ಸಂಘದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಿರಿಯ ನಾಗರಿಕ ಹಿತರಕ್ಷಣಾ ಸಂಘದ ಅಧ್ಯಕ್ಷ ಜೇವಿಯರ್ ಡಿ’ಸೋಜ ಅವರ ಅಧ್ಯಕ್ಷತೆಯಲ್ಲಿ ಮಾ.9ರಂದು ಪುತ್ತೂರು ನಗರಸಭೆ ಸಮುದಾಯ ಭವನದಲ್ಲಿ ನಡೆದ ಹಿರಿಯ ನಾಗರಿಕರ ಹಿತರಕ್ಷಣಾ ಸಂಘದ ವಾರ್ಷಿಕ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಹಿರಿಯ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜೇವಿಯರ್ ಡಿಸೋಜ ಅವರು ಮಾತನಾಡಿ, ಹಿರಿಯ ನಾಗರಿಕರ ವೃದ್ಧಾಶ್ರಮಕ್ಕಾಗಿ ಕಲ್ಲರ್ಪೆಯಲ್ಲಿ 7 ಸೆಂಟ್ಸ್ ಜಾಗ ಮಂಜೂರಾಗಿದ್ದು, ಅದರಲ್ಲಿ ವೃದ್ಧಾಶ್ರಮ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಅನುದಾನಕ್ಕೆ ಮನವಿ ಮಾಡಬೇಕಾಗಿದೆ. ಈ ನಡುವೆ ಹಿರಿಯ ನಾಗರಿಕರ ಕೋರಿಕೆಯಂತೆ ಸದ್ಯ ಬಾಡಿಗೆ ನೆಲೆಯಲ್ಲಾದರೂ ಕಟ್ಟಡ ಹುಡುಕಿ ವೃದ್ಧಾಶ್ರಮ ಮಾಡುವ ಚಿಂತನೆ ನಮ್ಮ ಮುಂದಿದೆ ಎಂದ ಅವರು, ಹಿರಿಯ ನಾಗರಿಕರಿಗಾಗಿ ಸರಕಾರ ನೀಡಿದ ವಿವಿಧ ಸವಲತ್ತುಗಳ ಪ್ರಯೋಜನ ಪಡೆದುಕೊಳ್ಳಬೇಕು. ಜೊತೆಗೆ ಭದ್ರತೆಗಾಗಿ ಪೊಲೀಸರು ನೀಡುವ ಸಲಹೆಯನ್ನು ಪಾಲಿಸುವಂತೆ ಹಾಗೂ ಸಮಸ್ಯೆ ಬಂದಾಗ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡುವಂತೆ ಅವರು ತಿಳಿಸಿದರು. ಇದೇ ಸಂದರ್ಭ ಹಿರಿಯರಾದ ಮಾಜಿ ಯೋಧ ರಮೇಶ್ ಬಾಬು ಅವರು ಹಿರಿಯ ನಾಗರಿಕರ ವೃದ್ಧಾಶ್ರಮ ಕಟ್ಟಡಕ್ಕಾಗಿ ರೂ. 25ಸಾವಿರ ನೆರವು ನೀಡಿದರು.
80 ವರ್ಷ ಮೇಲ್ಪಟ್ಟವರಿಗೆ ಗೌರವ:
ಸಂಘದ ಸದಸ್ಯರಾಗಿದ್ದು 80ವರ್ಷ ಮೇಲ್ಪಟ್ಟ ವಿಠಲ ಅಚಾರ್ಯ, ರಮೇಶ್ ಬಾಬು, ಗಣಪತಿ ಭಟ್, ಕೊಯಿಲ ಜಗನ್ನಾಥ ರೈ, ಅಬೂಬಕ್ಕರ್, ಶಂಕರ್ ನಾೖಕ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ಯಶೋದಾ ವರದಿ ವಾಚಿಸಿದರು. ಕೋಶಾಧಿಕಾರಿ ಜಯಂತಿ ಲೆಕ್ಕಪತ್ರ ಮಂಡಿಸಿದರು. ಸಂಘದ ಅಧ್ಯಕ್ಷ ಜೇವಿಯರ್ ಡಿಸೋಜ ಸ್ವಾಗತಿಸಿ, ವಂದಿಸಿದರು. ಇತ್ತೀಚೆಗೆ ನಿಧನರಾದ ಸಂಘದ ಮಾಜಿ ಅಧ್ಯಕ್ಷ ಜನಾರ್ಧನ ಮತ್ತು ನಿವೃತ್ತ ಶಿಕ್ಷಕ ವೇಣುಗೋಪಾಲ್ ಅವರಿಗೆ ಕಾರ್ಯಕ್ರಮದ ಆರಂಭದಲ್ಲಿ ಸಂತಾಪ ಸೂಚಿಸಲಾಯಿತು. ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ಆಸ್ಕರ್ ಆನಂದ್, ಮೋಹನ್ ರೈ, ವೇದಾವತಿ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.